ಮಹತ್ವದ ನಿರ್ಧಾರ.. ಕರ್ನಾಟಕದಲ್ಲಿ ಇನ್ಮುಂದೆ ಜಾತ್ರೆಗೆ ಅವಕಾಶವಿಲ್ಲ, ಮದುವೆ-ಸಮಾರಂಭಗಳಿಗೆ ಪಾಸ್‌ ಕಡ್ಡಾಯ..

ಬೆಂಗಳೂರು: ಸೋಂಕು ಹೆಚ್ಚಳದ ಕಾರಣ ಇನ್ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ. ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳನ್ನೇ ಹೊಣೆಯಾಗಿಸುತ್ತೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯ ನಂತರ ಮಾತನಾಡಿದ ಅವರು, ಸೋಂಕು ಹೆಚ್ಚಳ ಹಿನ್ನಲೆ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. ಒಂದು ವೇಳೆ ಅವಕಾಶ ಕೊಟ್ಟರೆ ಜಿಲ್ಲಾಧಿಕಾರಿ, ಎಸ್‌ಪಿ ಅವರನ್ನು ಹೊಣೆ ಮಾಡಿ ಅವರ ಮೇಲೆಯೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಜನಸಂದಣಿತಯಾಗದಂತೆ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಇನ್ಮುಂದೆ ಮದುವೆ ಸಮಾರಂಭಗಳಿಗೆ ಪಾಸ್ ಪಡೆಯುವುದು ಕಡ್ಡಾಯವಾಗಿದೆ. ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶವಿದ್ದು, ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮದುವೆ ಸಮಾರಂಭಕ್ಕೆ ಮುನ್ನ ಸಮೀಪದ ಠಾಣೆಯಲ್ಲಿ ಪಾಸ್ ಪಡೆಯಬೇಕು ಎಂದು ತಿಳಿಸಿದರು.
ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಪಾಸ್​ ನಿಯಮ ಅನ್ವಯವಿಲ್ಲ. ಇನ್ಮುಂದೆ ನಿಗದಿಯಾಗುವ ಮದುವೆ ಹಾಗೂ ಇತರ ಸಮಾರಂಭಗಳು, ಅವುಗಳಿಗೆ ನಿಗದಿ ಮಾಡುವ ಕಲ್ಯಾಣ ಮಂಟಪಗಳು ಹಾಗೂ ಇತರ ಹಾಲ್‌ಗಳಿಗೆ ಪಾಸ್ ಕಡ್ಡಾಯವಾಗಿದೆ. ರಾಜಕೀಯ ಸಭೆ,ಸಮಾರಂಭಗಳಿಗೂ ಇದು ಅನ್ವಯ. ಇದರ ಜವಾದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಜನರೂ ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲಿಯೂ ಆಕ್ಸಿಜನ್ ಸಮಸ್ಯೆ ಆಗಬಾರದು. ಕೋವಿಡ್ ಸೋಂಕಿರಿಗೆ ಬೆಡ್ ಕೊರತೆ ಆಗಬಾರದು. ಕೊವೀಡ್ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ಕೇಳಿದ್ದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದ ಅವರು, ಕೊವೀಡ್ನಿಂದ ಮೃತಪಟ್ಟವರಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳೊಂದಿಗೆ ಈ ಕುರಿತು ಶನಿವಾರ ಚರ್ಚೆ ನಡೆಸಿ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ. ಬೆಂಗಳೂರಿಗೆ ಸಂಬಂಧಿಸಿದ ಸಭೆಯನ್ನು ಸೋಮವಾರ ಸಭೆ ನಡೆಸಲಾಗುವುದು. ರಾಜಧಾನಿಯಲ್ಲಿ ಸೋಂಕು ಹೆಚ್ಚಳ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಶಾಸಕರು, ಸಂಸದರ ಜತೆ ಚರ್ಚಿಸಿ ಕಠಿಣ ಕ್ರಮ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ ತಿಳಿಸಿದರು.
ಏಪ್ರಿಲ್​ 20ರ ಬಳಿಕ ಮತ್ತಷ್ಟು ಬಿಗಿ ಕ್ರಮ ಮಾಡುವ ಕುರಿತು ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಗುಣಮುಖರಾದ ನಂತರ ಮತ್ತೆ ಸಭೆ ನಡೆಸಿ, ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಗೃಹ ಸಚಿವರು ತಿಳಿಸಿದರು.
ಸೋಂಕಿನ ತೀವ್ರತೆ ಗಮನಿಸಿದರೆ ಕಳೆದ ಬಾರಿಗಿಂತ ಈ ಸಲ ಪ್ರಕರಣಗಳು ಮತಷ್ಟು ಹೆಚ್ಚಾಗಬಹುದು. ಬೇರೆ ದೇಶಗಳಲ್ಲಿ ಮೂರನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ನಾವು ಆ ಹಂತಕ್ಕೆ ಹೋಗದಂತೆ ಯುದ್ಧೋಪಾದಿಯಲ್ಲಿ ಕಾರ್ಯ ಮಾಡಬೇಕು. ಎರಡನೇ ಅಲೆ ನಿಯಂತ್ರಿಸಬೇಕು ಸಿಬ್ಬಂದಿಗೆ ವೇತನ ಸಮಸ್ಯೆ ಆಗಬಾರದು. ಕೋವಿಡ್ ರೋಗಿಗಳಿಗೂ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗಬಾರದು ಎಂದರು.
ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಮುಖ್ಯಮಂತ್ರಿಗಳು ಬೇಗ ಗುಣಮುಖರಾಗಿ ಬಂದ ಬಳಿಕ ಬೆಂಗಳೂರು ಶಾಸಕರ ಜೊತೆ ಸಭೆ ಮಾಡಬೇಕು. ನಂತರ ಪ್ರತ್ಯೇಕ ಮಾರ್ಗಸೂಚಿ ಕುರಿತು ನಿರ್ಧಾರ ಮಾಡುತ್ತೇವೆ. ಬೆಂಗಳೂರಿನಲ್ಲಿ ಎಂಟು ವಲಯ‌ಮಾಡಿದ್ದೇವೆ. ಅಲ್ಲಿ ನೋಡಲ್ ಆಫೀಸರ್ ನೇಮಕ‌ ಮಾಡಿದ್ದೇವೆ. ಎಲ್ಲಿಯೂ ‌ಬೆಡ್ ಸಮಸ್ಯೆ ಎದುರಾಗಿಲ್ಲ. ಅಂತಹ ಆಸ್ಪತ್ರೆಗಳಿದ್ದರೆ ಕೂಡಲೇ ನೋಡಲ್‌ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸೂಚಿಸಿದರು..

ಪ್ರಮುಖ ಸುದ್ದಿ :-   ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement