ನವ ದೆಹಲಿ: ‘ಟೂಲ್ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ದಿಶಾ ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಕೊನೆಗೊಂಡಿತ್ತು ಮತ್ತು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು.
ದೆಹಲಿ ಪೊಲೀಸರ ಪರ ಹಾಜರಾದ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್ ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದರೂ ದಿಶಾ ಅವರು ತಮ್ಮ ಮೇಲಿರುವ ಆಪಾದನೆಯನ್ನು ಸಹ-ಆರೋಪಿಗಳಾದ ಶಾಂತನು ಮತ್ತು ನಿಕಿತಾಗೆ ವರ್ಗಾಯಿಸಿದ್ದಾರೆ. ಆದ್ದರಿಂದ ಅವರನ್ನು ಕೂಡ ವಿಚಾರಣೆ ಮಾಡಬೇಕಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು.
ಫೆಬ್ರವರಿ 22 ರಂದು ತನಿಖೆಗೆ ಸೇರ್ಪಡೆಗೊಳ್ಳುವಂತೆ ಪೊಲೀಸರು ಶಾಂತನುಗೆ ನೋಟಿಸ್ ಕಳುಹಿಸಿದ್ದಾರೆ ಎಂದು ದೆಹಲಿ ಪೊಲೀಸರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಾರಾಷ್ಟ್ರದ ವಕೀಲ ನಿಕಿತಾ ಜಾಕೋಬ್ ಮತ್ತು ಪರಿಸರ ಕಾರ್ಯಕರ್ತ ಶಾಂತನು ಮುಲುಕ್, ಅವರನ್ನು ಸಹ ಪೊಲೀಸರು ಆರೋಪಿಗಳೆಂದು ಹೆಸರಿಸಲಾಗಿದೆ. ಗುರುವಾರ, ಅವರು ಬಾಂಬೆ ಹೈಕೋರ್ಟ್ಗೆ ತೆರಳಿದ ನಂತರ ಅವರಿಗೆ ಬಂಧನದಿಂದ ರಕ್ಷಣೆ ನೀಡಲಾಯಿತು.
ದಿಶಾ ಪರವಾಗಿ ಹಾಜರಾದ ವಕೀಲ ಸಿದ್ಧಾರ್ಥ್ ಅಗರ್ವಾಲ್ ಕಾನೂನು ಸಂದರ್ಶನವೊಂದನ್ನು ಕೋರಿದರು ಮತ್ತು ನ್ಯಾಯಾಲಯವು ಅವಳ ಸಲಹೆಗಾರರನ್ನು ಲಾಕ್ ಅಪ್ ನಲ್ಲಿ ಭೇಟಿಯಾಗಲು ಅವಕಾಶ ಮಾಡಿಕೊಟ್ಟಿದೆ.
ಫೆಬ್ರವರಿ 13 ರ ಮಧ್ಯಾಹ್ನ ದಿಶಾ ಅವರನ್ನು ದೆಹಲಿ ಪೊಲೀಸರು ಉತ್ತರ ಬೆಂಗಳೂರಿನ ಮನೆಯಿಂದ ಬಂಧಿಸಿ ವಿಮಾನದಲ್ಲಿ ದೆಹಲಿಗೆ ಒಯ್ದಿದ್ದರು. ಮರುದಿನ, ಅವರನ್ನು ದೆಹಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಅವರಿಗೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಿಧಿಸಲಾಗಿತ್ತು. ಫೆಬ್ರವರಿ 19ರ ಶುಕ್ರವಾರ ಅದು ಕೊನೆಗೊಂಡಿತ್ತು.
ಗುರುವಾರ, ದಿಶಾ ಅವರು ಮೂರು ಇಂಗ್ಲಿಷ್ ಚಾನೆಲ್‌ಗಳಾದ ನ್ಯೂಸ್ 18, ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ, ಟಿವಿ ಚಾನೆಲ್‌ಗಳಲ್ಲಿನ ವರದಿಗಳು ಮತ್ತು ಅವರ ವಿರುದ್ಧದ ಮಾಧ್ಯಮ ವಿಚಾರಣೆಯು ಅವರಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ನೇತೃತ್ವದ ನ್ಯಾಯಪೀಠ ಶುಕ್ರವಾರ ಮನವಿಯನ್ನು ಆಲಿಸಿತ್ತು ಮತ್ತು ಮಾಧ್ಯಮ ಪ್ರಸಾರದ ನಂತರ ದಿಶಾ ಅವರ ಬಂಧನವು ಸಂವೇದನಾಶೀಲ ವರದಿಯಾಗಿದೆ ಎಂದು ತಿಳಿಸಿತು,
ದಿಶಾ ಬಂಧನದ ನಂತರ ಬೆಂಗಳೂರು ಮತ್ತು ಚೆನ್ನೈನಲ್ಲಿ ಪ್ರತಿಭಟನೆಗಳು ನಡೆದವು. ದಿಶಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಫೆಬ್ರವರಿ 15 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ