ಭಾರತದ ಮೇಲೆ ದಾಳಿಗೆ ಸಂಚು: ದೆಹಲಿ ಪೊಲೀಸರಿಂದ ಐಎಸ್‌ಐ-ಬಬ್ಬರ್ ಖಾಲ್ಸಾ ಉಗ್ರ ಜಾಲ ಪತ್ತೆ, 11 ಶಂಕಿತರ ಬಂಧನ

ನವದೆಹಲಿ: ಭಾರತದ ಭದ್ರತಾ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮತ್ತು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI) ಪ್ರೇರಿತ ಭಯೋತ್ಪಾದನಾ ಜಾಲವನ್ನು ದೆಹಲಿ ಪೊಲೀಸರ ವಿಶೇಷ ಘಟಕ (Special Cell) ಭೇದಿಸಿದೆ. ಪಂಜಾಬ್ ಮತ್ತು ದೆಹಲಿಯ ವಿವಿಧೆಡೆ ದಾಳಿ ನಡೆಸಿ 11 ಶಂಕಿತರನ್ನು ಬಂಧಿಸಲಾಗಿದೆ.
ರಕ್ಷಣಾ ನೆಲೆಗಳ ಬಳಿ ಗೂಢಚರ್ಯೆ ನಡೆಸಲು ಅಳವಡಿಸಲಾಗಿದ್ದ 9 ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕ್ಯಾಮೆರಾಗಳ ಮೂಲಕ ಭಾರತದ ಸೇನಾ ಚಲನವಲನಗಳ ನೇರ ದೃಶ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸಲಾಗುತ್ತಿತ್ತು. ಆರೋಪಿಗಳಿಂದ 4 ಪಿಸ್ತೂಲ್‌ಗಳು ಮತ್ತು 24 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿ ಮತ್ತು ಪಂಜಾಬ್‌ನ ಭದ್ರತಾ ಸಂಸ್ಥೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಲು ಈ ಜಾಲ ಯೋಜಿಸಿತ್ತು.

ಹೇಗೆ ನಡೆಯುತ್ತಿತ್ತು ಈ ಜಾಲ?
ಬಂಧಿತ ಆರೋಪಿಗಳು ತಾವು ನಾಗರಿಕ ಇಲಾಖೆಯ (Civil Department) ಸಿಬ್ಬಂದಿಯೆಂದು ಸುಳ್ಳು ಹೇಳಿ, ಸರ್ಕಾರಿ ಅನುಮೋದಿತ ಕ್ಯಾಮೆರಾಗಳನ್ನು ಅಳವಡಿಸುತ್ತಿರುವುದಾಗಿ ನಂಬಿಸಿದ್ದರು. ಈ ಮೂಲಕ ಯಾರಿಗೂ ಸಂಶಯ ಬರದಂತೆ ಅಮೃತಸರ, ಜಲಂಧರ, ಪಠಾನಕೋಟ್, ಅಂಬಾಲಾ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾಗಳಲ್ಲಿದ್ದ ಸಿಮ್ ಕಾರ್ಡ್‌ಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಭಾರತದ ರಕ್ಷಣಾ ನೆಲೆಗಳ ಮೇಲೆ ಕಣ್ಣಿಟ್ಟಿದ್ದರು.
ಬಂಧಿತರಲ್ಲಿ ಹೆಚ್ಚಿನವರು ಸುಶಿಕ್ಷಿತರಾಗಿದ್ದು, ಹಣದ ಆಮಿಷಕ್ಕೆ ಬಲಿಯಾಗಿ ಈ ದೇಶದ್ರೋಹಿ ಕೆಲಸದಲ್ಲಿ ತೊಡಗಿದ್ದರು. ಮಿಲಿಟರಿ ಇಂಟೆಲಿಜೆನ್ಸ್ (MI) ನೀಡಿದ ಖಚಿತ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರ ಎರಡು ತಂಡಗಳು ಈ ಕಾರ್ಯಾಚರಣೆ ನಡೆಸಿವೆ. ಪಾಕಿಸ್ತಾನದಿಂದ ಯುಪಿಐ (UPI) ಮೂಲಕ ಈ ಯುವಕರಿಗೆ ಹಣ ಸಂದಾಯವಾಗುತ್ತಿತ್ತು. ಈ ಹಣವನ್ನು ಶಸ್ತ್ರಾಸ್ತ್ರಗಳ ಖರೀದಿ ಮತ್ತು ಗೂಢಚರ್ಯೆಗೆ ಬಳಸಲಾಗುತ್ತಿತ್ತು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಕಪುರ್ಥಲಾ, ಜಲಂಧರ್, ಪಠಾಣ್‌ಕೋಟ್, ಪಟಿಯಾಲ, ಮೊಗಾ, ಅಂಬಾಲಾ, ಕತುವಾ, ಬಿಕಾನೇರ್ ಮತ್ತು ಅಲ್ವಾರ್‌ನ ಸೂಕ್ಷ್ಮ ಪ್ರದೇಶಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪೊಲೀಸರು ಈ ಎಲ್ಲಾ ಕ್ಯಾಮೆರಾಗಳನ್ನು ತೆರವುಗೊಳಿಸಿದ್ದಾರೆ.
ಬಂಧಿತರಿಂದ 24 ಮೊಬೈಲ್ ಫೋನ್‌ಗಳು ಮತ್ತು ಶಸ್ತ್ರಾಸ್ತ್ರ ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದೇಶದ ಯುವಕರನ್ನು ದಾರಿ ತಪ್ಪಿಸಿ, ಭಯೋತ್ಪಾದನಾ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವ ಈ ಬೃಹತ್ ಜಾಲದ ಬಗ್ಗೆ ದೆಹಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement