ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ನಿಯಂತ್ರಕ ಸೆಬಿ ತನಿಖೆಗೆ ಸುಪ್ರೀಂಕೋರ್ಟ್ ಬೆಂಬಲ, ಎಸ್‌ಐಟಿ ತನಿಖೆಗೆ ನಕಾರ

ನವದೆಹಲಿ: ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯಲ್ಲಿ ಅದಾನಿ ಕಂಪನಿ ಸಮೂಹದ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ ಅಥವಾ ಪರ್ಯಾಯ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಲು ಅಥವಾ ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ನಿಯೋಜಿತ ಕಾಯಿದೆ ರೂಪಿಸುವಲ್ಲಿ ಸೆಬಿಯ ನಿಯಂತ್ರಣ ವ್ಯಾಪ್ತಿಯನ್ನು ಪ್ರವೇಶಿಸಲು ಸುಪ್ರೀಂ ಕೋರ್ಟ್‌ಗೆ ಇರುವ ಅಧಿಕಾರ ಸೀಮಿತವಾಗಿದೆ. ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿ ಯಾವುದೇ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸಲು ಮಾತ್ರ ಇದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
ಸೆಬಿಯ ತನಿಖಾ ಅಧಿಕಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಪೀಠವು, ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ 24 ಪ್ರಕರಣಗಳಲ್ಲಿ 22 ರಲ್ಲಿ ಸೆಬಿ ಈಗಾಗಲೇ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಗಮನಿಸಿದೆ.

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

ಪ್ರಸ್ತುತ ಪ್ರಕರಣದಲ್ಲಿ, ಸೆಬಿಯಿಂದ ಯಾವುದೇ ನಿಯಂತ್ರಕ ವೈಫಲ್ಯವಿಲ್ಲ. ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಇತರ ತನಿಖಾ ಸಂಸ್ಥೆಗೆ ವರ್ಗಾಯಿಸುವುದನ್ನು ಸಮರ್ಥಿಸುವುದಿಲ್ಲ. ಪತ್ರಿಕಾ ವರದಿಗಳ ಆಧಾರದ ಮೇಲೆ ಸೆಬಿ ತನ್ನ ಕಾರ್ಯ ಮುಂದುವರೆಸಬೇಕು ಎಂದು ನಿರೀಕ್ಷಿಸಲಾಗದು ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಬೇರೆ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬ ಮನವಿಯನ್ನು ಅದು ತಿರಸ್ಕರಿಸಿತು.
ಪ್ರಕರಣದ ತನಿಖೆಯನ್ನು ವರ್ಗಾಯಿಸಬೇಕು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಉದ್ದೇಶಪೂರ್ವಕವಾಗಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಮಾತ್ರ ಅಂತಹ ಮನವಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಆದರೂ ಪ್ರಕರಣದ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ನ್ಯಾಯಾಲಯ ಸೆಬಿಗೆ ಆದೇಶಿಸಿದೆ.

ಷೇರಿನ ಬೆಲೆಗಳನ್ನು ಅಕ್ರಮ ಮಾರ್ಗದ ಮೂಲಕ ಹೆಚ್ಚಿಸುವ ಮೂಲಕ ಅದಾನಿ ಸಂಸ್ಥೆ ವಂಚನೆ ಎಸಗಿದೆ ಎಂದು ಆರೋಪಿಸಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿತ್ತು. ಹಿಂಡೆನ್‌ ಬರ್ಗ್‌ ನೀಡಿದ ವರದಿಯಿಂದಾಗಿ ಅದಾನಿ ಕಂಪೆನಿಗಳ ಮೌಲ್ಯ 100 ಶತಕೋಟಿ ಡಾಲರ್‌ ಕುಸಿತ ಕಂಡಿತು ಎಂದು ವರದಿಯಾಗಿತ್ತು.
ಭಾರತೀಯ ಷೇರು ನಿಯಂತ್ರಣ ಮಂಡಳಿ ಕಾಯಿದೆಗೆ (ಸೆಬಿ ಕಾಯಿದೆ) ಮಾಡಲಾದ ಬದಲಾವಣೆಗಳು ಅದಾನಿ ಸಮೂಹದ ಅಕ್ರಮಗಳಿಗೆ ರಕ್ಷಾಕವಚವಾಗಿವೆ ಎಂದು ಆರೋಪಿಸಿದ ಮನವಿಯೂ ಸೇರಿದಂತೆ ವಿವಿಧ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ ತಜ್ಞರ ಸಮಿತಿಯನ್ನು ರಚಿಸಿತ್ತು. ತಜ್ಞರ ಸಮಿತಿಯು ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ಕಡೆಯಿಂದ ಯಾವುದೇ ಮೇಲ್ನೋಟದ ಲೋಪ ಕಂಡುಬಂದಿಲ್ಲ ಎಂದು ಹೇಳಿತ್ತು.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement