ಲಕ್ನೋ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲು ಎಂದು ಹೇಳಲಾದ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಹಿಳೆಯನ್ನು ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ.
ಮರಣದಂಡನೆ ದಿನಾಂಕ ಇನ್ನೂ ನಿಗದಿಪಡಿಸಲಾಗಿಲ್ಲ, ಪಶ್ಚಿಮ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಮೂಲದ ಶಬ್ನಮ್ ತನ್ನ ಪ್ರಿಯಕರ ಸಲೀಂನಿಗಾಗಿ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದು, ಸುಪ್ರೀಂ ಕೋರ್ಟ್ ಸಹ ಆಕೆ ಮರಣ ದಂಡನೆ ತೀರ್ಪನ್ನು ಎತ್ತಿ ಹಿಡಿದಿದೆ. ಭಾರತದ ರಾಷ್ಟ್ರಪತಿಗಳು ಸಹ ಅವರ ಕರುಣೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈಗ ಅವಳಿಗೆ ಮರಣ ದಂಡನೆ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ದಿನಾಂಕ ನಿಗದಿಯಾಗಬೇಕಿದೆ. ಮಥುರಾ ಜೈಲಿನಲ್ಲಿ ನಿರ್ಮಿಸಲಾದ ಏಕೈಕ ಮಹಿಳಾ ನೇಣುಗಂಬದ ಕೋಣೆಯಲ್ಲಿ ಅವಳನ್ನು ಗಲ್ಲಿಗೇರಿಸಲಾಗುತ್ತದೆ.
ನಿರ್ಭಯಾ ಅವರ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ಮಾಡಿದ ಮೀರತ್‌ನ ಪವನ್ ಜಲ್ಲಾಡ್, ಈ ಗಲ್ಲಿಗೇರಿಸುವ ಮನೆಗೆ ಹಲವಾರು ಬಾರಿ ಭೇಟಿ ನೀಡಿದ್ದು, ಕೆಲವು ಮಾರ್ಪಾಡುಗಳನ್ನು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 14, 2008 ರಂದು, ಅಮ್ರೋಹಾ ಜಿಲ್ಲೆಯ ಹಸನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬವಾಂಖೇಡಾ ಗ್ರಾಮದ ಶಿಕ್ಷಕಿ ಶೌಕತ್ ಅಲಿಯವರ ಪುತ್ರಿ ಶಬ್ನಮ್ ತನ್ನ ತಂದೆ, ತಾಯಿ ಮತ್ತು 10 ತಿಂಗಳ ಸೋದರಳಿಯ ಸೇರಿದಂತೆ ತನ್ನ ಕುಟುಂಬದ ಏಳು ಸದಸ್ಯರನ್ನು ಕ್ರೂರವಾಗಿ ಕೊಲೆ ಮಾಡಿದ್ದಳು. . ಅವಳು ತನ್ನ ಪ್ರಿಯಕರ ಸಲೀಂನೊಂದಿಗೆ ಸೇರಿ ಮೊದಲು ಮಂಪರು ಬರುವ ಮಾತ್ರೆ ಹಾಕಿದ ಆಹಾರವನ್ನು ಇಡೀ ಕುಟುಂಬಕ್ಕೆ ಬಡಿಸಿದ್ದಳು ಮತ್ತು ಎಲ್ಲರೂ ಪ್ರಜ್ಞಾಹೀನರಾದಾಗ, ಅವಳು ಅವರನ್ನು ಕೊಂದುಹಾಕಿದ್ದಳು.
ಭೌಗೋಳಿಕ ಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರಾದ ಶಬ್ನಮ್ ಅನಕ್ಷರಸ್ಥ ಕಾರ್ಮಿಕ ಸಲೀಂ ಪ್ರೇಮಕ್ಕೆ ಸಿಲುಕಿದ್ದರು. ಸಲೀಂ ಅವರೊಂದಿಗಿನ ಸಂಬಂಧದ ವಿರುದ್ಧ ಆಕೆಯ ಕುಟುಂಬ ಆಕ್ಷೇಪಿಸಿದ್ದರಿಂದ ಅದು ಕುಟುಂಬದ ಏಳು ಜನರ ಹತ್ಯೆಯಲ್ಲಿ ಪರ್ಯಾವಸನವಾಗಿತ್ತು.
ಶಬ್ನಮ್ ಮತ್ತು ಸಲೀಮ್ ಇಬ್ಬರನ್ನೂ ಜಿಲ್ಲಾ ಪೊಲೀಸರು ಬಂಧಿಸಿದ ನಂತರ ಹತ್ಯಾಕಾಂಡದಲ್ಲಿ ತನ್ನ ಪಾತ್ರವನ್ನು ಸಲೀಂ ಒಪ್ಪಿಕೊಂಡಿದ್ದಾನೆ. ನಂತರ, ಅಪರಾಧ ಕೃತ್ಯದಲ್ಲಿ ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲು ಸಲೀಂ ಪೊಲೀಸರಿಗೆ ಸಹಕರಿಸಿದ್ದ..
ಅಧಿಕಾರಿಗಳು ಗಲ್ಲಿಗೇರಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ದೇಶದಲ್ಲಿ ಸ್ವಾತಂತ್ರ್ಯದ ನಂತರ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಖೈದಿ ಎಂಬುದಕ್ಕೆ ಶಬ್ನಮ್ ಪಾತ್ರರಾಗಲಿದ್ದಾರೆ.
ಸುಮಾರು 150 ವರ್ಷಗಳ ಹಿಂದೆ ಮಥುರಾ ಜೈಲಿನಲ್ಲಿ ಮೊದಲ ಮಹಿಳಾ ನೇಣುಮನೆಯನ್ನು ನಿರ್ಮಿಸಲಾಗಿತ್ತು, ಆದರೆ ಸ್ವಾತಂತ್ರ್ಯದ ನಂತರ ಅಲ್ಲಿ ಯಾವುದೇ ಮಹಿಳೆಯನ್ನು ಗಲ್ಲಿಗೇರಿಸಲಾಗಿಲ್ಲ. ಮೂಲಗಳ ಪ್ರಕಾರ, ಲಕ್ನೋ ಮೂಲದ ರಾಮಶ್ರಿ ಎಂಬ ಮಹಿಳೆಗೆ 1998 ರ ಏಪ್ರಿಲ್ 6 ರಂದು ಮರಣದಂಡನೆ ವಿಧಿಸಲಾಯಿತು.ಆದರೆ ಜೈಲಿನೊಳಗಿನ ಮಗುವಿಗೆ ಜನ್ಮ ನೀಡಿದ ನಂತರ ಕೊನೆಯ ಕ್ಷಣದಲ್ಲಿ ಆಕೆಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿತ್ತು.
ಮಥುರಾ ಜೈಲು ಅಧೀಕ್ಷಕ ಶೈಲೇಂದ್ರ ಕುಮಾರ್ ಮೈತ್ರೇಯ ಮಾತನಾಡಿ, ಗಲ್ಲಿಗೇರಿಸುವ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ, ಆದರೆ ಈ ಪ್ರಕ್ರಿಯೆಗೆ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಡೆತ್ ವಾರಂಟ್ ಹೊರಡಿಸಿದ ಕೂಡಲೇ ಶಬ್ನಂನನ್ನು ಗಲ್ಲಿಗೇರಿಸಲಾಗುವುದು ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ