
ಚಂದ್ರಯಾನ-3 ಉಡಾವಣೆಗೆ ಮುಂಚಿತವಾಗಿ ದೈವಿಕ ಆಶೀರ್ವಾದ ಪಡೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ತಂಡವು ಜುಲೈ 13ರ ಗುರುವಾರ ಬೆಳಿಗ್ಗೆ ತಿರುಪತಿ ವೆಂಕಟಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿತು. ತಮ್ಮೊಂದಿಗೆ ಬಾಹ್ಯಾಕಾಶ ನೌಕೆಯ ಚಿಕಣಿ ಮಾದರಿಯನ್ನು ಹೊತ್ತುಕೊಂಡು ಬಂದಿದ್ದ ತಂಡವು ಯಶಸ್ವಿ ಕಾರ್ಯಾಚರಣೆಗಾಗಿ ತಿರುಪತಿ ದೇವಾಲಯಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿತು.
ಸುಮಾರು ಎಂಟು ವಿಜ್ಞಾನಿಗಳ ತಂಡ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಒಳಗೆ ಹೋಗುತ್ತಿರುವುದು ಕಂಡುಬಂದಿದೆ. ತಂಡದ ಸದಸ್ಯರಲ್ಲಿ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಂತನು ಭಟ್ವಾಡೇಕರ್ ಕೂಡ ಇದ್ದರು.
ಚಂದ್ರಯಾನ-3 ಬಾಹ್ಯಾಕಾಶ ನೌಕೆ ಜುಲೈ 14ರ ಶುಕ್ರವಾರ ಮಧ್ಯಾಹ್ನ 2:50ಕ್ಕೆ ಉಡಾವಣೆ ಆರಂಭಿಸಲಿದೆ. LVM3 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆಯಾಗುವ ಈ ನೌಕೆಯು ಚಂದ್ರನ ಮೇಲ್ಮೈಯನ್ನು ತಲುಪುವ ಮೊದಲು ಸುಮಾರು 3,84,000 ಕಿಮೀ ದೂರ ಕ್ರಮಿಸಲಿದೆ. ಚಂದ್ರನ ಮೇಲೆ ಈ ನೌಕೆಯು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಆದರೆ ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ. ಇಸ್ರೇಲ್ ಮತ್ತು ಭಾರತದ ಕಾರ್ಯಾಚರಣೆಗಳು 2019 ರಲ್ಲಿ ಕ್ರ್ಯಾಶ್-ಲ್ಯಾಂಡ್ ಆಗಿದ್ದರೆ, ಜಪಾನ್ನಿಂದ ಲ್ಯಾಂಡರ್-ರೋವರ್ ಮತ್ತು ಯುಎಇಯಿಂದ ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು 2022ರಲ್ಲಿ ವಿಫಲವಾಯಿತು. ಇಸ್ರೋ ವಿಜ್ಞಾನಿಗಳು ಸರಣಿ ಪರೀಕ್ಷೆಗಳ ನಂತರ ಲ್ಯಾಂಡರ್ನ ವಿನ್ಯಾಸವನ್ನು ಸುಧಾರಿಸಿದ್ದಾರೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವುದು ಈ ಮಿಷನ್ನ ಉದ್ದೇಶವಾಗಿದೆ, ಬಾಹ್ಯಾಕಾಶ ನೌಕೆಯು ಮೂರು ಪ್ರಮುಖ ಘಟಕಗಳನ್ನು ಒಳಗೊಂಡಿದೆ: 2,148 ಕೆಜಿ ತೂಕದ ಪ್ರೊಪಲ್ಷನ್ ಮಾಡ್ಯೂಲ್, 1,723.89 ಕೆಜಿ ತೂಕದ ಲ್ಯಾಂಡರ್ ಮತ್ತು 26 ಕೆಜಿ ತೂಕದ ರೋವರ್ ಅನ್ನು ಒಳಗೊಂಡಿದೆ.

ಇಸ್ರೋ ವಿಜ್ಞಾನಿಗಳು ಉಡಾವಣೆಗೆ ಮುನ್ನ ಉಪಗ್ರಹಗಳ ಮಾದರಿ (ಪ್ರತಿಕೃತಿ)ಯನ್ನು ದೇವಾಲಯಗಳಿಗೆ ಆಶೀರ್ವಾದಕ್ಕಾಗಿ ಕೊಂಡೊಯ್ಯುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವರದಿಗಳ ಪ್ರಕಾರ, ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅವರು 1994 ರಿಂದ 2003 ರವರೆಗೆ ಒಂಬತ್ತು ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿದ್ದಾಗ ಈ ಪದ್ಧತಿಯನ್ನು ಪ್ರಾರಂಭಿಸಿದರು. 2003 ರಿಂದ ಸುಮಾರು ಆರು ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿದ್ದ ಅವರ ಉತ್ತರಾಧಿಕಾರಿ ಡಾ ಜಿ ಮಾಧವನ್ ನಾಯರ್ ಅವರು ಪದ್ಧತಿಯನ್ನು ಮುಂದುವರೆಸಿದರು.
ಚೆಂಗಾಲಮ್ಮ ದೇವಸ್ಥಾನದಲ್ಲಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಪ್ರಾರ್ಥನೆ
ಚಂದ್ರಯಾನ-3 ಮಿಷನ್ ಶುಕ್ರವಾರ ಉಡಾವಣೆಗೆ ಸಜ್ಜಾಗಿದ್ದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರು ಗುರುವಾರ ಸುಳ್ಳೂರುಪೇಟೆಯ ಶ್ರೀ ಚೆಂಗಾಲಮ್ಮ ಪರಮೇಶ್ವರಿಣಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕಪ್ಪು ಟೀ ಶರ್ಟ್ ಧರಿಸಿ, ಸೋಮನಾಥ ಶ್ರೀಹರಿಕೋಟಾದಿಂದ ಪಶ್ಚಿಮಕ್ಕೆ 22 ಕಿಮೀ ದೂರದಲ್ಲಿರುವ ತಿರುಪತಿ ಜಿಲ್ಲೆಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿ ಬಾಹ್ಯಾಕಾಶ ನಿಲ್ದಾಣವಿದೆ.
“ನನಗೆ ಚೆಂಗಾಲಮ್ಮ ದೇವಿಯ ಆಶೀರ್ವಾದ ಬೇಕು.. ಈ ಕಾರ್ಯಾಚರಣೆಯ ಯಶಸ್ಸಿಗೆ ಪ್ರಾರ್ಥಿಸಲು ಮತ್ತು ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಸೋಮನಾಥ ಸುದ್ದಿಗಾರರಿಗೆ ತಿಳಿಸಿದರು.
“ಚಂದ್ರಯಾನ-3 ನಾಳೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಎಲ್ಲವೂ ಸರಿಯಾಗಿ ನಡೆಯುತ್ತದೆ ಮತ್ತು ಆಗಸ್ಟ್ 23 ರಂದು ಅದು ಚಂದ್ರನ ಮೇಲೆ ಇಳಿಯುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.
ಸೋಮನಾಥ ಅವರ ಪ್ರಕಾರ, ಇಸ್ರೋದ ಮುಂದಿನ ಉಡಾವಣೆ ಜುಲೈ ಅಂತ್ಯದಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಮೂಲಕ ವಾಣಿಜ್ಯ ಉಪಗ್ರಹವಾಗಲಿದೆ.
ಸತೀಶ ಧವನ್ ಬಾಹ್ಯಾಕಾಶ ಕೇಂದ್ರ (SDSC) ಅಥವಾ ಶ್ರೀಹರಿಕೋಟಾ ಶ್ರೇಣಿಯ (ಶಾರ್) ವಿಜ್ಞಾನಿಗಳು ಮತ್ತು ಇತರ ಸದಸ್ಯರು ಪ್ರತಿ ಉಪಗ್ರಹವನ್ನು ಉಡಾವಣೆ ಮಾಡುವ ಮೊದಲು ಚೆಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.


ನಿಮ್ಮ ಕಾಮೆಂಟ್ ಬರೆಯಿರಿ