ನೂತನ ಕೃಷಿ ಕಾಯ್ದೆ ಸಮರ್ಥಿಸಿಕೊಂಡ ಪ್ರಧಾನಿ

ಲಖನೌ: ರೈತರ ಪ್ರತಿಭಟನೆ ಬೆಂಬಲಿಸುವ ಟೂಲ್‌ಕಿಟ್‌ ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದು ವಿವಾದಕ್ಕೆ ತಿರುಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ರಾಜ್‌ಭರ್’ (ಒಬಿಸಿ) ಸಮುದಾಯದ ಆದರ್ಶ ಪುರುಷ ರಾಜ ಸುಹೇಲ್ದೇವ್ ಪ್ರತಿಮೆಗೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೊಸ ಕೃಷಿ ಕಾನೂನುಗಳಿಂದಾಗಿ ರೈತರು ತಮ್ಮ ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ಈ ಕಾಯ್ದೆಗಳ ವಿರೋಧಿಗಳು ಸುಳ್ಳು ಹಬ್ಬಿಸುತ್ತಿದ್ದಾರೆ. ಆದರೆ, ಈ ಹೊಸ ಕಾಯ್ದೆಗಳಿಂದ ಸಣ್ಣ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಧಾನಿ ಹೇಳಿದರು.
ಈ ವರ್ಷ ಉತ್ತರಪ್ರದೇಶದಲ್ಲಿ 65 ಲಕ್ಷ ಟನ್ ಭತ್ತ ಖರೀದಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು. ಹಾಗೆಯೇ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಿಸಲು ಕೇಂದ್ರವು ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡಿದೆ ಎಂದು ಹೇಳಿದರು.
ಉತ್ತರಪ್ರದೇಶದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರಾಜ್‌ಭರ್ ಸಮುದಾಯದ ಜನಸಂಖ್ಯೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು ಸುಹೇಲ್ದೇವ್ ಅವರ ಪ್ರತಿಮೆಗೆ ಅಡಿಪಾಯ ಹಾಕುತ್ತಿರುವುದು ರಾಜಕೀಯ ಮಹತ್ವವನ್ನೂ ಪಡೆದುಕೊಂಡಿದೆ. 2019ರ ಲೋಕಸಭೆ ಚುನಾವಣೆಗೂ ಮೊದಲು ಚ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡಿರುವುದರಿಂದ ರಾಜ್‌ಭರ್‌ ಸಮುದಾಯವನ್ನು ಸೆಳೆಯಲು ಬಿಜೆ‍ಪಿ ಪ್ರಯತ್ನಿಸುತ್ತಿದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement