ಬೆಂಗಳೂರು: ಎಟಿಎಂಗೆ ಸೇರಿದ 64 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದ ವಾಹನ ಚಾಲಕ ಎಚ್‍ಡಿ ಕೋಟೆಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಈತ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ದೊಡ್ಡಯಾಚನಹಳ್ಳಿ ಗ್ರಾಮದವ. ಈತನಿಂದ 36 ಲಕ್ಷ ಹಣವನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಹಣವನ್ನು ಎಲ್ಲಿಟ್ಟಿದ್ದಾನೆ ಎಮಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿರುವ ಸೆಕ್ಯೂರ್ ಮತ್ತು ವ್ಯಾಲ್ಯೂ ಎಜೆನ್ಸಿಯ ವಾಹನದ ಚಾಲಕನಾಗಿ ಯೋಗೇಶ್ ಕೆಲಸ ಮಾಡುತ್ತಿದ್ದನ. ಬೆಂಗಳೂರಿನ ದೊಡ್ಡಬಿದರಕಲ್ಲಿನಲ್ಲಿ ವಾಸವಾಗಿದ್ದ.ಫೆ.2ರಂದು ರಾಜಾಜಿನಗರದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‍ನ ಎಟಿಎಂಗೆ ಹಣ ತುಂಬಲು ಸಿಬ್ಬಂದಿ ಹೋಗಿದ್ದಾಗ 64 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಈತ ನಂತರ ತನ್ನ ಅತ್ತೆ ಮಗಳನ್ನು ಗೌಪ್ಯ ಸ್ಥಳಕ್ಕೆ ಕರೆಸಿಕೊಂಡು ಇಬ್ಬರು ಪರಾರಿಯಾಗಿದ್ದರು.ಉತ್ತರ ವಿಭಾಗದ ಡಿಸಿಪಿ ಆರೋಪಿ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದರು. ಈ ತಂಡಗಳು ರಾಜ್ಯ, ಹೊರರಾಜ್ಯಗಳಲ್ಲೂ ಶೋಧ ನಡೆಸಿದರೂ ಈತನ ಸುಳಿವು ಸಿಕ್ಕಿರಲಿಲ್ಲ. ಮೈಸೂರು ಜಿಲ್ಲೆಯ ಎಚ್‍ಡಿ ಕೋಟೆಯಲ್ಲಿ ಅತ್ತೆ ಮಗಳ ಜತೆ ಬಾಡಿಗೆ ಮನೆ ಮಾಡಿಕೊಂಡು ವಾಸವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿ 36 ಲಕ್ಷ ಹಣವನ್ನು ವಶಕ್ಕೆ ಪಡೆದು ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಉಳಿದ ಹಣದ ಬಗ್ಗೆ ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ