ಕಟಕ್: ಪ್ರೀತಿ ಎಂದರೆ ಕೇವಲ ಮಾತುಗಳಲ್ಲ, ಅದು ಅಚಲವಾದ ನಂಬಿಕೆ ಮತ್ತು ತ್ಯಾಗ ಎಂಬದಕ್ಕೆ ಒಡಿಶಾದ ಸಂಬಲಪುರದ 75 ವರ್ಷದ ವೃದ್ಧ ಬಾಬು ಲೋಹರ್ ಸಾಕ್ಷಿಯಾಗಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತನ್ನ 70 ವರ್ಷದ ಪತ್ನಿ ಜ್ಯೋತಿ ಅವರನ್ನು ಗುಣಪಡಿಸಲು, ಹಣದ ಕೊರತೆಯ ನಡುವೆಯೂ ದೃತಿಗೆಡದ ಈ ವೃದ್ಧ ಪತಿಯ ಸಾಹಸಗಾಥೆ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ.
ಸಂಬಲಪುರ ಟು ಕಟಕ್…ಸಾಹಸಮಯ ಪಯಣ
ಸ್ಥಳೀಯ ಆಸ್ಪತ್ರೆಗಳಲ್ಲಿ ಪತ್ನಿಯ ಆರೋಗ್ಯ ಸುಧಾರಿಸದಿದ್ದಾಗ, ಬಾಬು ಲೋಹರ್ ಆಕೆಯನ್ನು ಉತ್ತಮ ಚಿಕಿತ್ಸೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಕೈಯಲ್ಲಿ ಹಣವಿರಲಿಲ್ಲ, ಆಂಬ್ಯುಲೆನ್ಸ್ ಅನ್ನು ಬಾಡಿಗೆ ಪಡೆಯಲು ಶಕ್ತಿ ಇರಲಿಲ್ಲ. ಆಗ ಅವರು ಆರಿಸಿಕೊಂಡಿದ್ದು ತಮ್ಮ ಬದುಕಿನ ಆಧಾರವಾಗಿದ್ದ ‘ಟ್ರೋಲಿ ರಿಕ್ಷಾ’ವನ್ನು.
ತನ್ನ ಪತ್ನಿಯನ್ನು ಟ್ರೋಲಿ ಮೇಲೆ ಮಲಗಿಸಿಕೊಂಡು, ಒಂದು ಕಂಬಳಿ, ಬೆಡ್‌ಶೀಟ್ ಮತ್ತು ಸೊಳ್ಳೆ ಪರದೆಯೊಂದಿಗೆ ಬಾಬು ಲೋಹರ್ ಬರೋಬ್ಬರಿ 350 ಕಿಲೋಮೀಟರ್ ದೂರದ ಪಯಣ ಬೆಳೆಸಿದರು. ಸುಡುವ ಬಿಸಿಲು, ಧೂಳು ಮತ್ತು ದೈಹಿಕ ಬಳಲಿಕೆಯನ್ನು ಲೆಕ್ಕಿಸದೆ ಹಗಲಿಡೀ ಗಾಡಿ ಎಳೆದು, ರಾತ್ರಿ ವೇಳೆ ಅಂಗಡಿಗಳ ಮುಂದೆ ಅಥವಾ ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದರು. ದಾರಿಯುದ್ದಕ್ಕೂ ಜನರ ದಯೆಯಿಂದ ಸಿಕ್ಕ ಅಲ್ಪಸ್ವಲ್ಪ ಆಹಾರವೇ ಇವರಿಗೆ ಶಕ್ತಿಯಾಗಿತ್ತು.
ಆಸ್ಪತ್ರೆಯಲ್ಲೂ ನಿಲ್ಲದ ಹೋರಾಟ
ಕಟಕ್ ತಲುಪಿದ ನಂತರ ಪತ್ನಿ ಜ್ಯೋತಿ ಎರಡು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಸಮಯದಲ್ಲಿಯೂ ಬಾಬು ಲೋಹರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪತ್ನಿಯ ಚಿಕಿತ್ಸೆ ಮತ್ತು ಹಸಿವು ನೀಗಿಸಿಕೊಳ್ಳಲು ಅದೇ ನಗರದಲ್ಲಿ ಟ್ರೋಲಿ ಎಳೆಯುತ್ತಾ, ಪ್ಲಾಸ್ಟಿಕ್ ಬಾಟಲಿಗಳನ್ನು ಆಯ್ದು ಮಾರಿ ಬದುಕು ಸಾಗಿಸಿದರು.
ಜನವರಿ 19 ರಂದು ಪತ್ನಿ ಬಿಡುಗಡೆಯಾದ ನಂತರ, ಅದೇ ಉತ್ಸಾಹದಲ್ಲಿ ಮರಳಿ ಮನೆಗೆ ಹೊರಟಿದ್ದ ಈ ದಂಪತಿಗೆ ಚೌದ್ವಾರ್ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟ್ರೋಲಿ ಜಖಂಗೊಂಡು, ಜ್ಯೋತಿಯವರು ಗಾಯಗೊಂಡರು. ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು.
“ಅವಳು ನನ್ನ ಜೀವ, ಇದು ನನ್ನ ಜೀವನ”
ಪೊಲೀಸರು ಈ ದಂಪತಿಯ ಪರಿಸ್ಥಿತಿಯನ್ನು ಕಂಡು, ಅವರನ್ನು ಎಸಿ ಬಸ್ಸಿನಲ್ಲಿ ಸಂಬಲಪುರಕ್ಕೆ ಕಳುಹಿಸಿಕೊಡಲು ಮುಂದಾದರು. ಆದರೆ ಬಾಬು ಲೋಹರ್ ಅದನ್ನು ನಯವಾಗಿಯೇ ನಿರಾಕರಿಸಿದರು. ಆ ವೇಳೆ ಅವರು ಹೇಳಿದ ಮಾತುಗಳು ಪೊಲೀಸರ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದವು: “ನಾನು ನನ್ನ ಬದುಕಿನ ಎರಡು ಮುಖ್ಯ ವಸ್ತುಗಳನ್ನು ಬಿಟ್ಟು ಬರಲಾರೆ. ಒಂದು ನನ್ನ ಟ್ರೋಲಿ, ಅದು ನನ್ನ ಜೀವನೋಪಾಯ. ಇನ್ನೊಂದು ನನ್ನ ಹೆಂಡತಿ, ಅವಳು ನನ್ನ ಜೀವನದ ಪ್ರೀತಿ. ದಣಿದಾಗಲೆಲ್ಲ ಅವಳ ಮುಖ ನೋಡಿದರೆ ನನಗೆ ಎಲ್ಲಿಲ್ಲದ ಶಕ್ತಿ ಬರುತ್ತದೆ ” ಎಂದು ಅವರು ಹೇಳಿದ್ದಾರೆ.
ಅವರ ಪ್ರೀತಿಗೆ ಮಣಿದ ಪೊಲೀಸರು, ಜಖಂಗೊಂಡಿದ್ದ ಟ್ರೋಲಿಯನ್ನು ದುರಸ್ತಿ ಮಾಡಿಸಿಕೊಟ್ಟು, ಹಣ ಮತ್ತು ಆಹಾರದ ವ್ಯವಸ್ಥೆ ಮಾಡಿ ಅವರನ್ನು ಬೀಳ್ಕೊಟ್ಟಿದ್ದಾರೆ.
ವಯಸ್ಸು ಕೇವಲ ಸಂಖ್ಯೆಯಷ್ಟೇ ಹೊರತು, ಮನಸ್ಸಿನಲ್ಲಿ ಗಟ್ಟಿಯಾದ ಪ್ರೀತಿ ಮತ್ತು ಸಂಕಲ್ಪವಿದ್ದರೆ ಎಂತಹ ಗುಡ್ಡವನ್ನಾದರೂ ಹತ್ತಬಹುದು ಎಂಬುದಕ್ಕೆ ಈ ಹಿರಿಯ ದಂಪತಿಯೇ ಸಾಕ್ಷಿ. ಇಂದು ಸಾವಿರಾರು ಜನರು ಬಾಬು ಲೋಹರ್ ಅವರ ಈ ಅಪ್ರತಿಮ ಪ್ರೇಮಕ್ಕೆ ಸಲಾಂ ಎನ್ನುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ