ವರಿಷ್ಠರಿಗೆ ಬೆದರಿಕೆ ಹಾಕಿ ಯಡಿಯೂರಪ್ಪ ನನಗೆ ಸಿಎಂ ಸ್ಥಾನ ತಪ್ಪಿಸಿದರು: ಯತ್ನಾಳ ಹೊಸ ಬಾಂಬ್..!

ವಿಜಯಪುರ: ಬಿ.ಎಸ್. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ಬಳಿಕ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮತ್ತೊಂದು ರಾಜಕೀಯ ಬಾಂಬ್‌ ಸಿಡಿಸಿದ್ದಾರೆ.
ನನಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು, ಆದರೆ ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಮುಖ್ಯಮಂತ್ರಿ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಕೆಡಹುತ್ತೇನೆ ಎಂದು ಕೇಂದ್ರದ ನಾಯಕರಿಗೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರು ಎಂದು ಆರೋಪ ಮಾಡಿದ್ದಾರೆ.
ನನಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಯಡಿಯೂರಪ್ಪ ತಪ್ಪಿಸಿದರೂ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಈ ಹಿಂದೆ ಲಾಬಿ ಮಾಡಿ ನಾನು ಕೇಂದ್ರದಲ್ಲಿ ಸಚಿವನಾಗಿರಲಿಲ್ಲ. ಇಲ್ಲಿಯೂ ಮಾಡುವುದಿಲ್ಲ, ಅಷ್ಟು ಕೆಳಮಟ್ಟದ ರಾಜಕಾರಣಿಯೂ ನಾನಲ್ಲ. ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಒಬ್ಬರೇ ಬೊಮ್ಮಾಯಿ ಅವರನ್ನಾ ಮುಖ್ಯಮಂತ್ರಿ ಮಾಡಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಮುಖ್ಯಮಂತ್ರಿಯಾದರೆ ಇವರೆಲ್ಲ ಜೈಲಿಗೆ ಹೋಗ್ತಾರೆ ಎಂಬ ಭಯವಿದೆ. 10 ಸಾವಿರ ಕೋಟಿ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಇದೇ ವೇಳೆ ಯತ್ನಾಳ್ ಆರೋಪ ಮಾಡಿದರು. ಯಡಿಯೂರಪ್ಪ ತಾವು ಶಿಕಾರಿಪುರದ ಮುಖ್ಯಮಂತ್ರಿ ಎಂಬಂತೆ ವರ್ತಿಸಿದರು. ತಮ್ಮ ಭಾಗಕ್ಕೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಈಗ ಜಿಲ್ಲೆಗಳ ಪ್ರವಾಸಕ್ಕೆ ಬರುತ್ತೇನೆಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಗೆ ಬರಲಿ ನಾನೇ ಈ ಕುರಿತು ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಆಗಲು ಬಸವರಾಜ ಬೊಮ್ಮಾಯಿ ಅವರ ಹೆಸರಿಗಿಂತ ಮುಂಚೆಯೇ ನನ್ನ ಹೆಸರೇ ಇತ್ತು:
ರಾಜ್ಯದ ಮುಖ್ಯಮಂತ್ರಿ ಆಗಲು ಬಸವರಾಜ ಬೊಮ್ಮಾಯಿ ಅವರ ಹೆಸರಿಗಿಂತ ಮುಂಚೆಯೇ ನನ್ನ ಹೆಸರೇ ಇತ್ತು. ಆದರೆ ಅದನ್ನು ತಪ್ಪಿಸಿದರು. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ಈ ತಂತ್ರ ಮಾಡಿದ್ದಾರೆ. ನಾನು ಪ್ರಾಮಾಣಿಕ ಇದ್ದೇನೆ, ನಾನೇನಾದರೂ ಮುಖ್ಯಮಂತ್ರಿ ಆಗಿದ್ದರೆ ಇಡೀ ರಾಜ್ಯದಲ್ಲಿ ಹಿಂದುತ್ವದ ಅಲೆ ಏಳುತ್ತಿತ್ತು. ಹಿಂದುತ್ವದ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದರೆ, ಅವರ ಅಸ್ತಿತ್ವಕ್ಕೆ ಧಕ್ಕೆ ಆಗುತ್ತಿತ್ತು ಎಂದು ಯತ್ನಾಳ್ ಹೇಳಿದರು.
ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ನಾನು ಮಂತ್ರಿ ಆಗಲ್ಲ ಎಂಬ ಶೆಟ್ಟರ್ ಹೇಳಿಕೆ ಕುರಿತು ಮಾತನಾಡಿದ ಯತ್ನಾಳ್ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಭಿಮಾನ ಹಾಗೂ ನೈತಿಕತೆ ಬಗ್ಗೆ ಬಹಳ ತಡವಾಗಿ ಜ್ಞಾನೋದಯವಾಗಿದೆ. ಅವರಿಗೆ ಮೊದಲೇ ಜ್ಞಾನೋದಯವಾಗಬೇಕಿತ್ತು ಎಂದರು..

ಪ್ರಮುಖ ಸುದ್ದಿ :-   ದಾಂಡೇಲಿ : ಮಾಡಿಕೊಂಡ ಸಾಲ ತೀರಿಸಲು 20 ದಿನದ ಮಗು ಮಾರಾಟ ಮಾಡಿದ ದಂಪತಿ‌...!

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement