ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಶಾಶ್ವತವಾಗಿ ಪ್ರತಿಪಕ್ಷದಲ್ಲಿರುವಂತೆ ಮಾಡುತ್ತೇನೆ… ಮುಂದಿನ ಚುನಾವಣೆಯಲ್ಲಿ ೧೫೦ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇನೆ. ನಾನು ಅನೇಕ ಸವಾಲುಗಳನ್ನು ಎದುರಿಸಿ, ಮೆಟ್ಟಿನಿಂತು ಮುಖ್ಯಮಂತ್ರಿಯಾಗಿದ್ದೇನೆ…ಕಳೆದ ೬ ತಿಂಗಳಿನಿಂದ ಪ್ರತಿಪಕ್ಷದ ನಾಯಕರು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಈಗ ರಾಜೀನಾಮೆ ಕೊಡ್ತಾರೆ, ಆಗ ರಾಜೀನಾಮೆ ಕೊಡ್ತಾರೆ ಎಂದು ಹೇಳುತ್ತಲೇ ಬಂದಿದ್ದಾರೆ… ಆದರೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲ ಇರುವ ವರೆಗೂ ನಾನು ಯಾರಿಗೂ ಹೆದರುವುದಿಲ್ಲ… ಈ ಮಾತುಗಳನ್ನು ಹೇಳುತ್ತ ಶುಕ್ರವಾರ ಯಡಿಯೂರಪ್ಪ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಇದು ಮೇಲ್ನೋಟಕ್ಕೆ ಕಾಂಗ್ರೆಸ್ ವಿರುದ್ಧ ಅವರು ಗುಡುಗಿದ್ದಾರೆ ಎಂದೆನಿಸಿದರೂ ವಾಸ್ತವವಾಗಿ ಅವರು ಇದನ್ನು ಹೇಳುವ ಮೂಲಕ ತಮ್ಮ ರಾಜಕೀಯ ಖಡ್ಗ ಝಳಪಿಸಿದ್ದೇ ರಾಜ್ಯದ ಸ್ವಪಕ್ಷೀಯ ಕೆಲ ಬಿಜೆಪಿ ನಾಯಕರ ವಿರುದ್ಧ…! .
ಯಡಿಯೂರಪ್ಪ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ನಾವು ಕಳೆದ ಕೆಲ ವರ್ಷಗಳ ಹಿಂದೆ ಕಾಣುತ್ತಿದ್ದ ಆದರೆ ಈಗ ಮಾಯವಾಗಿದ್ದ ಯಡಿಯೂರಪ್ಪನವರನ್ನೇ ಮತ್ತೆ ಕಾಣುವಂತಾಯಿತು.. ಅದರಲ್ಲಿಯೂ ೪ನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಈ ಮೊದಲಿನ ಯಡಿಯೂರಪ್ಪ ಅವರಲ್ಲಿ ನಾಪತ್ತೆಯಾಗಿದ್ದ, ಆದರೆ ಶುಕ್ರವಾರ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಈ ಹಿಂದಿನ ಯಡಿಯೂರಪ್ಪ ಮತ್ತೆ ಕಾಣಿಸಿಕೊಂಡಿದ್ದಾನೆ.
ಯಡಿಯೂರಪ್ಪ ಅವರ ಭಾಷಣದ ಮರ್ಮವೇನು..?: ಈಗ ಈ ಹಿಂದೆ ಇದ್ದ ಯಡಿಯೂರಪ್ಪ ಮಾತ್ರ ಬದಲಾಗಿಲ್ಲ, ಈ ಹಿಂದಿನ ಕೇಂದ್ರದ ಬಿಜೆಪಿ ಹೈಕಮಾಂಡ್ ಸಹ ಬದಲಾಗಿದೆ. ಈಗಿನ ಬಿಜೆಪಿ ಹೈಕಮಾಂಡ್ ಇಂದಿರಾ ಗಾಂಧಿ ಕಾಲದಲ್ಲಿದ್ದ ಕಾಂಗ್ರೆಸ್‌ನಷ್ಟೇ ಬಲಿಷ್ಠ. ಹೀಗಾಗಿ ಯಡಿಯೂರಪ್ಪನವರೂ ಬದಲಾಗಿದ್ದಾರೆ, ಬದಲಾಗಲೇಬೇಕಾಗಿದೆ. ಅವರ ಈ ಮೊದಲಿನ ಆವೇಶ, ಹೋರಾಟದ ಕಿಚ್ಚು, ಸಿಟ್ಟು, ನೇರಾನೇರ ಮಾತುಗಳು, ಅವರ ಎಗ್ರೆಸ್ಸಿವ್‌ನೆಸ್ ಎಲ್ಲವೂ ಈ ಕಾರಣದಿಂದಲೇ ಬದಲಾಗಿವೆ. ಹಾಗಾದರೆ ಶುಕ್ರವಾರ ವಿಧಾನಸಭೆಯಲ್ಲಿ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಹಾಗೂ ಸಿದ್ಧರಾಮಯ್ಯ ವಿರುದ್ಧ ಈಪರಿ ಗುಡುಗಿದ್ದೇಕೆ..?
ಇದರಲ್ಲಿಯೇ ರಾಜಕಾರಣದ ಮರ್ಮ ಅಡಗಿರುವುದು. ಅವರು ಕೆಲವರಿಗೆ ಉತ್ತರ ಕೊಡಲು ಈ ಸಂದರ್ಭ ಬಳಸಿಕೊಂಡರು. ಕಾಂಗ್ರೆಸ್ ನಾಯಕರ ಹೆಗಲ ಮೇಲೆ ಬಂದೂಕಿಟ್ಟು ತಮ್ಮದೇ ಪಕ್ಷದ ಕೆಲ ನಾಯಕರಿಗೆ ಹೊಡೆದರು. ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವ, ತಮ್ಮ ವಿರುದ್ಧ ನಿರಂತರವಾಗಿ ಹೈಕಮಾಂಡ್‌ಗೆ ದೂರು ನೀಡುತ್ತಿರುವ ನಾಯಕರಿಗೆ ತಾವೇನು ಎಂಬುದನ್ನು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ತಮ್ಮ ನೇತೃತ್ವದಲ್ಲಿ ಬಿಜೆಪಿ ೧೫೦ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಶಾಶ್ವತವಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸುತ್ತದೆ ಎಂದು ಹೇಳಿದ್ದು ಮುಂದಿನ ಚುನಾವಣೆಯಲ್ಲಿಯೂ ನನ್ನದೇ ನೇತೃತ್ವ ಎಂಬರ್ಥದಲ್ಲಿ. ಕಾಂಗ್ರೆಸ್‌ನವರಿಗೆ ಯಡಿಯೂರಪ್ಪ ಬಿಜೆಪಿ ಸಾರಥ್ಯ ವಹಿಸಿದರೆಷ್ಟು, ಬಿಟ್ಟರೆಷ್ಟು, ಇದರಿಂದ ಅವರಿಗೇನಾಗಬೇಕಿದೆ..? ಹಾಗಿದ್ದರೆ ಯಡಿಯೂರಪ್ಪ ನೇತೃತ್ವ ವಹಿಸಿದರೆ ಯಾರಿಗೆ ಮುಖ್ಯವಾಗುತ್ತದೆ? ಇದು ಮುಖ್ಯವಾಗುವುದು ಬಿಜೆಪಿಗೇ. ಹಿಗಾಗಿಯೇ ಅವರು ಈ ಮಾತನ್ನು ಹೇಳಿದ್ದಾರೆ. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಅಂದರೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ರೀತಿಯಲ್ಲೂ ಇರಬೇಕು. ಮಾರ್ಮಿಕವಾಗಿ ತಮ್ಮ ನಾಯಕತ್ವದ ಬಗ್ಗೆ ಪದೇಪದೇ ಮಾತನಾಡುವವರಿಗೂ ಉತ್ತರ ನೀಡಿದಂತಿರಬೇಕು. ಈ ಕಾರಣಕ್ಕಾಗಿಯೇ ಮುಂದಿನ ಚುನಾವಣೆಯಲ್ಲಿ ೧೫೦ ಸ್ಥಾನಗಳನ್ನು ಗೆದ್ದು ತೋರಿಸತ್ತೇನೆ ಎಂದು ತಾಕತ್ತಿನ ಮಾಡಿ, ಈ ತಾಕತ್ತು ನಿಮಗಿದೆಯಾ ಎಂದು ಪರೋಕ್ಷವಾಗಿ ಪಕ್ಷದಲ್ಲಿ ತಮ್ಮ ನಾಯಕತ್ವ ಪ್ರಶ್ನಿಸುವವರನ್ನು ಕೇಳಿದ್ದಾರೆ.
ಎರಡನೆಯದು, ನಾನು ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಂತು ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿರುವುದು. ಅವರಿಗೆ ಈಗ ಸವಾಲಿರುವುದು, ಆಗ ಸವಾಲಿದ್ದಿದ್ದು ಕಾಂಗ್ರೆಸ್ ಅನ್ನು ಎದುರಿಸುವುದರಲ್ಲಲ್ಲ. ತಮ್ಮ ಸ್ವಪಕ್ಷದಲ್ಲಿಯೇ ಅವರಿಗೆ ಅನೇಕ ಸವಾಲುಗಳಿದ್ದವು. ಕಾಂಗ್ರೆಸ್‌ನ ಕೆಲ ನಾಯಕರು ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾದಾಗ ಎದುರಾದ ಸವಾಲುಗಳು, ಅನಂತರ ಅವರನ್ನು ಗೆಲ್ಲಿಸಿ ತರುವಾಗ ಇದ್ದ ಸವಾಲುಗಳು, ಅನಂತರ ಅವರನ್ನು ಮಂತ್ರಿ ಮಾಡುವಾಗ ಎದ್ದ ಸವಾಲುಗಳು, ಮೂಲ ಬಿಜೆಪಿಯವರಲ್ಲಿ ಸಚಿವ ಸ್ಥಾನ ಸಿಗದೆ ಉಂಟಾದ ಅಸಮಾಧಾನದ ಸವಾಲುಗಳು, ಸಚಿವರ ಖಾತೆ ಸವಾಲುಗಳು.. ಹೀಗೆ ಅನೇಕ ಸವಾಲುಗಳನ್ನು ಎದುರಿಸಿಕೊಂಡೇ ಅವರು ಅಧಿಕಾರ ನಡೆಸುತ್ತಿದ್ದಾರೆ. ಕೆಲವರಿಗೆ ಇನ್ನೂ ಮಂತ್ರಿಪಟ್ಟ ಸಿಗದ್ದಕ್ಕೆ ಅಸಮಾಧಾನಗಳಿವೆ. ಹೀಗಾಗಿಯೇ ಅವರು ಇಂಥ ಸವಾಲುಗಳನ್ನು ಎದುರಿಸಿ ಮುನ್ನುಗ್ಗುವುದು ಎಂದರೆ ತನಗೆ ಎಲ್ಲಿಲ್ಲದ ಉತ್ಸಾಹ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಸ್ವಪಕ್ಷೀಯ ತಮ್ಮ ಟೀಕಾಕಾರಿಗೆ ಹಾಗೂ ಅಸಮಾಧಾನಿತರಿಗೆ ಉತ್ತರ ಕೊಟ್ಟಿರುವುದು.
ನ್ಯಾಯಾಲಯದಲ್ಲಿ ತಮ್ಮ ಮೇಲಿರುವ ಪ್ರಕರಣದ ಬಗ್ಗೆಯೂ ಮಾತನಾಡಿರುವ ಅವರು ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಮೇಲೆ ಪ್ರಕರಣವಿಲ್ಲವೇ ಎಂದು ಪ್ರಶ್ನಿಸಿ ಕಾಂಗ್ರೆಸ್ ಅನ್ನು ತಿವಿದು, ಜೊತೆಗೆ ಇದೇ ಕಾರಣ ಮುಂದಿಟ್ಟು ತಮ್ಮ ನಾಯಕತ್ವ ಬದಲಾವಣೆಗೆ ತೆರೆಯ ಮರೆಯಲ್ಲಿ ಹೈಕಮಾಂಡಿಗೆ ದೂರು ನೀಡುತ್ತಿರುವ ಬಿಜೆಪಿ ನಾಯಕರಿಗೂ ಹೇಳಿದ್ದಾರೆ.
ಅವರು ಮತ್ತೊಂದು ಮಾತನ್ನೂ ಮಾರ್ಮಿಕವಾಗಿ ಹೇಳಿದ್ದಾರೆ. ನನಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಬೆಂಬಲ ಇರುವವರೆಗೂ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು. ಅಂದರೆ ಹೈಕಮಾಂಡ್ ಎಷ್ಟು ಬಲಿಷ್ಠವಾಗಿದೆ ಎಂಬುದನ್ನೂ ಮಾರ್ಮಿಕವಾಗಿ ಹೇಳಿದ್ದಾರೆ, ಜೊತೆಗೆ ಇವರು ತಮ್ಮ ಪರವಾಗಿರುವವರೆಗೂ ನೀವೇನೇ ಮಾಡಿದರೂ ನಾನು ಹೆರುವುದಿಲ್ಲ ಎಂದೂ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆದ ಉಪಚುನಾವಣೆಗಳಲ್ಲಿ ೧೭ರಲ್ಲಿ ೧೪ ಸ್ಥಾನಗಳನ್ನು ಪಕ್ಷವು ಗೆದ್ದಿದೆ. ಈ ಗೆಲುವಿನಲ್ಲಿ ಕೇಂದ್ರ ನಾಯಕರ ಪಾತ್ರ ಇರಲಿಲ್ಲ, ತನ್ನ ಪಾತ್ರವೇ ಇತ್ತು ಎಂಬುದನ್ನೂ ಶಿರಾ ಉಪಚುನಾವಣೆಯ ಬಿಜೆಪಿ ಗೆಲುವಿನ ವಿಷಯ ಪ್ರಸ್ತಾಪಿಸುವ ಮೂಲಕ ಸೂಚ್ಯವಾಗಿ ಹೇಳಿದ್ದಾರೆ. ಅಲ್ಲಿ ಯಾವಾಗಲೂ ಠೇವಣಿ ಕಳೆದುಕೊಳ್ಳುತ್ತಿದ್ದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಿದ್ದೇನೆ. ನನ್ನನ್ನು ಟೀಕಿಸುವ ಅಥವಾ ನನ್ನ ವಿರುದ್ಧ ಪದೇ ಪದೇ ಹೈಕಮಾಂಡಿಗೆ ದೂರು ನೀಡುವ ನಾಯಕರಿಗೆ ಈ ತಾಕತ್ತು ಇದೆಯಾ ಎಂದು ಕಾಂಗ್ರೆಸ್ ನಾಯಕರ ಹೆಗಲ ಮೇಲೆ ಬಂದೂಕು ಇಟ್ಟು ಸ್ವಪಕ್ಷೀಯ ಕೆಲ ನಾಯಕರನ್ನೇ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ತೋರಿದ ನಂತರ ಯಡಿಯೂರಪ್ಪ ಹೆಚ್ಚು ಬಲಿಷ್ಠರಾದಂತೆ ತೋರುತ್ತಿದ್ದು, ಈ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ವಿರುದ್ಧ ಕೆಲಸ ಮಾಡುವವರಿಗೆ ಅವರು ವಿಧಾಸಭೆಯ ಸಂದರ್ಭ ಬಳಸಿಕೊಂಡು ಟಾಂಗ್ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ