ಮುಂಬೈ ಸೆಲೆಬ್ರಿಟಿಗಳ ಟ್ವೀಟ್‌ಗಳ ತನಿಖೆ ನಿರ್ಧಾರವೂ…ಮಹಾರಾಷ್ಟ್ರದ ಸರ್ಕಾರದ ತುಘಲಕ್‌ ದರ್ಬಾರವೂ..

ಮೂರು ಪಕ್ಷಗಳು ಸೇರಿ ರಚನೆಯಾಗಿರುವ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ಮೂರು ಕುದುರೆಗಳ ಮೇಲೆ ನಡೆಯುತ್ತಿದೆ. ಆದರೆ ಪ್ರತಿ ಕುದುರೆಯೂ ಒಂದೊಂದು ದಿಕ್ಕಿನತ್ತ ಸಾಗಿದರೆ ಸರ್ಕಾರದ ನಿಲುವುಗಳು ಹಾಗೂ ನಿರ್ಧಾರಗಳು ಸಹ ಅಸಂಭದ್ಧವಾಗಿಯೇ ಇರುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಉದ್ಧವ ಠಾಕ್ರೆ ಸರ್ಕಾರ ಎರಡು ದಿನಗಳ ಹಿಂದೆ ಮುಂಬೈ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರ ಬೆಂಬಲಿಸಿ ಮಾಡಿದ ಟ್ವಿಟ್‌ಗಳ ಬಗ್ಗೆ ತನಿಖೆ ಮಾಡಲು ಕೈಗೊಂಡಿರುವ ನಿರ್ಧಾರ.
ವಿದೇಶಿ ಸೆಲೆಬ್ರಿಟಿಗಳಾದ ರಿಹಾನ್ನಾ ಮತ್ತು ಗ್ರೇಟಾ ಥನ್‌ಬರ್ಗ್ ಅವರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿ ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪಕ್ಕೆ ಆಕ್ಷೇಪಿಸಿ ಹಾಗೂ ಈ ವಿಚಾರದಲ್ಲಿ ಕೇಂದ್ರದ ನಿಲುವು ಬೆಂಬಲಿಸಿ ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಮತ್ತು ಇನ್ನೂ ಕೆಲವರ ಟ್ವೀಟ್‌ ಮಾಡಿದ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನಿಖೆ ಮಾಡುತ್ತದೆಯಂತೆ..!
ನಿರ್ದಿಷ್ಟ ಹೈಕಮಾಂಡ್‌ ಅಥವಾ ನಿಯಂತ್ರಕರು ಇಲ್ಲದ ಕಾರಣ ಮಹಾರಾಷ್ಟ್ರದ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಘಟಬಂಧನದ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಯಾವುದೇ ಮಾರ್ಗಸೂಚಿ ಅಥವಾ ರೀತಿ-ನೀತಿಗಳೇ ಇಲ್ಲ ಎಂಬುದಕ್ಕೆ ಈ ನಿರ್ಧಾರ ಪುರಾವೆ ನೀಡುತ್ತದೆ.
ಈ ಮೊದಲು ತನ್ನ ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಿ ತನ್ನ ವಿಲಕ್ಷಣ ಕಾರ್ಯನಿರ್ವಹಣೆಯಿಂದ ಕೋರ್ಟ್‌ನಿಂದ ತರಾಟೆಗೊಳಗಾಗಿದ್ದ ಅಘಾಡಿ ಸರ್ಕಾರ ಆನಂತರದಲ್ಲಿ ಅನಗತ್ಯವಾಗಿ ಕರ್ನಾಟಕದ ಬೆಳಗಾವಿ ಗಡಿವಿವಾದವನ್ನು ಮತ್ತೆ ಕೆದಕಿ ಜನರನ್ನು ಬೇರೆಡೆ ಸೆಳೆದು ತಾನು ಮುಜುಗರದಿಂದ ತಪ್ಪಿಸಿಕೊಳ್ಳಲು ನೋಡಿತು. ಈಗ ಮತ್ತೊಂದು ಇಂಥದ್ದೇ ತುಘಲಕ್‌ ನಿರ್ಧಾರ ತೆಗೆದುಕೊಂಡಿದೆ.
ಈ ಅಘಾಡಿ ಸರ್ಕಾರದ ವಿಲಕ್ಷಣ ನಡವಳಿಕೆ ಮುಂದುವರಿದಿದ್ದು ರೈತರ ಹೋರಾಟದ ಬಗ್ಗೆ ಪಾಪ್‌ ತಾರೆ ರಿಹಾನ್ನಾ ಹಾಗೂ ಹಸಿರು ಕಾರ್ಯಕರ್ತೆ ಗ್ರೆಟ್ಟಾ ಥನ್‌ಬರ್ಗ್‌ ಮಾಡಿದ ಟ್ವೀಟ್‌ಗೆ ಪ್ರತಿಯಾಗಿ ಸಚಿನ್‌ ತೆಂಡುಲ್ಕರ್‌, ಲತಾ ಮಂಗೇಶ್ಕರ್‌, ಬಾಲಿವುಟ್‌ ನಟ ಅಕ್ಷಯಕುಮಾರ ಮೊದಲಾದವರು ಮಾಡಿದ ಟ್ವೀಟ್‌ ಬಗ್ಗೆ ಅವರು ಕೇಂದರ ಸರ್ಕಾರದಿಂದ ಟ್ವೀಟ್‌ ಮಾಡಿದ್ದಾರೆಯೇ ಎಂಬ ತನಿಖೆ ಮಾಡುತ್ತದೆಯಂತೆ…! ಈ ಮಾತನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್‌ ಅವರೇ ಈ ಬಗ್ಗೆ ಮೊನ್ನೆ ಸ್ವತಃ ಹೇಳಿದ್ದಾರೆ…!!
ಏನಿದು ವಿಲಕ್ಷಣ ತನಿಖೆ : ಪಾಪ್‌ ತಾರೆ ಹಿಹಾನ್ನಾ ಹಾಗೂ ಸ್ವೀಡನ್‌ನ ಹಸಿರು ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಮಾಡಿದ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿರುವ ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಮತ್ತು ಇನ್ನೂ ಕೆಲವರು ದೇಶದ ಸಾರ್ವಭೌಮತೆ ವಿಚಅರದಲ್ಲಿ ವಿದೇಶಿಯರ ಹಸ್ತಕ್ಷೇಪ ಸಲ್ಲದು ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅವರು ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡದಲ್ಲಿ ಟ್ವೀಟ್‌ ಮಾಡಿದ್ದಾರೆಯೇ ಎಂಬುದರ ಕುರಿತು ಮಹಾರಾಷ್ಟ್ರದ ಪೊಲೀಸರು ತನಿಖೆ ನಡೆಸಲಿದ್ದಾರಂತೆ…!
ಇದು ಯಾರನ್ನಾದರೂ ಟ್ವೀಟ್‌ ಮಾಡಲು ಒತ್ತಾಯಿಸಲಾಗಿದಯೇ ಎಂಬುದರ ಬಗ್ಗೆ ತನಿಖೆ ಮಾಡಬೇಕಾದರೆ ಟ್ವೀಟ್‌ ಮಾಡಿದವರಿಂದ ದೂರು ಬರಬೇಕಿತ್ತು. ಅವರಿಂದ ಬಂದಿಲ್ಲ. ಮತ್ತು ಮಾಡಿದವರೆಲ್ಲರೂ ಖ್ಯಾತನಾಮರು. ಆದರೆ ಮಹಾರಾಷ್ಟ್ರ ಸರ್ಕಾರ ಕೊಡುವ ಕಾರಣವೇ ಬೇರೆ. ಅಂದರೆ ಟ್ವೀಟ್‌ ಮಾಡಿದವರೆಲ್ಲ ಏಕಕಾಲದಲ್ಲಿ ಟ್ವೀಟ್‌ ಮಾಡಿದ್ದಾರೆ. ಹಾಗೂ ಇವರು ಮಾಡಿದ ಟ್ವೀಟ್‌ ಒಂದೇ ತರಹ ಇದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ಈ ಬಗ್ಗೆ ಮನವಿ ನೀಡಿ ಒತ್ತಾಯಿಸಿದೆಯಂತೆ. ಅದಕ್ಕಾಗಿ ಮಹಾರಾಷ್ಟ್ರ ಕಾಂಗ್ರೆಸ್‌ ಒತ್ತಾಯ ಮಾಡಿದ ತಕ್ಷಣವೇ ಈ ವಿಷಯದ ಬಗ್ಗೆ ಮನವರಿಕೆಯಾಗಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿಯೂಬಿಟ್ಟರು..! ಟ್ವೀಟ್‌ ಮಾಡಿದವರು ನಾವು ಒತ್ತಡದಲ್ಲಿ ಟ್ವೀಟ್‌ ಮಾಡಿದ್ದೇವೆ ಎಂದು ದೂರು ನೀಡದೆ, ಟ್ವೀಟ್‌ನಲ್ಲಿ ಮಾನಹಾನಿ ಮಾಡುವ ಅಥವಾ ಹಿಂಸೆಗೆ ಪ್ರಚೋದನೆ ನೀಡುವ ಅಥವಾ ರಾಷ್ಟ್ರ ವಿರೋಧಿ ಭಾವನೆ ಯಾವುದೂ ಇಲ್ಲ. ಹೀಗಾಗಿ ಮಹರಾಷ್ಟ್ರದ ಸರ್ಕಾರ ಮಾಡುತ್ತಿರುವ ಈ ತನಿಖೆ ಅದು ಹೇಗೆ ತನಿಖೆಗೆ ವಿಷಯವಾಗುತ್ತದೆ ಎಂಬುದು ಜನಸಾಮಾನ್ಯರ ಸಾಮಾನ್ಯ ಜ್ಞಾನಕ್ಕೆ ಹೊಳೆಯುತ್ತಿಲ್ಲ ಹಾಗೂ ನಿಲುಕತ್ತಲೂ ಇಲ್ಲ.
ಮೇಲ್ನೋಟಕ್ಕೆ ಇದು ಮಹಾರಾಷ್ಟ್ರದ ಕಾಂಗ್ರೆಸ್‌ನವರು ಮನವಿ ನೀಡಿದ ನಂತರತೆಗೆದುಕೊಂಡ ನಿರ್ಧಾರ ಎಂದು ಅನ್ನಿಸಿದರೂ ಈ ಬಗ್ಗೆ ತನಿಖೆ ನಡೆಸುವ ಆಲೋಚನೆ ಗೃಹ ಸಚಿವರಿಗೆ ಬಂದಿದ್ದೇ ಎನ್‌ಸಿಪಿಯ ಸಂಸ್ಥಾಪಕ ಹಾಗೂ ಪರಮೋಚ್ಛ ನಾಯಕ ಶರದ್‌ ಪವಾರ್‌ ಅವರು ಸಚಿನ್‌ ತೆಂಡುಲ್ಕರ್‌ ಅವರ ಟ್ವೀಟ್‌ಗೆ ಆಕ್ಷೇಪಿಸಿ ಹೇಳಿಕೆ ನೀಡಿದ ನಂತರ ಎಂಬುದು ಅನೇಕರಿಗೆ ಗೊತ್ತಿರುವ ವಿಷಯ. ಶರದ್‌ ಪವಾರ್‌ ಅವರು ಸಚಿನ್‌ ತೆಂಡುಲ್ಕರ್‌ ಅವರು ರೈತ ಹೋರಾಟದ ವಿಷಯದ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು ಟ್ವೀಟ್‌ ಮಾಡಬೇಕಿತ್ತು ಎಂದು ಆಕ್ಷೇಪಿಸಿದ್ದರು. ಆಗಲೇ ಮಹಾರಾಷ್ಟ್ರದ ಅಘಾಡಿ ಸರ್ಕಾರಕ್ಕೆ ತನಿಖೆಯ ಮಾಡುವಹೊಸ ಹೊಳಹು ಸಿಕ್ಕಿದೆ..! ಹೀಗಾಗಿ ಶರದ್‌ ಪವಾರ್‌ ಅವರ ಪಕ್ಷವಾದ ಎನ್‌ಸಿಪಿಯವರೇ ಆದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರು ತಮ್ಮ ಬಾಸ್‌ ಶರದ್‌ ಪವಾರ್‌ ಮೆಚ್ಚಿಸಲು ಇಂಥ ನಗೆಪಾಟಲಿನ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಸೇರಿ ರಚನೆಯಾದ ಮಹಾರಾಷ್ಟ್ರದ ಅಘಾಡಿ ಸರ್ಕಾರ ಇಂಥ ವಿಲಕ್ಷಣ ಹಾಗೂ ಹಾಸ್ಯಾಸ್ಪದ ನಿರ್ಧಾರಗಳಿಂದಲೇ ಸುದ್ದಿಯಾಗುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement