
ನವದೆಹಲಿ: ಬುಧವಾರ (ಜನವರಿ 28) ಬೆಳಿಗ್ಗೆ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ವ್ಯಕ್ತಿಗಳು ಸಾವಿಗೀಡಾಗಿದ್ದು, ರಾಜಕೀಯ ಮುಖಂಡರು ಮತ್ತು ಪ್ರಮುಖ ವ್ಯಕ್ತಿಗಳು ಪ್ರಾಣ ಕಳೆದುಕೊಂಡ ಇತರ ಪ್ರಮುಖ ಅಪಘಾತಗಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಎನ್‌ಸಿಪಿ ನಾಯಕ ಅಜಿತ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಪುಣೆಯ ಬಾರಾಮತಿ ಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅದು ಪತನಗೊಂಡಿದೆ.
ವಿಮಾನ ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಉನ್ನತ ನಾಯಕರು ಮತ್ತು ಪ್ರಮುಖ ವ್ಯಕ್ತಿಗಳ ಪಟ್ಟಿ ಇಲ್ಲಿದೆ:
ಹೋಮಿ ಭಾಭಾ (1966) : ಭಾರತದ ಪರಮಾಣು ವಿಜ್ಞಾನದ ಪ್ರವರ್ತಕ ಹಾಗೂ ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಭಾಭಾ ಜನವರಿ 24, 1966 ರಂದು ಏರ್ ಇಂಡಿಯಾ ಫ್ಲೈಟ್ 101 ರಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದರು. ಜಿನೀವಾ ವಾಯು ಸಂಚಾರ ನಿಯಂತ್ರಣದ ಜೊತೆಗಿನ ತಪ್ಪು ಸಂವಹನದಿಂದಾಗಿ ವಿಮಾನವು ಸ್ವಿಸ್ ಆಲ್ಪ್ಸ್‌ನ ಮಾಂಟ್ ಬ್ಲಾಂಕ್‌ಗೆ ಅಪ್ಪಳಿಸಿತ್ತು.
ಸಂಜಯ ಗಾಂಧಿ (1980) : ಕಾಂಗ್ರೆಸ್ ನಾಯಕ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ ಗಾಂಧಿ ಜೂನ್ 23, 1980 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ಅವರು ವೈಮಾನಿಕ ಸಾಹಸ ಮಾಡಲು ಪ್ರಯತ್ನಿಸುತ್ತಿದ್ದಾಗ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿತು.

ಮಾಧವರಾವ್ ಸಿಂಧಿಯಾ (2001) : ಮಾಜಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಸೆಪ್ಟೆಂಬರ್ 30, 2001 ರಂದು ಕಾನ್ಪುರದಲ್ಲಿ ರಾಜಕೀಯ ರ್ಯಾಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ವಿಮಾನ ಅಪಘಾತದಲ್ಲಿ ನಿಧನರಾದರು. ಉತ್ತರ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ 10 ಆಸನಗಳ ಖಾಸಗಿ ವಿಮಾನ ಅಪಘಾತಕ್ಕೀಡಾಗಿತ್ತು.
ಜಿಎಂಸಿ ಬಾಲಯೋಗಿ (2002) : ಲೋಕಸಭಾ ಸ್ಪೀಕರ ಆಗಿದ್ದ ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ ಅವರನ್ನು ಕರೆದೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಮಾರ್ಚ್ 3, 2002 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿಯ ಕೊಳಕ್ಕೆ ಅಪ್ಪಳಿಸಿತ್ತು.
ಸಿಪ್ರಿಯನ್ ಸಂಗ್ಮಾ (2004) : ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಮತ್ತು ಇತರ ಒಂಬತ್ತು ಮಂದಿ, ಪವನ್ ಹನ್ಸ್ ಹೆಲಿಕಾಪ್ಟರ್‌ನಲ್ಲಿ ಗುವಾಹತಿಯಿಂದ ಶಿಲ್ಲಾಂಗ್‌ಗೆ ಹೋಗುತ್ತಿದ್ದಾಗ, ಸೆಪ್ಟೆಂಬರ್ 22, 2004 ರಂದು ರಾಜ್ಯ ರಾಜಧಾನಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಬಾರಾಪಾನಿ ಸರೋವರದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಸಾವಿಗೀಡಾದರು.
ಕೆ ಎಸ್ ಸೌಮ್ಯ (2004) : ಸೌಂದರ್ಯ ಎಂದೇ ಜನಪ್ರಿಯರಾಗಿದ್ದ ದಕ್ಷಿಣ ಭಾರತದ ಪ್ರಸಿದ್ಧ ನಟಿ ಕೆ ಎಸ್ ಸೌಮ್ಯ, ಏಪ್ರಿಲ್ 17, 2004 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಮೃತಪಟ್ಟಿದ್ದರು. “ಸೂರ್ಯವಂಶಂ” ನಟಿ ತನ್ನ ಸಹೋದರನೊಂದಿಗೆ ಬೆಂಗಳೂರಿನಿಂದ ಕರೀಂನಗರಕ್ಕೆ ಹೋಗುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿತ್ತು.
ಓ ಪಿ ಜಿಂದಾಲ್ ಮತ್ತು ಸುರೇಂದರ ಸಿಂಗ್ (2005) : ಕೈಗಾರಿಕೋದ್ಯಮಿ ಮತ್ತು ಹರಿಯಾಣ ಸಚಿವ ಓಂ ಪ್ರಕಾಶ ಜಿಂದಾಲ್ 2005 ರಲ್ಲಿ ಕೃಷಿ ಸಚಿವ ಸುರೇಂದರ ಸಿಂಗ್ ಅವರ ಜೊತೆ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಅವರ ಹೆಲಿಕಾಪ್ಟರ್ ದೆಹಲಿಯಿಂದ ಚಂಡೀಗಢಕ್ಕೆ ಹೋಗುವ ಮಾರ್ಗದಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅಪಘಾತಕ್ಕೀಡಾಯಿತು.
ವೈ ಎಸ್ ರಾಜಶೇಖರ ರೆಡ್ಡಿ (2009) : ವೈಎಸ್ಆರ್ ಎಂದೇ ಜನಪ್ರಿಯರಾಗಿದ್ದ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ (2009), ಸೆಪ್ಟೆಂಬರ್ 2, 2009 ರಂದು ಅವರ ಬೆಲ್ 430 ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಟ್ಟ ಹವಾಮಾನದಿಂದಾಗಿ ದಟ್ಟವಾದ ನಲ್ಲಮಲ ಕಾಡಿನಲ್ಲಿ ಅಪಘಾತಕ್ಕೀಡಾಗಿ ನಿಧನರಾದರು.
ದೋರ್ಜಿ ಖಂಡು (2011) : ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಮತ್ತು ಇತರ ನಾಲ್ವರು ಏಪ್ರಿಲ್ 30, 2011 ರಂದು ತವಾಂಗ್‌ನಿಂದ ಇಟಾನಗರಕ್ಕೆ ಹೋಗುತ್ತಿದ್ದಾಗ ಅವರಿದ್ದ ಹೆಲಿಕಾಪ್ಟರ್ ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ ಸಾವಿಗೀಡಾದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್ (2021) : ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8, 2021 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ತಮ್ಮ ಪತ್ನಿ ಮತ್ತು ಇತರ 11 ಜನರೊಂದಿಗೆ ಸುಲೂರಿನಿಂದ ವೆಲ್ಲಿಂಗ್ಟನ್‌ಗೆ ಹೋಗುತ್ತಿದ್ದಾಗ ತಮಿಳುನಾಡಿನ ಕೂನೂರ್ ಬಳಿ ಹೆಲಿಕಾಪ್ಟರ್ ಪತನಗೊಂಡಿತ್ತು.
ವಿಜಯ ರೂಪಾನಿ (2025) : ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದರು. ಬೋಯಿಂಗ್ 787-8 ಡ್ರೀಮ್‌ಲೈನರ್ (AI171) ನಲ್ಲಿದ್ದ 242 ಪ್ರಯಾಣಿಕರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮತ್ತು ನೆಲದ ಮೇಲೆ ಇದ್ದ ಎಂಬಿಬಿಎಸ್ (MBBS) ವಿದ್ಯಾರ್ಥಿಗಳು ಸೇರಿದಂತೆ 20 ಕ್ಕೂ ಹೆಚ್ಚು ಜನರು ವಿಮಾನ ಅಪಘಾತದಲ್ಲಿ ಸಾವಿಗೀಡಾದರು.


ನಿಮ್ಮ ಕಾಮೆಂಟ್ ಬರೆಯಿರಿ