೨ಎ ಮೀಸಲಾತಿಗೆ ಸೇರ್ಪಡೆ ಮಾಡಿ: ಬೆಂಗಳೂರು ಸಮಾವೇಶದಲ್ಲಿ ಪಂಚಮಸಾಲಿಗಳ ಹಕ್ಕೊತ್ತಾಯ

ಬೆಂಗಳೂರು: ೨ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು.
ಸಮಾವೇಶಕ್ಕೆ ವಿಶೇಷವಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಲಬುರಗಿ, ಬಾಗಲಕೋಟೆ, ವಿಜಯಪುರ,ಯಾದಗಿರಿ, ಬೀದರ್, ರಾಯಚೂರು,ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಬೆಳಗಾವಿ ಮೊದಲಾದ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು 3 ಬಿ ಯಿಂದ ತಮ್ಮನ್ನು ಕೂಡಲೇ 2 ಎಗೆ ಸೇರ್ಪಡೆ ಮಾಡುವ ಕುರಿತಾಗಿ ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎ ಪಟ್ಟಿಗೆ ಸೇರ್ಪಡೆ ಮಾಡಲು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಯಿತು.
ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಪಂಚಮಸಾಲಿ ಸಮಾಜಕ್ಕೆ ಬಿಜೆಪಿ ಸರ್ಕಾರ ನ್ಯಾಯ ಒದಗಿಸಿ ಕೊಡಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಒಂದು ವೇಳೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ, ಲಿಂಗಾಯತ ಪಂಚಮಸಾಲಿ ಶ್ರೀಗಳ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ಇಂದೇ ತಮ್ಮ ಮೀಸಲಾತಿ ಬೇಡಿಕೆಯನ್ನು ಪೂರೈಸಬೇಕು. ಇಲ್ಲದಿದ್ದರೆ ನಮ್ಮ ನಡಿಗೆ ವಿಧಾನಸೌಧದ ಕಡೆಗೆ ಮುಂದುವರೆಯಲಿದೆ. . ಲಿಂಗಾಯತ ಸಮಾಜ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಅಡಿಯಲ್ಲಿ ಮೀಸಲಾತಿ ನೀಡಬೇಕೆಂದು 2012ರಿಂದಲೂ ಹೋರಾಟ ಮಾಡುತ್ತಿದೆ. ಸರ್ಕಾರಕ್ಕೆ ಹಲವು ಗಡುವುಗಳನ್ನು ನೀಡಿದೆ. ನಮ್ಮವರೇ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ನಾವು ಆಗ್ರಹಿಸಿದ್ದೆವು. ಆದರೆ, ನಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ನಾವು ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಸಮಾವೇಶ ನಡೆಸಬೇಕಾಯಿತು ಎಂದರು.
ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂಬ ಬೇಡಿಕೆಗೆ ಮೂರು ದಶಕಗಳ ಇತಿಹಾಸವಿದೆ. ಮೀಸಲಾತಿ ಪಡೆದೇ ನಾವು ಹಿಂದಿರುಗುವುದು. ಅಲ್ಲಿಯವರೆಗೂ ಹೋರಾಟ ಕೈಬಿಡುವುದಿಲ್ಲ ಎಂದರು.
ನಮ್ಮ ಪಾದಯಾತ್ರೆ ನ್ಯಾಯಯುತವಾಗಿದೆ. ಇಡೀ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಐತಿಹಾಸಿಕ ಪಾದಯಾತ್ರೆ ನಡೆಸಿದ ಸಮಾಜ ಪಂಚಮಸಾಲಿ ಸಮಾಜ. ನಾವು ಮಠ ಕಟ್ಟಿಲ್ಲ ಎಂದು ಸಮಾಜದವರು ಹೇಳುತ್ತಿದ್ದರು. ಈಗ ಸಮಾಜದವರಿಗೆ ನ್ಯಾಯ ಒದಗಿಸಿಕೊಡಲು ಪಾದಯಾತ್ರೆ ಮಾಡಿದ್ದೇನೆ. ಜುಲೈ 23ರಿಂದ ಅಕ್ಟೋಬರ್ 23ರ ವರೆಗೆ ಜೋಳಿಗೆ ಹಿಡಿದು ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದರು.
ಸರ್ಕಾರದಿಂದ ಭರವಸೆ ಬೇಕಾಗಿಲ್ಲ. ಸಮಾವೇಶ ಮುಗಿಯುವುದರೊಳಗೆ ಆದೇಶ ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ವಿಧಾನಸೌಧದ ಕಡೆ ನಡೆಯಲಿದೆ. ಕೃಷಿಕರಾಗಿ ದುಡಿಯುತ್ತಿರುವ ಪಂಚಮಸಾಲಿ ಸಮಾಜ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಸಮಾಜದ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸಮಾಜಕ್ಕೆ ಮೀಸಲಾತಿ ನೀಡಿದರೆ ಅವರಿಗೆ ಋಣಿಯಾಗಿರುತ್ತೇವೆ. ಲಿಂಗಾಯತ ಸಮಾಜದ ಒಳಪಂಗಡಗಳಲ್ಲಿ ನಮ್ಮದು ದೊಡ್ಡ ಸಮುದಾಯ. ಆದರೆ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಇಲ್ಲದ ಕಾರಣ ಹಿಂದುಳಿಯುತ್ತಾ ಬಂದಿದೆ. ಕೃಷಿಯನ್ನು ಕುಲಕಸುಬು ಮಾಡಿಕೊಂಡ ಸಮುದಾಯಕ್ಕೆ ಮೀಸಲಾತಿ ನೀಡುವುದು ಸರ್ಕಾರದ ಕರ್ತವ್ಯ..
ಲಿಂಗಾಯತರ ಪ್ರಶ್ನಾತೀತ ನಾಯಕ ಯಡಿಯೂರಪ್ಪ. ಅವರಿಗೆ ನಮ್ಮ ಬೆಂಬಲ ಸದಾ ಇದೆ. 15 ಮಂದಿ ಶಾಸಕರನ್ನು, ಇಬ್ಬರು ಸಂಸದರನ್ನು ನೀಡಿ ಅವರ ಅಧಿಕಾರವನ್ನು ಗಟ್ಟಿಮಾಡಿದ್ದೇವೆ. ಅವರೇ ಮೀಸಲಾತಿ ಕಲ್ಪಿಸದಿದ್ದರೆ ಮತ್ಯಾರು ಕೊಡುತ್ತಾರೆ ಎಂದು ಸ್ವಾಮೀಜಿ ಕೇಳಿದರು.
ನಮ್ಮ ಸಮುದಾಯದ ಶಾಸಕರು, ಸಚಿವರು, ಸಂಸದರಿಗೆ ನಾವು ರಾಜೀನಾಮೆ ನೀಡಿ ಎಂದು ಹೇಳುವುದಿಲ್ಲ. ಅವರು ಸರ್ಕಾರದೊಳಗೆ ಇದ್ದುಕೊಂಡು ಹೋರಾಟ ಮಾಡಿದರೆ, ನಾವು ಹೊರಗೆ ಇದ್ದುಕೊಂಡು ಹೋರಾಟ ಮಾಡುತ್ತೇವೆ. ಅದಾಗದಿದ್ದರೆ ವಿಧಾನಸೌಧಕ್ಕೆ ಹೋಗಿ ಮೀಸಲಾತಿ ತೆಗೆದುಕೊಂಡು ಬರುತ್ತೇವೆ ಎಂದು ಎಚ್ಚರಿಸಿದರು.
ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಜಗದ್ಗುರುಗಳು ಕಳೆದ ಆಕ್ಟೋಬರ್ 28ರಂದು ಬೆಳಗಾವಿಯ ಸುವರ್ಣವಿಧಾನಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಉಪವಾಸ ಕೈಬಿಡುವಂತೆ ಸಂಪರ್ಕಿಸಿದಾಗ ಕಳೆದ ನವಂಬರ್ 28ರ ಒಳಗಾಗಿ ಸರ್ಕಾರ ಸ್ಪಂದಿಸಬೇಕು ಎಂಬ ಷರತ್ತಿನೊಂದಿಗೆ ಸತ್ಯಾಗ್ರಹ ಹಿಂಪಡೆದಿದ್ದರು.ಬೇಡಿಕೆ ಈಡೇರದೆ ಇದ್ದಾಗ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಹಾಗೂ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಜ.14ರಿಂದ ಕೂಡಲ ಸಂಗಮದಿಂದವಿಧಾನ ಸೌಧದವರೆಗೆ ಪಂಚ ಲಕ್ಷ ಹೆಜ್ಜೆಗಳು ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ, ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ,ಲಕ್ಷ್ಮೀ ಹೆಬ್ಬಾಳ್ಕರ, ಮಠಾಧೀಶರು ವಿವಿಧ ಪಕ್ಷಗಳ 22ಕ್ಕೂ ರಾಜಕೀಯ ಮುಖಂಡರು  ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಜಾರ್ಖಂಡದಲ್ಲಿ ಕಾಂಗ್ರೆಸ್ಸಿಗೆ ಆಘಾತ : ಪಕ್ಷದ ಏಕೈಕ ಸಂಸದೆ ಬಿಜೆಪಿಗೆ ಸೇರ್ಪಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement