ತೆಂಡುಲ್ಕರ್‌, ಲತಾ ಮಂಗೇಶ್ಕರ್‌ ವಿರುದ್ಧ ತನಿಖೆಗೆ ಆದೇಶ:ರಾಜ್ಯಸಭೆಯಲ್ಲಿ ಚರ್ಚೆಗೆ ನೋಟಿಸ್‌

ನವ ದೆಹಲಿ: ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಆದೇಶಿಸಿರುವ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಜೆಪಿ ಸಂಸದ ಭಗವತ್ ಕರದ್ ಗುರುವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆ ನೋಟಿಸ್ ನೀಡಿದ್ದಾರೆ. ಶೂನ್ಯವೇಳೆಯಲ್ಲಿ ಸಂಸದರು ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಎತ್ತಬಹುದಾಗಿದ್ದು, ರೈತರ ಪ್ರತಿಭಟನೆ ಕುರಿತು ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಲತಾ ಮಂಗೇಶ್ಕರ್ ಸೇರಿದಂತೆ ಅನೇಕರು ಮಾಡಿದ ಟ್ವಿಟ್ಟರ್ ಪೋಸ್ಟ್‌ಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಆದೇಶಿಸಿದ್ದು, ಈ ಬಗ್ಗೆ ಚರ್ಚಿಸಲು ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಸಮಯ ನೀಡುವಂತೆ ಕರಡ್‌ ನೋಟಿಸ್‌ ನೀಡಿದ್ದಾರೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವೀಟ್‌ ಮಾಡುವಂತೆ ಕೆಲವು ಪ್ರಸಿದ್ಧ ವ್ಯಕ್ತಿಗಳ ಮೇಲೆ ಒತ್ತಡ ಹೇರಲಾಗಿದೆ ಎಂಬ ಆರೋಪದ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ತನಿಖೆ ನಡೆಸಲಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಅಘಾಡಿ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಕೆಲವು ಸೆಲೆಬ್ರಿಟಿಗಳ ಟ್ವೀಟ್‌ಗಳೊಂದಿಗೆ ಬಿಜೆಪಿಗೆ ಸಂಬಂಧವಿದೆ ಮತ್ತು ಕೇಸರಿ ಪಕ್ಷವು ಅವರ ಮೇಲೆ ಒತ್ತಡ ಹೇರಿದ ನಂತರ ಈ ಬಗ್ಗೆ ಟ್ವೀಟ್‌ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಕೋರಿದ ನಂತರ ದೇಶಮುಖ್ ಈ ಹೇಳಿಕೆ ನೀಡಿದ್ದಾರೆ.
ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್‌ನ ಹಿನ್ನೆಲೆ ಗಾಯನದ ದಂತಕತೆ ಗಾಯಕ ಲತಾ ಮಂಗೇಶ್ಕರ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ರೈತರ ಪ್ರತಿಭಟನೆ ಕುರಿತು ಪಾಪ್‌ ಗಾಯಕಿ ರಿಹಾನ್ನಾ ಹಾಗೂ ಸ್ವೀಡನ್‌ ಹಸಿರು ಕಾರ್ಯಕರ್ತೆ ಗ್ರೆಟ್ಟಾ ಥನ್‌ಬರ್ಗ್‌ ಮಾಡಿದ್ದ ಟ್ವೀಟ್‌ಗೆ ಆಕ್ಷೇಪಿಸಿ ಇತ್ತೀಚೆಗೆ #IndiaTogether ಮತ್ತು #IndiaAgainstPropaganda ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್‌ ಮಾಡಿದ್ದರು, ಆ ನಂತರದಲ್ಲಿ ಈ ಸೆಲೆಬ್ರಿಟಿಗಳು ಟ್ವೀಟ್‌ ಮಾಡಿದ್ದರ ಹಿಂದೆ ಬಿಜೆಪಿಯ ಒತ್ತಡವಿದೆ , ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಮನವಿ ಮಾಡಿತ್ತಿ. ನಂತರದಲ್ಲಿ ಈ ಬಗ್ಗೆ ತನಿಖೆ ನಡೆಸುವುದಾಗಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ತನಿಖೆ ನಡೆಸುವುದಾಗಿ ಹೇಳಿದ್ದರು. ಇದೀಗ ಸಂಸತ್ತಿನ ವರೆಗೂ ತಲುಪಿದ್ದು, ರಾಜ್ಯಸಭೆಯಲ್ಲಿ ಗುರುವಾರ(ಇಂದು) ಶೂನ್ಯವೇಳೆಯಲ್ಲಿ ಇದಕ್ಕೆ ಸಮಯ ನೀಡಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಭಗವತ್‌ ಕರದ್‌ ನೋಟಿಸ್‌ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಜೂನ್ 18ರಂದು ನಡೆದ ಯುಜಿಸಿ-ನೆಟ್ ಪರೀಕ್ಷೆ ರದ್ದುಗೊಳಿಸಿದ ಸರ್ಕಾರ : ಸಿಬಿಐ ತನಿಖೆಗೆ ಆದೇಶ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement