ಬೆಂಗಳೂರು: ಆಗ್ನೇಯ ಏಷಿಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳು ಕಡಿಮೆ ಬೆಲೆಯಲ್ಲಿ ದೊರೆಯುವ ಯುದ್ಧ ವಿಮಾನ ತೇಜಸ್ ಖರೀದಿಗೆ ಆಸಕ್ತಿ ತೋರಿವೆ ಎಂದು ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಚೇರಮನ್ ಆರ್. ಮಾಧವನ್ ತಿಳಿಸಿದ್ದಾರೆ.
ಏರೋ ಇಂಡಿಯಾದಲ್ಲಿ ಮಾತನಾಡಿದ ಅವರು, ೩೦೯ ಕೋಟಿ ರೂ. ಮೊತ್ತದ ಯುದ್ಧ ವಿಮಾನ ತೇಜಸ್ ರಫ್ತಿಗೆ ನಾವು ಉತ್ಸುಕರಾಗಿದ್ದೇವೆ. ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದು, ಅತಿ ಅಗ್ಗದ ಯುದ್ಧವಿಮಾನ ಇದೆಂಬುದು ಹಲವು ದೇಶಗಳಿಗೆ ಮನವರಿಕೆಯಾಗುತ್ತಿದೆ ಎಂದು ಹೇಳಿದರು.
ತೇಜಸ್ ಯುದ್ಧವಿಮಾನದ ನೇರ ಪ್ರತಿಸ್ಪರ್ಧಿ ಸಿನೊ-ಪಾಕ್ ಉತ್ಪನ್ನವಾದ ಜೆಎಫ್-೧೭. ತೇಜಸ್ ಪ್ರದರ್ಶನ ಉತ್ಕೃಷ್ಟವಾಗಿದೆ. ಎಂಜಿನ್ ಗುಣಮಟ್ಟ , ರಾಡಾರ್ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಿದ ಅವರು ತೇಜಸ್ ಖರೀದಿಗೆ ಆಸಕ್ತಿ ತೋರಿದ ದೇಶಗಳ ಹೆಸರು ಬಹಿರಂಗಗೊಳಿಸಲು ನಿರಾಕರಿಸಿದರು. ಶ್ರೀಲಂಕಾ, ಈಜಿಪ್ಟ್ ಸೇರಿದಂತೆ ಸುಮಾರು ೬ ರಾಷ್ಟ್ರಗಳು ತೇಜಸ್ ಖರೀದಿಗೆ ಆಸಕ್ತಿ ತೋರಿವೆ ಎಂದು ಮೂಲಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ