ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಪರೀಕ್ಷೆಯಲ್ಲಿ ಉತ್ತಮ ಸಾಧನೆ: 15 ವರ್ಷದ ಮಗನಿಗೆ 1.62 ಕೋಟಿ ರೂ. ಬೆಲೆಯ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ತಂದೆ

ಕೋಲ್ಕತ್ತಾ : ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಖುಷಿಯಲ್ಲಿ 15 ವರ್ಷದ ಮಗನಿಗೆ ತಂದೆಯೊಬ್ಬರು ಬರೋಬ್ಬರಿ 1.62 ಕೋಟಿ ರೂ. ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯು (BMW) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಈ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದರೂ ಬಾಲಕನಿಗೆ ಸದ್ಯ ಅದರ ಚಾಲಕನ ಸೀಟಿನಲ್ಲಿ ಕೂರುವಂತಿಲ್ಲ. ಏಕೆಂದರೆ, ಆತನಿಗೆ ಇನ್ನೂ 18 ವರ್ಷವಾಗಿಲ್ಲ, ಚಾಲನಾ ಪರವಾನಗಿಯೂ (Driving Licence) ಇಲ್ಲ.
ಪಶ್ಚಿಮ ಬಂಗಾಳದ ಪೂರ್ವ ಬರ್ಧಮಾನ್ ಜಿಲ್ಲೆಯ ಪರಾಜ್ ಗ್ರಾಮದ ಮೊಹಮ್ಮದ್ ತಲ್ಹಾ ಎಂಬ 15 ವರ್ಷದ ಬಾಲಕ ಈ ದುಬಾರಿ ಉಡುಗೊರೆ ಪಡೆದಿದ್ದಾನೆ. ಆತನ ತಂದೆ ಶಮ್ಸುದ್ದೀನ್ ಮಿಡ್ಯಾ ಉದ್ಯಮಿಯಾಗಿದ್ದು, ಗಾಲ್ಸಿಯಲ್ಲಿ ಮೂರು ಅಕ್ಕಿ ಗಿರಣಿಗಳನ್ನು ಹೊಂದಿದ್ದಾರೆ. ಅಲ್ಲದೆ, ವಿಯೆಟ್ನಾಂ, ಮಲೇಷ್ಯಾ, ಸಿಂಗಾಪುರ ಮತ್ತು ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತಾರೆ.
ತಲ್ಹಾ ಬಹಳ ದಿನಗಳಿಂದ ತನಗೆ ಬಿಎಂಡಬ್ಲ್ಯು ಕಾರು ಬೇಕೆಂದು ತಂದೆಯ ಬಳಿ ಹೇಳಿಕೊಳ್ಳುತ್ತಿದ್ದ. ಇದೀಗ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಮಗ ಉತ್ತಮ ಸಾಧನೆ ಮಾಡಿದ್ದರಿಂದ ಸಂತಸಗೊಂಡ ತಂದೆ ಆತನ ಬಹುದಿನಗಳ ಆಸೆಯನ್ನು ಈಡೇರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಮುಂಬೈಗೆ ತೆರಳಿದ ಅವರು, ಅಂಧೇರಿಯಲ್ಲಿರುವ ಬಿಎಂಡಬ್ಲ್ಯು ಶೋರೂಂನಿಂದ ಬಿಎಂಡಬ್ಲ್ಯು ಎಂ4 ಕಾಂಪಿಟಿಷನ್ ಎಕ್ಸ್‌ಡ್ರೈವ್ (BMW M4 Competition xDrive) ಕಾರನ್ನು ಖರೀದಿಸಿದ್ದಾರೆ. ಬರೋಬ್ಬರಿ 1.62 ಕೋಟಿ ರೂ. ಮೌಲ್ಯದ ಈ ಕಾರು ಶುಕ್ರವಾರ ವಿಶೇಷ ಕಂಟೇನರ್‌ನಲ್ಲಿ ಪರಾಜ್ ಗ್ರಾಮಕ್ಕೆ ಆಗಮಿಸಿದೆ.
ಆದರೆ, ಮಗನಿಗೆ ಕಾರು ಕೊಡಿಸಿದ ಮಾತ್ರಕ್ಕೆ ಆತನ ಕೈಗೆ ಸ್ಟೀರಿಂಗ್ ನೀಡಲು ತಂದೆ ಸಿದ್ಧರಿಲ್ಲ. ತಲ್ಹಾಗೆ ಇನ್ನೂ 15 ವರ್ಷ ವಯಸ್ಸಾಗಿರುವುದರಿಂದ ಮತ್ತು ಚಾಲನಾ ಪರವಾನಗಿ ಇಲ್ಲದಿರುವುದರಿಂದ, ಪರವಾನಗಿ ಪಡೆಯುವವರೆಗೂ ಕಾರು ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ತಂದೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸದ್ಯ ತಂದೆಯೇ ಕಾರು ಚಲಾಯಿಸಲಿದ್ದು, ಮಗ ಪ್ರಯಾಣಿಕನ ಸೀಟಿನಲ್ಲಿ ಕುಳಿತು ಕಾರಿನ ಸವಾರಿ ಆನಂದಿಸಲಿದ್ದಾನೆ.
ಸ್ವತಃ ಐಷಾರಾಮಿ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶಮ್ಸುದ್ದೀನ್ ಮಿಡ್ಯಾ ಅವರ ಕಾರು ಸಂಗ್ರಹದಲ್ಲಿ ಈಗಾಗಲೇ ರೇಂಜ್ ರೋವರ್ (Range Rover), ಮರ್ಸಿಡಿಸ್ ಬೆಂಜ್ (Mercedes-Benz) ಹಾಗೂ ಡಿಫೆಂಡರ್ (Defender) ಕಾರುಗಳಿವೆ. ಇದೀಗ ಬಿಎಂಡಬ್ಲ್ಯು ಎಂ4 ಅವರ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆಯಾಗಿದೆ.
ಅವರ ಹಲವು ಕಾರುಗಳ ನೋಂದಣಿ ಸಂಖ್ಯೆಯ ಕೊನೆಯ ಮೂರು ಅಂಕಿಗಳು ‘555’ ಆಗಿರುವುದು ಮತ್ತೊಂದು ವಿಶೇಷ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಕಾರುಗಳ ನೋಂದಣಿ ಸಂಖ್ಯೆಯಲ್ಲಿಯೂ ಇದೇ ರೀತಿಯ ವಿಶೇಷ ಅಂಕಿಗಳನ್ನು ಕಾಣಬಹುದು.
ಶಮ್ಸುದ್ದೀನ್ ಅವರ ಯಶಸ್ಸಿನ ಹಿಂದಿನ ಹಾದಿಯೂ ಅಷ್ಟೇ ಕುತೂಹಲಕಾರಿಯಾಗಿದೆ. ಇಂದು ಮೂರು ಅಕ್ಕಿ ಗಿರಣಿಗಳ ಮಾಲೀಕರಾಗಿರುವ ಅವರು, ಆರಂಭದಲ್ಲಿ ಮುಂಬೈನಲ್ಲಿ ಸಾಮಾನ್ಯ ಕಾರ್ಮಿಕನಾಗಿ ದುಡಿದಿದ್ದರು. 2003ರಲ್ಲಿ ಉದ್ಯೋಗ ಅರಸಿ ಮುಂಬೈಗೆ ತೆರಳಿದ್ದ ಅವರು, ಅಲ್ಲಿನ ಚಿತ್ರರಂಗದಲ್ಲಿ ಲೈಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. 2010ರಲ್ಲಿ ಸ್ವಗ್ರಾಮಕ್ಕೆ ಮರಳಿದ ಬಳಿಕ ಸ್ವಂತ ಉದ್ಯಮ ಆರಂಭಿಸಿ, ಹಂತ ಹಂತವಾಗಿ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ.
ಮಗನಿಗೆ ಬಿಎಂಡಬ್ಲ್ಯು ಖರೀದಿಸಿದ ಬಗ್ಗೆ ಮಾತನಾಡಿರುವ ಶಮ್ಸುದ್ದೀನ್, “ಬಹಳ ಹಿಂದೆಯೇ ಆತ ನನ್ನ ಬಳಿ ಬಂದು, ‘ ನನಗೆ ಬಿಎಂಡಬ್ಲ್ಯು ಕಾರು ಬೇಕು’ ಎಂದು ಹೇಳಿದ್ದ. ಹಾಗಾಗಿ ಈಗ ಆತನಿಗಾಗಿ ಬಿಎಂಡಬ್ಲ್ಯು ಖರೀದಿಸಿದ್ದೇನೆ” ಎಂದು ಹೇಳಿದ್ದಾರೆ.
Do you like this personality?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement