ವಸತಿ ಸಮುಚ್ಚಯಗಳಿಗೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕಡ್ಡಾಯ

ಬೆಂಗಳೂರು:ವಸತಿ ಸಮುಚ್ಚಯಗಳು ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಬಗ್ಗೆ ಹಾರ್ವರ್ಡ್ ಇಂಡಿಯಾ ಕಾನರೆನ್ಸ್ ವತಿಯಿಂದ ಏರ್ಪಡಿಸಿದ್ದ ಭವಿಷ್ಯದತ್ತ ಸುಸ್ಥಿರ ಸಾರಿಗೆ ವರ್ಚುಯಲ್ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಜಿಂಗ್ ವ್ಯವಸ್ಥೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸಿದರೆ ಸಾಲದು. ಎಲ್ಲೆಡೆ ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಇರಲೇಬೇಕಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಬ್ಯಾಟರಿ ಚಾಲಿತ ವಾಹನಗಳು ಮಾರುಕಟ್ಟೆಗೆ ಬರಲಿವೆ. ಗ್ರಾಹಕರು ಬ್ಯಾಟರಿಗಳನ್ನು ಬಾಡಿಗೆಗೆ ಪಡೆಯಬಹುದು. ಎಲ್ಲೆಡೆ ಪೆಟ್ರೋಲ್ ಬಂಕ್‍ಗಳಂತೆ ಬ್ಯಾಟರಿ ಬಂಕ್‍ಗಳೂ ತಲೆ ಎತ್ತಲಿವೆ. ಗ್ರಾಹಕನಿಗೆ ಕಡಿಮೆ ದರದಲ್ಲಿ ವಾಹನವೂ ದೊರೆಯುತ್ತದೆ. ಮಾಲಿನ್ಯ ತಡೆಯಲು ಇದು ಅನಿವಾರ್ಯ. ಅದಕ್ಕೆ ಬೇಕಾದ ಸಬ್ಸಿಡಿ, ರಿಯಾಯಿತಿ ವಿದ್ಯುತ್ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇಶದಲ್ಲೇ ಮೊತ್ತ ಮೊದಲಿಗೆ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅನುಷ್ಠಾನಕ್ಕೆ ತಂದಿರುವ ಕರ್ನಾಟಕವು ಹೊಗೆರಹಿತ ವಾಹನಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದೆ, ಎಲೆಕ್ಟ್ರಿಕ್ ವಾಹನಗಳಿಗೆ ವಾಣಿಜ್ಯ ಬಳಕೆ ವಿದ್ಯುತ್‍ಗಿಂತ ಅಗ್ಗದ ದರದಲ್ಲಿ ವಿದ್ಯುತ್ ಸಿಗಲಿದೆ ಎಂದರು.
ಎಲೆಕ್ಟ್ರಿಕ್ ವಾಹನ ತಯಾರಿಕೆ ಹಾಗೂ ಅದಕ್ಕೆ ಪೂರಕ ಕೈಗಾರಿಕೆಗಳನ್ನು ಸ್ಥಾಪನೆಗೆ ಸರಕಾರ ಹೆಚ್ಚು ಬೆಂಬಲ ನೀಡುತ್ತಿದೆ. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಕರ್ನಾಟಕವು ತಕೊಡುಗೆ ನೀಡುತ್ತಿದೆ ಎಂದರು.
ಸಿಡಿಪಿಕ್ಯೂ ಗ್ಲೋಬಲ್ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷೆ ಅನಿತಾ ಜಾರ್ಜ್, ಉದ್ಯಮಿ ವಿಘ್ನೇಶ್ ನಂದಕುಮಾರ್ ಹಾಗೂ ಬಿನಾಯ್ ಟೆಕ್ನಾಲಜೀಸ್ ಸಂಸ್ಥೆಯ ಸಹ ಸಂಸ್ಥಾಪಕ ವಿಭು ಬಿನಾಯ್ ಅಭಿಪ್ರಾಯಗಳನ್ನು ಮಂಡಿಸಿದರು.

ಪ್ರಮುಖ ಸುದ್ದಿ :-   ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement