ಕಾಂಗ್ರೆಸ್‌ ಶಾಶ್ವತವಾಗಿ ಪ್ರತಿಪಕ್ಷದಲ್ಲಿರುವಂತೆ ಮಾಡ್ತೇನೆ: ಗುಡುಗಿದ ಯಡಿಯೂರಪ್ಪ

ಬೆಂಗಳೂರು: ಸವಾಲುಗಳನ್ನು ಎದುರಿಸಿ ಜನರ ವಿಶ್ವಾಸ ಗೆದ್ದು ೪ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ. ಸವಾಲುಗಳನ್ನು ಎದುರಿಸಲು ನನಗೆ ಎಲ್ಲಿಲ್ಲದ ಉತ್ಸಾಹ. ಸವಾಲುಗಳು ನನ್ನನ್ನು ಗಟ್ಟಿಗೊಳಿಸುತ್ತವೆ. ಮುಂದಿನ ಚುನಾವಣೆಯಲ್ಲೂ ಎಲ್ಲ ಸವಾಲುಗಳನ್ನು ಎದುರಿಸಿ ಬಿಜೆಪಿಯನ್ನು ೧೫೦ ಸ್ಥಾನಗಳಲ್ಲಿ ಗೆಲ್ಲಿಸಿ ಮತ್ತೆ ಬಿಜೆಪಿ ಸರ್ಕಾರವನ್ನೆ ಅಧಿಕಾರಕ್ಕೆ ತಂದು ಕಾಂಗ್ರೆಸ್‌ನ್ನು ಶಾಶ್ವತವಾಗಿ ಪ್ರತಿಪಕ್ಷದ ಸ್ಥಾನದಲ್ಲಿರುವಂತೆ ಮಾಡಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಈ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ಕಳೆದ ೬ ತಿಂಗಳಿನಿಂದ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಈಗ ರಾಜೀನಾಮೆ ಕೊಡುತ್ತಾರೆ, ಆಗ ರಾಜೀನಾಮೆ ಕೊಡುತ್ತಾರೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಜನತೆಯ ಬೆಂಬಲ, ಆಶೀರ್ವಾದ ಇರುವವರೆಗೂ ನನ್ನ ಅಧಿಕಾರ ಅಬಾಧಿತ ಎಂದರು.
ರಾಜ್ಯಪಾಲರ ವಂದನಾ ನಿರ್ಣಯದ ಭಾಷಣಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಕಟುಟೀಕೆಗಳಿಗೆ ತೀಕ್ಷಣವಾಗಿ ಪ್ರತ್ಯುತ್ತರ ನೀಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾವು ೧೫೦ ಸ್ಥಾನ ಗೆಲ್ಲುತ್ತೇವೆ. ನಿಮಗೆ ವಿರೋಧ ಪಕ್ಷದ ಸ್ಥಾನವೇ ಶಾಶ್ವತ ಎಂದರು.
ನೂರು ಸುಳ್ಳು ಪ್ರಕರಣಗಳನ್ನು ಎದುರಿಸುವ ಶಕ್ತಿ ನನಗಿದೆ. ಈಗಿರುವ ಸುಳ್ಳು ಪ್ರಕರಣಗಳಿಂದಲೂ ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,
ಈಗ ಆರ್‌ಟಿಐಗಳ ಮೂಲಕ ಮಾಹಿತಿ ಪಡೆದು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾಗಿ ವಿರೋಧ ಪಕ್ಷದ ನಾಯಕರು ಇದನ್ನು ಅರ್ಥ ಮಾಡಿಕೊಂಡು ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂಬುದು ನನ್ನ ವಿನಯ ಪೂರ್ವಕ ಮನವಿ ಎಂದರು.
ಚುನಾವಣೆ ಬರಲಿ, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದ ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಕೀಲರಿದ್ದಾರೆ, ಬುದ್ಧಿವಂತರು. ನಾನು ಅವರಷ್ಟು ಬುದ್ಧಿವಂತನಲ್ಲ. ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಎಸಿಬಿ ಸೃಷ್ಟಿ ಮಾಡಿ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದೂ ಗೊತ್ತಿದೆ. ಬಿಡಿಎ ಹೆಸರಿನಲ್ಲಿ ಡಿನೋಟಿಫೈ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಮ್ಮನೆ ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಆರ್‌ಟಿಐ ಮಾಹಿತಿ ಪಡೆದು ಎಲ್ಲರ ಮೇಲೂ ಕೇಸು ಹಾಕಬಹುದು. ಇದನ್ನು ಅರ್ಥ ಮಾಡಿಕೊಳ್ಳಿ. ನಾನು ಜಾಮೀನು ಮೇಲೆ ಇದ್ದೀನಿ, ರಾಜೀನಾಮೆ ಕೊಡಬೇಕು ಎಂದು ಹೇಳುತ್ತೀರಿ, ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೆ ಜಾಮೀನಿನ ಮೇಲಿದ್ದಾರೆ. ಈ ರೀತಿಯೆಲ್ಲಾ ಮಾತನಾಡುವುದು ಬೇಡ ಎಂದರು.
ಕಳೆದ ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ನಿಮಗೆ ದಯನೀಯ ಸೋಲಾಗಿದೆ. ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಇಷ್ಟಾದರೂ ಪಾಠ ಕಲಿತಿಲ್ಲ. ಇನ್ನಾದರೂ ಸುಧಾರಿಸಿಕೊಳ್ಳಿ. ವಿರೋಧ ಪಕ್ಷದ ನಾಯಕರುಗಳಿಂದ ಈ ರೀತಿಯ ಮಾತುಗಳು ಬರಬಾರದು. ನನ್ನ ರಾಜಕೀಯ ಜೀವನದ ೫ ದಶಕಗಳಲ್ಲಿ ಹತ್ತು ಹಲವಾರು ಸವಾಲುಗಳಿಗೆ ಎದುರಿಸಿ ಗೆದ್ದಿದ್ದೇನೆ.ಜನರ ವಿಶ್ವಾಸದಿಂದ ೪ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ. ಎಲ್ಲ ಸವಾಲುಗಳನ್ನು ಸಂಯಮ, ಧೈರ್ಯ, ಸಂಕಲ್ಪ ಶಕ್ತಿಯಿಂದ ಎದುರಿಸಿ ಮುಖ್ಯಮಂತ್ರಿ ಹುದ್ದೆಯಲ್ಲಿ ನಿಂತಿದ್ದೇನೆ ಎಂದರು.
ಅಧಿಕಾರ ಎಂಬುದು ಎಲ್ಲರಿಗೂ ಒಳ್ಳೆಯದು ಮಾಡಲು ಇರುವ ಸುವರ್ಣಾವಕಾಶ. ಹಳೆಯದನ್ನು ಮರೆತು ದ್ವೇಷ ಮಾಡದೆ ಎಲ್ಲರಿಗೂ ಒಳ್ಳೆಯದು ಮಾಡುವುದೇ ರಾಜಧರ್ಮ ಎಂಬುದು ನನ್ನ ನಂಬಿಕೆ. ಹಾಗೆಯೇ ಎಲ್ಲರಿಗೂ ಒಳ್ಳೆಯದು ಮಾಡುತ್ತೇನೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಸ್ವಾತಂತ್ರ್ಯ ನಂತರ ಇಂತಹ ಹೀನಾಯ ಪರಿಸ್ಥಿತಿ ಕಾಂಗ್ರೆಸ್ ಬಂದಿರಲಿಲ್ಲ. ೨೮ ಸ್ಥಾನಗಳ ಪೈಕಿ ೧ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಹಾಗೆಯೇ ೧೫ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ೧೨ ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಇತ್ತೀಚೆಗೆ ನಡೆದ ೨ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಬಿಜೆಪಿಗೆ ಠೇವಣಿಯೂ ಉಳಿಯುತ್ತಿರದ ಸಿರಾ ಉಪಚುನಾವಣೆಯಲ್ಲಿ ಬಿಜೆಪಿಗೆ ಮಹತ್ವದ ಗೆಲುವು ದೊರೆತಿದೆ. ಈ ಸರ್ಕಾರಕ್ಕೆ ಜನಾದೇಶ ಇಲ್ಲ ಎಂದು ಹೇಳಿದ್ದೀರಿ, ಇದು ಅನೈತಿಕ, ಅಂಗವೈಫಲ್ಯ ಸರ್ಕಾರ ಎಂದೆಲ್ಲಾ ಮಾತನಾಡಿದ್ದೀರಿ. ನೀವು ಈ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಹೋಗಿ ಚುನಾವಣೆಗೆ ನಿಂತಿದ್ದು ನೈತಿಕವೇ.
ಕಳೆದ ಚುನಾವಣೆಯಲ್ಲಿ ಪರಸ್ಪರ ವಿರುದ್ಧ ಸೆಣಸಾಡಿದ ಪಕ್ಷದ ಜತೆ ಸೇರಿ ಒಂದು ವರ್ಷ ಅಧಿಕಾರ ಮಾಡಿದ್ದೀರಾ, ಇದು ನೈತಿಕತೆಯೇ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಪ್ರಮುಖ ಸುದ್ದಿ :-   ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ : ಆದ್ರೆ ನಾಲ್ಕು ಪಕ್ಷಿಗಳಿಗೆ 444 ರೂ. ಟಿಕೆಟ್...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement