ಸಿದ್ದಾಪುರ:ಸಾಹಿತ್ಯ ಕ್ಷೇತ್ರ ಸಮಾಜದ ಪರಿವರ್ತನೆಗೆ ಹಾಗೂ ಮೌಲ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬಗ್ಗೆ ಯಾವತ್ತೂ ಗೌರವವಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ನಡೆದ ಗಂಗಾಧರ ಕೊಳಗಿಯವರ ಯಾನ- ಅಲೆಮಾರಿಯ ಅನುಭವ ಕಥನ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ಈ ಕೃತಿ. ಸಹಜವಾದ ಜೀವನದ ನಂಬಿಕೆ ಉಳ್ಳ ಗಂಗಾಧರ ಕೊಳಗಿ ಪ್ರಕೃತಿ ಸಹಜವಾದ ಭಾವನೆಗೆ ಅಕ್ಷರ ರೂಪ ಕೊಟ್ಟಿದ್ದಾರೆ. ಸಿದ್ದಾಪುರದ ನೆಲ ಸ್ವಾತಂತ್ರ್ಯ ಹೋರಾಟದಲ್ಲಿ ಅಗಾಧ ಕೊಡುಗೆ ಕೊಟ್ಟ ನೆಲ. ಇಲ್ಲಿನ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯೂ ಅವಸ್ಮರಣೀಯವಾದದ್ದು. ಅಂಥ ಶ್ರೇಷ್ಠ ಹಿನ್ನೆಲೆಯುಳ್ಳ ಈ ನೆಲದಲ್ಲಿ ಸಾಹಿತ್ಯದಲ್ಲೂ ಸಮಾಲೋಚನೆ, ಚಿಂತನೆಗಳ ಮೂಲಕ ಇನ್ನಷ್ಟುಚ ಉತ್ತಮ ಕೃತಿಗಳು ಪ್ರಕಟಗೊಳ್ಳಬೇಕು ಎಂದರು.
ನಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗ್ರಹಿಸುತ್ತ, ಪಶ್ಚಿಮ ಘಟ್ಟದಲ್ಲಿನ ತಮ್ಮ ಅಲೆದಾಟದ ಅನುಭವವನ್ನು ಗಟ್ಟಿಯಾಗಿ ನಿರೂಪಿಸಿದ ಕೃತಿ ಯಾನ – ಅಲೆಮಾರಿಯ ಅನುಭವ ಕಥನ ಎಂದು ಬರಹಗಾರ ಡಾ. ಗಜಾನನ ಶರ್ಮಾ ಹೇಳಿದರು.
ಕೃತಿಯಲ್ಲಿ ಪಶ್ಚಿಮಘಟ್ಟದ ಅಮೂಲ್ಯ ವಿವರಗಳ ಜೊತೆಗೆ ಅಲ್ಲಾಗುತ್ತಿರುವ ಬದಲಾವಣೆ, ಅದಕ್ಕಾದ ಹಾನಿಯ ಕುರಿತಾಗಿ ವೇದನೆಗಳಿವೆ. ಈ ಕೃತಿಯಲ್ಲಿ ಸೈಕಲ್ ಮೇಲೆ ಪಶ್ಚಿಮಘಟ್ಟದಲ್ಲಿ ನೂರಾರು ಕಿಮೀ. ಕ್ರಮಿಸಿದ, ಶರಾವತಿ ಹಿನ್ನೀರಿನಲ್ಲಿ ಉಕ್ಕಡದಲ್ಲಿ ಸ್ವಂತ ಪಾತಿ ಹಾಕಿದ ೭೦-೮೦ ಕಿಮೀ ಸಾಗಿದ, ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆ ರಾಣಿಯ ಕಾನೂರು ಕೋಟೆಯ ಕುರಿತಾದ, ಅಪರೂಪದ ಚೌತಿ ಮೆಣಸನ್ನು ಶೋಧಿಸುವ ಅನುಭವಗಳು ನಮಗೆ ನಮ್ಮನ್ನು ತೆರೆದು ತೋರಿಸುವ ಅನುಭವಗಳು ಎಂದರು.
ಪರಿಸರ ಚಿಂತಕ, ಲೇಖಕ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಪಶ್ಚಿಮಘಟ್ಟ ಬಹುದೊಡ್ಡ ನಿಧಿ. ಅದರ ಪ್ರಾಮುಖ್ಯತೆ ನಮಗೆ ಗೊತ್ತಿಲ್ಲ. ಅದರ ಮಹತ್ವವನ್ನು ಸೂಕ್ಷ್ಮವಾಗಿ ಗ್ರಹಿಸಿ ಕುಸುರಿ ಕಲೆಯಂತೆ ನಿರೂಪಿಸಿದ ಕೃತಿ ಇದು. ಕನ್ನಡದ ಪ್ರವಾಸಿ ಕಥನದಲ್ಲಿ ಅರ್ಥಪೂರ್ಣವಾಗಿರುವುದರ ಜೊತೆಗೆ ಪಶ್ಚಿಮಘಟ್ಟದಲ್ಲಿ ಸಂಚಾರ ಮಾಡುವವರಿಗೆ ಮಾರ್ಗದರ್ಶಿಯೂ, ಪಠ್ಯವೂ ಆಗುವಂಥ ಕೃತಿ ಎಂದರು.
ಲಯನ್ಸ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ, ನಾರಿಶಕ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ನೊಮಿಟೊ ಕಾಮದಾರ್, ತಹಶೀಲ್ದಾರ ಮಂಜುಳಾ ಭಜಂತ್ರಿ ಮಾತನಾಡಿದರು. ನೊಮಿಟೊ ಕಾಮದಾರ್ ಅವರನ್ನು ಸನ್ಮಾನಿಸಲಾಯಿತು.
ಕೃತಿಕಾರ ಗಂಗಾಧರ ಕೊಳಗಿ ಸ್ವಾಗತಿಸಿದರು. ಲೇಖಕ ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು. ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ.ನಾಯ್ಕ ಕಡಕೇರಿ ವಂದಿಸಿದರು.
.
ನಿಮ್ಮ ಕಾಮೆಂಟ್ ಬರೆಯಿರಿ