ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್‌ ಖಾನ್‌ ಭಾಷಣ ರದ್ದು!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾ ಸಂಸತ್ತನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ದ್ವೀಪರಾಷ್ಟ್ರ ರದ್ದುಪಡಿಸಿದೆ.
ಫೆಬ್ರವರಿ 22 ರಿಂದ ಇಮ್ರಾನ್‌ ಖಾನ್ ಎರಡು ದಿನಗಳ ಪ್ರವಾಸಕ್ಕಾಗಿ ಕೊಲಂಬೊಗೆ ಪ್ರಯಾಣಿಸಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಸಭೆ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವುದರ ಜೊತೆಗೆ, ಅವರು ಫೆಬ್ರವರಿ 24 ರಂದು ಶ್ರೀಲಂಕಾ ಸಂಸತ್ತಿನಲ್ಲಿ ಭಾಷಣ ಮಾಡಬೇಕಿತ್ತು. ಆದರೆ ಭಾಷಣವನ್ನು ಶ್ರೀಲಂಕಾ ರದ್ದುಪಡಿಸಿದೆ.
ಕೊವಿಡ್‌-19 ಕಾರಣದಿಂದ ಖಾನ್‌ ಭಾಷಣ ರದ್ದುಪಡಿಸಲಾಗಿದೆ ಎಂದು ಸ್ಪೀಕರ್‌ ಮಹಿಂದಾ ಅಬೆಯವರ್ಧನ ತಿಳಿಸಿದ್ದಾರೆ ಎಂದು ವಿದೇಶಾಂತ ಕಾರ್ಯದರ್ಶಿ ಜಯನಾಥ ಕೊಲಂಬೆಜ್‌ ತಿಳಿಸಿದ್ದಾರೆ.
ಖಾನ್‌ ತಮ್ಮ ಭಾಷಣದಲ್ಲಿ ಕಾಶ್ಮೀರ ಸಮಸ್ಯೆ ಎತ್ತಬಹುದು ಇದರಿಂದ ಭಾರತದೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗುವ ಕಾರಣದಿಂದ ಇಮ್ರಾನ್‌ ಖಾನ್‌ ಭಾಷಣ ರದ್ದುಪಡಿಸಲಾಗಿದೆ. ಅಲ್ಲದೇ ಖಾನ್‌ ಶ್ರೀಲಂಕಾದ ಮುಸಲ್ಮಾನರ ಹಕ್ಕುಗಳ ಬಗ್ಗೆ ಮಾತನಾಡಿದರೆ ಶ್ರೀಲಂಕಾ ಸರಕಾರವನ್ನು ಪೇಚಿಗೆ ಸಿಲುಕುವ ಸಾಧ್ಯತೆಯಿಂದಾಗಿ ಭಾಷಣ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೇ ಕೊರೊನಾದಿಂದ ಸಾವನ್ನಪ್ಪಿದ ಎಲ್ಲ ಧರ್ಮಿಯರನ್ನು ದಹನ ಮಾಡಬೇಕೆಂದು ಶ್ರೀಲಂಕಾ ನಿಯಮ ರೂಪಿಸಿತ್ತು. ಇದಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆಬ್ರವರಿ ಆರಂಭದಲ್ಲಿ ಮುಸಲ್ಮಾನರಿಗೆ ಶವಸಂಸ್ಕಾರದಿಂದ ವಿನಾಯಿತಿ ನೀಡಿತ್ತು. ಈ ಕುರಿತು ಪಾಕ್‌ ಪ್ರಧಾನಿ ಶ್ರೀಲಂಕಾ ಸರಕಾರವನ್ನು ಮುಜುಗುರಕ್ಕೀಡು ಮಾಡಬಹುದೆಂಬುದು ಕೂಡ ಭಾಷಣ ರದ್ದು ಮಾಡಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement