ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಸ್ಪಿನ್ನರ್‌ ಆರ್.‌ ಅಶ್ವಿನ್

ಚೆನ್ನೈ: ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ೨೦೦ ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ವಿಶೇಷ ದಾಖಲೆಯನ್ನು ಭಾರತ ತಂಡದ ಆಫ್‌ ಸ್ಪಿನ್ನರ್‌ ಆರ್.‌ ಅಶ್ವಿನ್‌ ಸೋಮವಾರ ತಮ್ಮದಾಗಿಸಿಕೊಂಡರು.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಇನಿಂಗ್ಸ್‌ನಲ್ಲಿ ಅಶ್ವಿನ್‌ ಈ ನೂತನ ವಿಶ್ವ ದಾಖಲೆ ಬರೆದಿದ್ದಾರೆ. 143 ವರ್ಷಗಳ ಇತಿಹಾಸದಲ್ಲಿ ೨೦೦ ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆದ ಮೊದಲ ಬೌಲರ್‌ ಅವರಾಗಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಅಶ್ವಿನ್‌ 43 ರನ್‌ ನೀಡಿ 5 ವಿಕೆಟ್‌ಗಳನ್ನು ಉರುಳಿಸಿ ಇಂಗ್ಲೆಂಡ್‌ ತಂಡವನ್ನು 134 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಇಂಗ್ಲೆಂಡ್‌ನ ಕೆಳ ಕ್ರಮಾಂಕದ ಆಟಗಾರ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ಸ್ಟುವರ್ಟ್‌ ಬ್ರಾಡ್‌ ಅವರನ್ನು ಔಟ್‌ ಮಾಡುವ ಮೂಲಕ ಅಶ್ವಿನ್‌ ಈ ಸಾಧನೆ ಮಾಡಿದರು.
ಅಶ್ವಿನ್‌ ತಮ್ಮ ವೃತ್ತಿ ಬದುಕಿನಲ್ಲಿ ಈವರೆಗೆ ಒಟ್ಟು 391 ವಿಕೆಟ್‌ಗಳನ್ನು ಪಡೆದಿದ್ದು, ಇದರಲ್ಲಿ 200 ವಿಕೆಟ್‌ಗಳು ಎಡಗೈ ಬ್ಯಾಟ್ಸ್‌ಮನ್‌ಗಳದ್ದು ಎಂಬುದು ವಿಶೇಷ. ಎಡಗೈ ಬ್ಯಾಟ್ಸ್‌ಮನ್‌ಗಳ ಎದುರು ಅಶ್ವಿನ್‌ ಅಮೋಘ 19.55ರ ಸರಾಸರಿ ಹೊಂದಿದ್ದು, ಬಲಗೈ ಬ್ಯಾಟ್ಸ್‌ಮನ್‌ಗಳ ಎದುರು 31.24ರ ಸರಾಸರಿ ಹೊಂದಿದ್ದಾರೆ.
ಅಶ್ವಿನ್‌ಗೂ ಮುನ್ನ ಎಡಗೈ ಬ್ಯಾಟ್ಸ್‌ಮನ್‌ಗಳ ಎದುರು ಅತ್ಯಂತ ಯಶಸ್ವಿ ಬೌಲರ್‌ ಎಂಬ ಖ್ಯಾತಿ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್‌ ಅವರ ಹೆಸರಲ್ಲಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದ ವಿಶ್ವ ದಾಖಲೆ ಹೊಂದಿರುವ ಮುರಳೀಧರನ್ 191 ಬಾರಿ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ್ದರು.
ಇಂಗ್ಲೆಂಡ್‌ನ ಅನುಭವಿ ಬಲಗೈ ವೇಗದ ಬೌಲರ್‌ ಜೇಮ್ಸ್‌ ಆಂಡರ್ಸನ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ 611 ವಿಕೆಟ್‌ಗಳನ್ನು ಪಡೆದಿರುವ ಆಂಡರ್ಸನ್‌ 190 ಬಾರಿ ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್‌ ಮೆಗ್ರಾತ್‌ ತಾವು ಪಡೆದ ಒಟ್ಟು 563 ವಿಕೆಟ್‌ಗಳಲ್ಲಿ 172 ವಿಕೆಟ್‌ಗಳು ಎಡಗೈ ಬ್ಯಾಟ್ಸ್‌ಮನ್‌ಗಳದ್ದಾಗಿದೆ. ಶೇನ್‌ ವಾರ್ನ್‌ ಅವರ 708 ವಿಕೆಟ್‌ಗಳಲ್ಲಿ 172 ವಿಕೆಟ್‌ಗಳು ಎಡಗೈ ಬ್ಯಾಟ್ಸ್‌ಮನ್‌ಗಳದ್ದಾಗಿದೆ.
ಹರ್ಭಜನ್‌ ದಾಖಲೆ ಮುರಿದ ಅಶ್ವಿನ್: ಚೆಪಾಕ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಎರಡನೇ ದಿನವಾದ ಭಾನುವಾರ ಆರ್‌ ಅಶ್ವಿನ್‌ ಟೀಮ್‌ ಇಂಡಿಯಾದ ಅನುಭವಿ ಆಫ್‌ ಸ್ಪಿನ್ನರ್‌ ಹರ್ಭಜನ್ ಸಿಂಗ್‌ ಅವರು ತವರು ನೆಲದಲ್ಲಿ ಪಡೆದಿದ್ದ ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಭಜ್ಜಿ ಭಾರತೀಯ ಪಿಚ್‌ಗಳಲ್ಲಿ 265 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್‌ ಈಗ 268 ವಿಕೆಟ್‌ಗಳ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಅನಿಲ್‌ ಕುಂಬ್ಳೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ₹ 1,800 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶ : ಇಬ್ಬರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement