ಶಿಕ್ಷಕ ಸಮುದಾಯದ ಧ್ವನಿ ಹೊರಟ್ಟಿಗೆ ಈಗ ಸಭಾಪತಿ ಗೌರವ

ನಿಸ್ವಾರ್ಥ ಸೇವೆಯಿಂದ ಜನಮೆಚ್ಚಿನ ನಾಯಕರಾಗಿರುವ ರಾಜಕಾರಣಿಗಳಲ್ಲಿ ಸಂಖ್ಯೆ ತುಂಬ ಕಡಿಮೆ. ಅಂತಹ ಮಹಾನ್ ಮುತ್ಸದ್ದಿಗಳಲ್ಲಿ ವಿಧಾನ ಪರಿಷತ್ತಿನ ನೂತನ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಒಬ್ಬರು.
ಕುದುರೆ ವ್ಯಾಪಾರದಿಂದ, ಕಲುಷಿತ ಸಾಗರವಾಗಿರುವ ಇಂದಿನ ಆಯಾರಾಂ-ಗಯಾರಾಂ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದಿನಿಂದಲೂ ಪಕ್ಷ ನಿಷ್ಠೆ ಹೊಂದಿ, ಜನಾನುರಾಗಿಯಾಗಿ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ ಕೆಲವು ರಾಜಕಾರಣಿಗಳಲ್ಲಿ ಬಸವರಾಜ ಹೊರಟ್ಟಿ ಪ್ರಮುಖರಾಗಿದ್ದಾರೆ.
೧೯೮೦ರಿಂದ ಸತತವಾಗಿ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗುತ್ತಿರುವ ಬಸವರಾಜ ಹೊರಟ್ಟಿ ಅವರು ರಾಜ್ಯದ ಸಮಸ್ತ ಶಿಕ್ಷಕ ಬಳಗದ ನಂಬಿಗಸ್ಥ ನಾಯಕರು.
ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಶಿಕ್ಷಕರ ಧ್ವನಿಯಾಗಿ ಶಿಕ್ಷಕರ ಏಳಿಗೆಗಾಗಿ ಮತ್ತು ಉತ್ತರ ಕರ್ನಾಟಕದ ಏಳಿಗೆಗಾಗಿ ಸತತವಾಗಿ ಶ್ರಮಿಸುತ್ತಿರುವ ಬಸವರಾಜ ಹೊರಟ್ಟಿಯವರು ಈ ಹಿಂದೆ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದಾಗ ಮಾಡಿದ ಕೆಲಸ ಕಾರ್‍ಯಗಳು ಅಜರಾಮರವಾಗಿವೆ. ಅಂತೆಯೇ ಹೋರಾಟದ ಮೂಲಕವೇ ಬೆಳೆಯುತ್ತ ಬಂದವರು.  ಶಿಕ್ಷಕರ ಬೇಡಿಕೆಗಾಗಿ ಧಾರವಾಡದಲ್ಲಿ ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರವನ್ನೇ ಅಲ್ಲಾಡಿಸಿದವರು.
ವಿಧಾನಪರಿಷತ್ತಿನ ಅತ್ಯಂತ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಯವರು ಶುದ್ಧಹಸ್ತರು. ಇವರು ಆಗಿನ ಅವಿಭಜಿತ ವಿಜಾಪುರ ಜಿಲ್ಲೆಯ ಮುದೋಳ ತಾಲೂಕಿನ ಚಿಕ್ಕಲಗುಂಡಿಯಲ್ಲಿ ೧೪-೦೪-೧೯೪೬ ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ಶಿವಲಿಂಗಪ್ಪ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಹೊರಟ್ಟಿಯವರು ಮುಂದಿನ ಜೀವನಕ್ಕೆ ಅವ್ವನವರು ಆಸರೆಯಾದರು. ಅವ್ವನ ಪ್ರೀತಿ, ಕರುಣೆಗಳ ಅಮೃತವನ್ನುಂಡು ಬೆಳೆದ ಹೊರಟ್ಟಿಯವರು ತಮ್ಮ ಊರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪೂರೈಸಿ ಮುಂದಿನ ಶಿಕ್ಷಣಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿ, ಬಿ.ಎ. ಮತ್ತು ಎಂ.ಪಿಇಡಿ ಮಾಡಿ ಹುಬ್ಬಳ್ಳಿಯ ಲ್ಯಾಮಿಂಗಟನ್ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಸಮಾಜ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಅವರು ವಿಶೇಷವಾಗಿ ಶಿಕ್ಷಕರ ಧ್ವನಿಯಾಗಿ ಶಿಕ್ಷಕರ ಹಕ್ಕುಗಳಿಗಾಗಿ ಹೋರಾಡತೊಡಗಿದಾಗ, ಅವರಲ್ಲಿನ ಶಿಕ್ಷಕ ಸಮುದಾಯದತ್ತದ ಪ್ರತಿಬದ್ಧತೆ ಗಮನಿಸಿ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆಮಾಡಿಕೊಂಡು ಶಿಕ್ಷಕ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿ ೧೯೮೦ರಲ್ಲಿ ಮೊದಲಬಾರಿಗೆ ವಿಧಾನ ಪರಿಷತ್ ಚುನಾವಣೆಯ ಮೂಲಕ ವಿಧಾನ ಪರಿಷತ್ತಿಗೆ ತೆರಳಿದರು. ಅಂದಿನಿಂದ ಸುಮಾರು ೪೦ ವರ್ಷಗಳ ಸುದೀರ್ಘ ಅವಧಿಯ ವರೆಗೆ ರಾಜಕೀಯ ಮುತ್ಸದ್ಧಿಯಾಗಿ ಹೊರಹೊಮ್ಮಿ ಜನತಾದಳ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ.
೨೦೦೪-೨೦೧೦ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ೨೦೦೪ ರಿಂದ ೨೦೦೬ ರ ವರೆಗೆ ಅವರನ್ನು ಅಂದಿನ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಸಣ್ಣ ಉಳಿತಾಯ ಖಾತೆ ಸಚಿವರಾಗಿ, ಹಲವಾರು ಜನಪರ ಮತ್ತು ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೊಳಿಸಿದರು. ೨೦೦೬-೦೭ ರಲ್ಲಿ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಸಮಗ್ರ ಅಭಿವೃದ್ಧಿಯನ್ನು ತಂದು ಇಲಾಖೆಯಲ್ಲಿ ಚುರುಕು ತಂದರು. ಹೀಗಾಗಿ ಇಂದು ಇಡೀ ರಾಜ್ಯವೇ ಇವರನ್ನು ಶ್ಲಾಘಿಸುತ್ತದೆ.  ಇದೀಗ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ಸಮಾಜಮುಖಿಯಾಗಿರುವ ಹೊರಟ್ಟಿಯವರು ಹಲವಾರು ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಕ್ರೀಡಾ ಪರಿಷತ್ತಿನ ಉಪಾಧ್ಯಕ್ಷರಾಗಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ, ಆಯಾ-ಸಮಿತಿಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಜೊತೆ ಶಿಕ್ಷಣ-ಕಾನೂನು ಮತ್ತು ಸಂಸದೀಯ ವ್ಯವಹಾರಗಳ ವಿಷಯ ಸಮಿತಿ ಹಾಗೂ ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಸಕ್ರೀಯವಾಗಿ ಸೇವೆಯನ್ನು ನೀಡಿದ್ದಾರೆ. ದೈಹಿಕ ಶಿಕ್ಷಕರ ಮತ್ತು ಗ್ರಂಥಪಾಲಕರ ಧ್ವನಿಯಾಗಿದ್ದ ಹೊರಟ್ಟಿಯವರು ಸಾರ್ವಜನಿಕ ಗ್ರಂಥಾಲಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಪೂರೂಪದ ರಾಜಕಾರಣಿಯಾಗಿ, ಸೋಲಿಲ್ಲದ ಸರದಾರನಾಗಿ, ಶಿಕ್ಷಕರ ಕಣ್ಮಣಿಯಾಗಿರುವ ಹೊರಟ್ಟಿ ಕೃಷಿಯಲ್ಲಿಯೂ ಆಸಕ್ತಿ ಹೊಂದಿರುವವರು. ೭೫ರ ವಯಸ್ಸಿನಲ್ಲಿಯೂ ಇಂದಿಗೂ ಕೂಡ ಕ್ರೀಯಾಶೀಲರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ವಿಧಾನ ಪರಿಷತ್ತಿನಲ್ಲಿ ಹೊಸ ಶಕೆ ಆರಂಭವಾಗಲಿ ಎಂಬುದು ಎಲ್ಲರ ಸದಾಶಯ.  -ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement