ನವದೆಹಲಿ: ರಾಜ್ಯಸಭೆಯಿಂದ ನಿವೃತ್ತರಾದ ಗುಲಾಂ ನಬಿ ಆಜಾದ್ ಅವರನ್ನು ಗುಣಗಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾವೋದ್ವೇಗರಾಗಿ ಕಣ್ಣೀರು ಹಾಕಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್ ಅವರು ಸುದೀರ್ಘ ಸೇವೆ ಬಳಿಕ ನಿವೃತ್ತರಾದರು. ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಮೋದಿ ಭಾವೋದ್ವೇಗಕ್ಕೆ ಒಳಗಾದರು.
ರಾಜಕೀಯದಲ್ಲಿ ಪಕ್ಷ, ಸಿದ್ದಾಂತಗಳು ಬೇರೆ ಬೇರೆಯಾಗಿದ್ದಾಗ ಸಂಘರ್ಷವಾಗುವುದು, ವಾದ-ವಿವಾದಗಳು ಸಾಮಾನ್ಯ. ಆದರೆ, ಎಲ್ಲಕ್ಕಿಂತಲೂ ದೇಶ ಎಂಬ ವಿಷಯ ಬಂದಾಗ ಗುಲಾಂ ನಬಿ ಆಜಾದ್ ಅವರ ಬದ್ಧತೆ ಅನುಕರಣನೀಯ ಎಂದರು.
ಕೊರೊನಾ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರಿಂದ ನನಗೆ ಫೋನ್ ಬಂತು. ಸರ್ವಪಕ್ಷಗಳ ಸಭೆ ಕರೆಯುವಂತೆ ಸಲಹೆ ನೀಡಿದರು. ಅದು ಸರಿ ಎನಿಸಿ ನಾನು ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಿದ್ದೆ. ರಾಜಕೀಯವಾಗಿ ಏನೇ ಸಂಘರ್ಷಗಳಾದರೂ ವೈಯಕ್ತಿಕವಾಗಿ ಗುಲಾಂ ನಬಿ ಆಜಾದ್ ಮತ್ತು ನನ್ನ ನಡುವೆ ಕುಟುಂಬ ಸದಸ್ಯರಂತಹ ಅನ್ಯೋನ್ಯತೆ ಇದೆ ಎಂದರು.
ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ. ನಮ್ಮ ರಾಜ್ಯದಿಂದ ಕಾಶ್ಮೀರಕ್ಕೆ ಕೆಲವು ಯಾತ್ರಾರ್ಥಿಗಳು ಹೋಗಿದ್ದರು. ಭಯೋತ್ಪಾದಕರ ದಾಳಿಯಾಗಿ ಅವರಲ್ಲಿ ಕೆಲವರು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಗುಜರಾತ್ ಯಾತ್ರಾರ್ಥಿಗಳಿಗೆ ನೆರವು ನೀಡುವಂತೆ ರಕ್ಷಣಾ ಸಚಿವರಾಗಿದ್ದ ಪ್ರಣಬ್‍ಮುಖರ್ಜಿ ಅವರಿಗೆ ಫೋನ್ ಮಾಡಿದೆ. ಮಧ್ಯ ರಾತ್ರಿ ನನಗೆ ಕರೆ ಬಂತು. ಅದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರದ್ದಾಗಿತ್ತು. ಅವರು ಫೋನ್‍ನಲ್ಲೇ ಅಳುತ್ತಿರುವುದು ಜೋರಾಗಿ ಕೇಳಿಸುತ್ತಿತ್ತು. ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವು ಅವರ ಧ್ವನಿಯಲ್ಲಿತ್ತು ಎಂದು ಹೇಳುತ್ತಾ ರಾಜ್ಯಸಭೆಯಲ್ಲಿ ದುಃಖಿತರಾದರು. ಎ 2-3 ನಿಮಿಷ ಮಾತನಾಡಲು ಆಗದೆ ಗದ್ಗತಿರಾದ ಮೋದಿ ಅವರು, ಸಾವರಿಸಿಕೊಂಡು ಮತ್ತೆ ಗುಲಾಂ ನಬಿ ಆಜಾದ್ ಅವರ ಗುಣಗಾನ ಮಾಡಿದರು.
ನೀವು ರಾಜ್ಯಸಭೆಯಿಂದ ನಿವೃತ್ತರಾಗಬಹುದು. ಆದರೆ, ನಿಮ್ಮನ್ನು ನಿವೃತ್ತರಾಗಲು ಬಿಡುವುದಿಲ್ಲ. ಈ ದೇಶಕ್ಕೆ ನಿಮ್ಮ ಅನುಭವ, ಸಲಹೆ, ಮಾರ್ಗದರ್ಶನ ಬೇಕಿದೆ. ಎಂದರು.
ಸಚಿವ ರಾಮ್‍ದಾಸ್ ಅಠಾವಳೆ ಮಾತನಾಡಿ, ನಿಮ್ಮನ್ನು ಮರಳಿ ರಾಜ್ಯಸಭೆಯಲ್ಲಿ ನೋಡುತ್ತೇವೆ. ಒಂದು ವೇಳೆ ಕಾಂಗ್ರೆಸ್ ನಿಮ್ಮನ್ನು ಪುನರಾಯ್ಕೆ ಮಾಡದಿದ್ದರೆ ಪಕ್ಷ ಆಪ್‍ಪಿಐನಿಂದ ನಿಮ್ಮನ್ನು ಮರಳಿ ರಾಜ್ಯಸಭೆಗೆ ಕರೆತರುತ್ತೇವೆ ಎಂದು ಅಠಾವಳೆ ಹೇಳಿದಾಗ, ಗುಲಾಂ ನಬಿ ಆಜಾದ್ ಅವರಿಗೂ ಕಣ್ಣೀರು ಬಂತು.
ನಿಮ್ಮ ಕಾಮೆಂಟ್ ಬರೆಯಿರಿ