ವಿಪಕ್ಷಗಳ ಸಭಾತ್ಯಾಗದ ಮಧ್ಯೆ ಆಸ್ತಿ ತೆರಿಗೆ ವಿಧೇಯಕಕ್ಕೆ ಅಂಗೀಕಾರ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇ. ೫ ರಷ್ಟು ರಿಯಾಯ್ತಿ ನೀಡುವ ವಿಧಾನಸಭೆಯಿಂದ ಅಂಗೀಕೃತವಾಗಿದ್ದ ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿಗಳ ವಿಧೇಯಕ-೨೦೨೧ಕ್ಕೆ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಪರಿಷತ್‌ನಲ್ಲಿ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದರು.
ಎರಡೂ ಪಕ್ಷಗಳ ಸಭಾತ್ಯಾಗದ ನಡುವೆ ಯಾವುದೇ ಚರ್ಚೆ ಇಲ್ಲದೆ ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ-೨೦೨೧ ಹಾಗೂ ಕರ್ನಾಟಕ ಪುರಸಭೆಗಳ ೨ನೇ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ತಿನಲ್ಲಿ ಒಪ್ಪಿಗೆ ದೊರೆಯಿತು.
ಬಳಿಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮಂಡಿಸಿದ ಕರ್ನಾಟಕ ನಗರಪಾಲಿಕೆಗಳ ತಿದ್ದುಪಡಿ ವಿಧೇಯಕ-೨೦೨೧ಕ್ಕೆ ಸದನ ಅನುಮೋದನೆ ನೀಡಿತು.
ಈ ಎರಡು ವಿಧೇಯಕಗಳನ್ನು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜು ಸದನದಲ್ಲಿ ಮಂಡಿಸಿ ಮಾರ್ಚ್ ೩೧ರೊಳಗೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಶೇ. ೫ ರಷ್ಟು ರಿಯಾಯ್ತಿ ನೀಡಲಾಗುವುದು. ಈಗಾಗಲೇ ಪಾವತಿ ಮಾಡಿರುವವರಿಗೆ ಮುಂದಿನ ವರ್ಷದ ತೆರಿಗೆ ಪಾವತಿಯಲ್ಲಿ ಹೊಂದಿಸಿಕೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಅಕ್ಷೇಪಿಸಿದವು. ಕೊರೊನಾ ಸೋಂಕಿನ ಸಮಯದಲ್ಲಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಇಂಥ ಸಮಯದಲ್ಲಿ ಯಾರೂ ಬಾಡಿಗೆ ಕಟ್ಟಿಲ್ಲ. ಹೀಗಿರುವಾಗ ಸರ್ಕಾರ ತೆರಿಗೆ ಕಟ್ಟಿ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈಗಾಗಲೇ ಈ ಕಾಯ್ದೆ ಜಾರಿಯಲ್ಲಿದೆ. ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಶೇ. ೫ ಬದಲಿಗೆ ಶೇ. ೫೦ ರಷ್ಟು ರಿಯಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು. ಅದು ಸಾಧ್ಯವಾಗದಿದ್ದರೆ ಕಾಯ್ದೆಯನ್ನು ತಕ್ಷಣವೇ ಹಿಂದಕ್ಕೆ ಪಡೆದು ಚರ್ಚಿಸಿ, ಹೊಸದಾಗಿ ತನ್ನಿ ತಂದು ಮನವಿ ಮಾಡಿದರು.
ಮಧ್ಯೆ ಪ್ರವೇಶಿಸಿದ ಸಚಿವ ಎಂ.ಟಿ.ಬಿ. ನಾಗರಾಜು ಉತ್ತರ ನೀಡಲು ತಡಬಡಾಯಿಸಿದಾಗ ಅವರ ನೆರವಿಗೆ ಸಚಿವರಾದ ಅರವಿಂದ ಲಿಂಬಾವಳಿ, ಬೈರತಿ ಬಸವರಾಜು, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಧಾವಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ. ೫ ರಷ್ಟು ರಿಯಾಯ್ತಿ. ಈಗಾಗಲೇ ಪಾವತಿಸಿರುವವರಿಗೆ ಮುಂದಿನ ವರ್ಷದ ಪಾವತಿಯಲ್ಲಿ ರಿಯಾಯ್ತಿ ನೀಡಲಾಗುವುದು. ಈ ಕಾಯ್ದೆಯ ಉದ್ದೇಶ ಇಷ್ಟೆ. ಹೀಗಾಗಿ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್-ಜೆಡಿಎಸ್ ಸದಸ್ಯರು, ಸಂಕಷ್ಟದ ಸಮಯದಲ್ಲಿ ಬಾಡಿಗೆ ಕಟ್ಟುವುದೇ ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ತೆರಿಗೆ ಕಟ್ಟಲು ಹೇಗೆ ಸಾಧ್ಯ. ಕಾಯ್ದೆಯನ್ನು ವಾಪಸ್ ಪಡೆಯಿರಿ, ಇಲ್ಲವೇ ಶೇ. ೫೦ ರಷ್ಟು ರಿಯಾಯ್ತಿ ನೀಡಿ ಎಂದು ಪಟ್ಟು ಹಿಡಿದರು.ಈ ನಡುವೆ ಹಂಗಾಮಿ ಸಭಾಪತಿ ಎಂ.ಕೆ. ಪ್ರಾಣೇಶ್ ಕಾಯ್ದೆಗೆ ಪರ್ಯಾಲೋಚಿಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲ ಸದಸ್ಯರು ಸಭಾತ್ಯಾಗ ಮಾಡಿದರು.
ಈ ಎರಡೂ ಪಕ್ಷಗಳ ಅನುಪಸ್ಥಿತಿಯಲ್ಲಿ ಕಾಯ್ದೆಗಳಿಗೆ ಒಪ್ಪಿಗೆ ಪಡೆಯಲಾಯಿತು.

ಪ್ರಮುಖ ಸುದ್ದಿ :-   ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಸೇರಿ ನಾಲ್ವರು ಮತ್ತೆ ಪೊಲೀಸ್‌ ಕಸ್ಟಡಿಗೆ ; ಪವಿತ್ರಾಗೆ ನ್ಯಾಯಾಂಗ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement