ನಿರೀಕ್ಷೆಯಂತೆ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ

ಬೆಂಗಳೂರು: ವಿಧಾನಪರಿಷತ್‍ನ ನೂತನ ಸಭಾಪತಿಯಾಗಿ ಜೆಡಿಎಸ್‍ನ ಬಸವರಾಜಹೊರಟ್ಟಿ ಮಂಗಳವಾರ ಆಯ್ಕೆಯಾದರು.
ಕಾಂಗ್ರೆಸ್ ಸದಸ್ಯರು ಧರಣಿ, ಗದ್ದಲ ನಡುವೆ ಹೊಟ್ಟಿ ಅವರು ಆಯ್ಕೆಯಾದರು. ಸುಮಾರು ೭ ಬಾರಿ ನಿರಂತರವಾಗಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿತ್ತಿರುವ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಎರಡನೇ ಅವಧಿಗೆ ವಿಧಾನಪರಿಷತ್ ಸಭಾಪತಿ ಹುದ್ದೆ ಅಲಂಕರಿಸಿದ್ದಾರೆ. ದೇಶದ ವಿಧಾನಪರಿಷತ್‍ನ ಇತಿಹಾಸದಲ್ಲೇ ಹೊರಟ್ಟಿ ಅವರು ಸುದೀರ್ಘವಾಗಿ ಸದಸ್ಯರಾಗುವ ಮೂಲಕ ಹಿರಿಯ ಸದಸ್ಯರು ಎಂಬ ದಾಖಲೆ ಬರೆದಿದ್ದಾರೆ.
ಈ ಮೊದಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು ಒಂದು ವರ್ಷ ಕಾಲ ಸಭಾಪತಿ ಹುದ್ದೆಯನ್ನೂ ಅಲಂಕರಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್-ಬಿಜೆಪಿಯ ಮೈತ್ರಿ ಅಭ್ಯರ್ಥಿಯಾಗಿ ಹೊರಟ್ಟಿ ಕಣಕ್ಕಿಳಿದಿದ್ದರು.
ಗದ್ದಲದ ನಡುವೆ ಸಭಾಪತಿ ಆಯ್ಕೆ:
ವಿಧಾನಪರಿಷತ್‍ನ ಕಾರ್ಯಕಲಾಪ ಪಟ್ಟಿಯ ಪ್ರಕಾರ ಮಂಗಳವಾರ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಸಭಾಪತಿಯ ಚುನಾವಣೆಗೆ ಸಮಯ ನಿಗದಿಯಾಗಿತ್ತು. ಸೋಮವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಅಂಗೀಕಾರಗೊಂಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಆರಂಭದಿಂದಲೇ ಧರಣಿ ಆರಂಭಸಿದರು. ಧರಣಿ ಹಿಂಪಡೆದು ಸಭಾಪತಿ ಚುನಾವಣೆಗೆ ಸಹಕಾರ ನೀಡುವಂತೆ ಸ್ಥಾನದಲ್ಲಿದ್ದ ಎಂ.ಕೆ.ಪ್ರಾಣೇಶ್ ಹಲವು ಸಲ ಮನವಿ ಮಾಡಿದರು.
ಆದರೆ, ಕಾಂಗ್ರೆಸ್‌ ಸದಸ್ಯರು ಗೋಹತ್ಯೆ ನಿಷೇಧ ಮಸೂದೆ ವಿಭಜನೆ ಮತಕ್ಕೆ ಹಾಕದೆ ಧ್ವನಿಮತದ ಮೂಲಕ ಅಂಗೀರಿಸಿದ್ದನ್ನು ವಿರೋಧಿಸಿ ಧರಣಿ ಮುಂದುವಸಿದರು. ಹಾಗೂ ಗದ್ದಲದ ನಡುವೆ ಸಭಾಪತಿ ಸ್ಥಾನ ಚುನಾವಣೆ ಬೇಡ, ಮುಂದೂಡಿ ಎಂದು ಮನವಿ ಮಾಡಿದ್ದರು.
ಸಭಾಪತಿ ಹುದ್ದೆ ಅಂತ್ಯಂತ ಗೌರವಯುತವಾದದ್ದು, ಆಯ್ಕೆಗೆ ಸಮಯ ನಿಗದಿಯಾಗಿದೆ. ಸದಸ್ಯರು ಧರಣಿ ಕೈಬಿಟ್ಟು ಚುನಾವಣೆಗೆ ಸಹಕಾರ ನೀಡಿ ಎಂದು ಉಪಸಭಾಪತಿ ಪ್ರಾಣೇಶ್ ಪುನಃ ಮನವಿ ಮಾಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಭಾನಾಯಕ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾಶ್ರೀನಿವಾಸಪೂಜಾರಿ ಧರಣಿ ಕೈಬಿಡುವಂತೆ ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿದರು.
ಆದರೂ ಧರಣಿ ಮುಂದುವರಿದಾ ಉಪಸಭಾಪತಿಯವರು ಅನಿವಾರ್ಯವಾಗಿ ಚುನಾವಣೆ ಪ್ರಕ್ರಿಯೆ ಕೈಗೆತ್ತುಕೊಂಡರು. ಬಸವರಾಜಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಚುನಾಯಿಸಬೇಕೆಂದು ಜೆಡಿಎಸ್‍ನ ಕೆ.ವಿ.ನಾರಾಯಣಸ್ವಾಮಿ ಮೊದಲ ಪ್ರಸ್ತಾವನೆ ಮಂಡಿಸಿದರು. ಜೆಡಿಎಸ್‍ನ ಕೆ.ಟಿ.ಶ್ರೀಕಂಠೇಗೌಡ ಪ್ರಸ್ತಾವನೆ ಅನುಮೋದಿಸಿದರು.
ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‍ನ ನಸೀರ್ ಅಹಮ್ಮದ್ ಪರವಾಗಿ ಪ್ರಸ್ತಾವನೆ ಮಂಡಿಸುವಂತೆ ಸದಸ್ಯ ಎಂ.ನಾರಾಯಣಸ್ವಾಮಿ ಅವರಿಗೆ ಉಪಸಭಾಪತಿ ಸೂಚನೆ ನೀಡಿದರು. ಧರಣಿಯಲ್ಲಿ ಭಾಗಿಯಾಗಿದ್ದ ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ವಾಪಸ್ ಬಂದು, ಕಾನೂನು, ಸಂವಿಧಾನ ಬಾಹಿರವಾಗಿ ಗೋಹತ್ಯಾ ನಿಷೇಧ ವಿಧೇಯಕ ಅಂಗೀಕಾರ ಮಾಡಲಾಗಿದೆ. ಧರಣಿ ನಡೆಯುತ್ತಿರುವ ವೇಳೆ ಸಭಾಪತಿ ಚುನಾವಣೆ ಬೇಡ, ಎಂದು ಮನವಿ ಮಾಡಿದರು. ಆದರೆ, ಉಪಸಭಾಪತಿ ಅವರು ಹೊರಟ್ಟಿ ಅವರ ಪರವಾಗಿ ಎರಡನೇ ಪ್ರಸ್ತಾವನೆ ಮಂಡಿಸಲು ಅವಕಾಶ ನೀಡಿದರು. ಜೆಡಿಎಸ್‍ನ ಎನ್.ಅಪ್ಪಾಜಿಗೌಡ ಪ್ರಸ್ತಾವನೆ ಮಂಡಿಸಿದರೆ, ಕೆ. ತಿಪ್ಪೇಸ್ವಾಮಿ ಅನುಮೋದಿಸಿದರು.
ಕಾಂಗ್ರೆಸ್‍ನ ನಸೀರ್ ಅಹಮ್ಮದ್ ಪರವಾಗಿ ಎರಡನೇ ಪ್ರಸ್ತಾವನೆ ಮಂಡಿಸಲು ಬಿ.ಕೆ.ಹರಿಪ್ರಸಾದ್ ಅವರಿಗೆ ಉಪ ಸಭಾಪತಿ ಸೂಚನೆ ನೀಡಿದರು, ಪ್ರಸ್ತಾವನೆ ಮಂಡನೆಯಾಗಲಿಲ್ಲ. ಹೀಗಾಗಿ ಸಭಾಪತಿ ಸ್ಥಾನಕ್ಕೆ ಎರಡು ಪ್ರಸ್ತಾವನೆಗಳು ಮಂಡನೆಯಾಗಿವೆ ಎಂದು ಪ್ರಕಟಿಸಿದ ಉಪಸಭಾಪತಿ ಅವರು, ಬಸವರಾಜ ಹೊರಟ್ಟಿ ಅವರು ಒಬ್ಬರೇ ಕಣದಲ್ಲಿರುವುದರಿಂದ ಸರ್ವಾನುಮತದಿಂದ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು. ಕಾಂಗ್ರೆಸ್ ಸದಸ್ಯರು ವಿರೋಧಿಸಿ ಘೋಷಣೆ ಕೂಗಿದರು.
. ಬಿಜೆಪಿಯ ಸಚಿವರು, ಸದಸ್ಯರು, ಜೆಡಿಎಸ್‍ನ ಸದಸ್ಯರು ನೂತನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಅಭಿನಂದಿಸಿದರು.ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ನೂತನ ಸಭಾಪತಿಯವರನ್ನು ಪೀಠದ ಬಳಿ ಬರುವಂತೆ ಆಹ್ವಾನಿಸಿದರು. ಸಭಾಪತಿಯವರು ಬಿಜೆಪಿಯ ಸದಸ್ಯರ ಭಾಗದಿಂದ ಹಾದು ಹೋಗಿ ಎಲ್ಲರನ್ನೂ ಅಭಿನಂದಿಸಿ ಬಲಭಾಗದಿಂದ ಪೀಠ ಏರಿದರು.
ಉಪಸಭಾಪತಿ ಪ್ರಾಣೇಶ್ ನೂತನ ಸಭಾಪತಿ ಅಭಿನಂದಿಸಿದರು ನಂತರ ಸಚಿವರಾದ ಕೋಟಾ ಶ್ರೀನಿವಾಸಪೂಜಾರಿ, ಬಸವರಾಜ ಬೊಮ್ಮಾಯಿ, ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ ಮೊದಲಾದವರು ನೂತನ ಸಭಾಪತಿಯವರನ್ನು ಅಭಿನಂದಿಸಿದರು.

ಪ್ರಮುಖ ಸುದ್ದಿ :-   ಹುಕ್ಕಾ, ಹುಕ್ಕಾ ಬಾರ್‌ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement