೭ ಅಧಿಕಾರಿಗಳ ಗುರಿಯಾಗಿಸಿ ೩೦ ಕಡೆ ಎಸಿಬಿ ದಾಳಿ

 

ಬೆಂಗಳೂರು/ಹುಬ್ಬಳ್ಳಿ/ಧಾರವಾಡ/ಚಿತ್ರದುರ್ಗ/ಮಂಗಳೂರು/ಕೋಲಾರ: ಭ್ರಷ್ಟರ  ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಏಕಕಾಲದಲ್ಲಿ ರಾಜ್ಯದ  ಏಳು ಅಧಿಕಾರಿಗಳು ಹಾಗೂ ಅವರ ಸಂಬಂಧಿಕರಿಗೆ ಸೇರಿದ ೩೦ ಕಡೆ  ದಾಳಿ ನಡೆಸಿದ್ದಾರೆ.

ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್‌ನಲ್ಲಿ ಈ ಅಧಿಕಾರಿಗಳ ಕಚೇರಿ ನಿವಾಸ ಇನ್ನಿತರ ಸ್ಥಳಗಳು ಸೇರಿದಂತೆ  ೩೦ ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಹಕಾರ ಸಂಘಗಳ ಜಂಟಿ ನಿಂಬಂಧಕ ಪಾಂಡುರಂಗ ಗರಗ್, ಶಿಗ್ಗಾವಿಯ ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ್ ಕಲ್ಲೇಶ್,ಮಂಗಳೂರು ಪಾಲಿಕೆ ನಗರ ಯೋಜನೆ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್, ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಹೆಚ್‌ಒಡಿ ಡಾ.ಶ್ರೀನಿವಾಸ್, ಪಿಡಬ್ಲ್ಯೂಡಿ ಇಲಾಖೆ ಮಾಗಡಿ ಉಪವಿಭಾಗದ ಜೆ.ಇ. ಚನ್ನಬಸಪ್ಪ ಅವತಿ,ಕೋಲಾರದ ಡಿಹೆಚ್‌ಒ ಡಾ.ವಿಜಯ್‌ಕುಮಾರ್, ಧಾರವಾಡದ ಎಸಿಎಫ್ ಶ್ರೀನಿವಾಸ್ ಸೇರಿ ೭ ಮಂದಿ  ಅಧಿಕಾರಿಗಳ ನ್ನುಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ಪಾಂಡುರಂಗ ಗರಗ್ ಅವರಿಗೆ ಸೇರಿದ ವಿಜಯನಗರದ ಮನೆ, ಮಲ್ಲೇಶ್ವರಂ ಕಚೇರಿ, ಚಿತ್ರದುರ್ಗದ ಮನೆ ಸೇರಿ ಐದು ಕಡೆ, ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ದೇವರಾಜ್ ಕಲ್ಲೇಶ್‌ಗೆ ಸೇರಿದ ರಾಜೀವ್ ಗಾಂಧಿ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಕೋಲಾರದ ಡಿಹೆಚ್‌ಒ ಡಾ.ವಿಜಯ್‌ಕುಮಾರ್‌ಗೆ ಸೇರಿದ ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ ಮೇಲೆ ಹಾಗೂ ಬೆಂಗಳೂರಿನಲ್ಲಿನ ಅವರ ಫ್ಲಾಟ್‌ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಇವರೆಲ್ಲರೂ ಆದಾಯ ಮೀರಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಗಳಿಸಿರುವ ದೂರುಗಳನ್ನು ಪರಿಶೀಲನೆ ನಡೆಸಿ ಪ್ರಾಥಮಿಕ ಮಾಹಿತಿಯನ್ನು ಪಡೆದು ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಧಾರವಾಡದಲ್ಲಿ ದಾಳಿ:ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ್ ಕಲ್ಲೇಶ್ ಅವರ ನಿವಾಸ, ತಾಯಿ ಹಾಗೂ ಮಾವನ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇವರಾಜ್ ಅವರ  ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಸಮೀಪದ ರಾಜೀವನಗರ ನಿವಾಸ, ಗೋಕುಲ ರಸ್ತೆಯ ಕೋಟಲಿಂಗನಗರದಲ್ಲಿರುವ ತಾಯಿ ಮನೆ ಹಾಗೂ ಬೆಂಗೇರಿ ಬಳಿಯ ಬಾಲಾಜಿನಗರದಲ್ಲಿರುವ ಮಾವನ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ.
ಅದೇ ರೀತಿ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ಅವರ  ಮನೆ, ಕಚೇರಿಗಳ ಮೇಲೂ ಹುಬ್ಬಳ್ಳಿ-ಧಾರವಾಡ ಎಸಿಬಿ ಪೊಲೀಸರ ತಂಡ ದಾಳಿ ನಡೆಸಿದೆ.
ಮಂಗಳೂರಿನಲ್ಲಿಯೂ ದಾಳಿ: ಮಂಗಳೂರು ಮಹಾನಗರ ಪಾಲಿಕೆ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್  ಅವರ ಮನೆ ಮೇಲೆ ಮುಂಜಾನೆ ದಾಳಿ ನಡೆಸಿದ ಮಂಗಳೂರು ಎಸಿಬಿ ಪೊಲೀಸರು  ಮನೆ, ಕಚೇರಿ, ಸಂಬಂಧಿಕರು ಮತ್ತು ಸ್ನೇಹಿತರ ನಿವಾಸಗಳ ಮೇಲೂ ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲೂ ದಾಳಿ:
ಕೊಪ್ಪಳದ ಕಿಮ್ಸ್ ಔಷಧ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಅವರ ಮನೆ, ಕಚೇರಿಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.   ಅದೇ ರೀತಿ ಮಾಗಡಿ ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಚನ್ನಬಸಪ್ಪ ಅವರೂ ಎಸಿಬಿ ಬಲೆಗೆ ಬಿದ್ದಿದ್ದಾರೆ. ಒಟ್ಟಾರೆ ಮಂಗಳವಾರ ಬಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಏಳು   ಅಧಿಕಾರಿಗಳ ೩೦ಕ್ಕೂ ಹೆಚ್ಚು ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ  ಅಕ್ರಮ ಸಂಪತ್ತಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
 

ಪ್ರಮುಖ ಸುದ್ದಿ :-   ಮನೆಯಲ್ಲೇ ಕಾಡುಕೋಣದ ಮಾಂಸ, ಜಿಂಕೆ ಕೊಂಬು ಇರಿಸಿಕೊಂಡಿದ್ದ ಇಬ್ಬರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement