ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದ ಪ್ರಕರಣ ಹಿಂತೆಗೆಯಲು ಕೇರಳ ಸರ್ಕಾರ ನಿರ್ಧಾರ: ಚುನಾವಣಾ ಸ್ಟಂಟ್‌ ಎಂದ ಬಿಜೆಪಿ

ರಾಜ್ಯದ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಕೇರಳದಲ್ಲಿ ಎಡರಂಗ ಸರ್ಕಾರವು ಶಬರಿಮಲೆ ಆಂದೋಲನ ಹಾಗೂ ನಾಗರಿಕ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ.
ಬಿಜೆಪಿಯು ಎಡರಂಗದ ಸರ್ಕಾರದ ಈ ನಿರ್ಧಾರ ಚುನಾವಣಾ ಸ್ಟಂಟ್‌ ಎಂದು ಹೇಳಿದೆ. ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದಂತೆ 50,000 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇವಾಲಯಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ 2018 ರಲ್ಲಿ ಕೇರಳವು ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಆಂದೋಲನಗಳಿಗೆ ಸಾಕ್ಷಿಯಾಗಿತ್ತು.
ರಾಜ್ಯದ ಪ್ರತಿಪಕ್ಷವಾದ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕಳೆದ ವಾರ ಈ ವಿಷಯದ ಬಗ್ಗೆ ಪ್ರತಿಭಟಿಸಿ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಪ್ರತಿಭಟಿಸಿದ ಅಯ್ಯಪ್ಪ ಭಕ್ತರು ಸೇರಿದಂತೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾವಿರಾರು ಜನರ ವಿರುದ್ಧ ಕೇರಳದ ಎಡರಂಗದ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಮೇಶ್ ಚೆನ್ನಿಥಾಲಾ ಆರೋಪಿಸಿದ್ದರು. .
ಈ ವಿಷಯದ ಬಗ್ಗೆ ಜನರ ವಿರುದ್ಧ “ಪ್ರತೀಕಾರದ” ವಿಧಾನವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಚೆನ್ನಿಥಾಲಾ ಎಡರಂಗದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ಕಾಂಗ್ರೆಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಈ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದರು. ‘
ನಾಮ ಜಪ’ ಮೆರವಣಿಗೆಯಲ್ಲಿ ಭಾಗವಹಿಸಿದ ಅಯ್ಯಪ್ಪ ಭಕ್ತರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಫಾರ್ವರ್ಡ್ ನಾಯರ್ ಸಮುದಾಯದ ಸಂಘಟನೆಯಾದ ನಾಯರ್ ಸರ್ವಿಸ್ ಸೊಸೈಟಿ ಒತ್ತಾಯಿಸಿದ ಒಂದು ದಿನದ ನಂತರ ಶಬರಿಮಲೆ ವಿಷಯದ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡರ ಹೇಳಿಕೆ ಬಂದಿತ್ತು.
ಶಬರಿಮಲೆ ದೇವಾಲಯದ ಪದ್ಧತಿಗಳ ರಕ್ಷಣೆ.ಕುರಿತು ಕಾಂಗ್ರೆಸ್‌ ಕಾನೂನು ತರುವ ಮಾತನಾಡಿತ್ತು.
ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ನೈತಿಕ ಹೊಣೆಗಾರಿಕೆಯನ್ನು ತೋರಿಸಬೇಕೆಂದು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ ಸುಕುಮಾರನ್ ನಾಯರ್ ಒತ್ತಾಯಿಸಿದ್ದರು. ಅಲ್ಲದೆ, ಇತರ ವಿಷಯಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಸರ್ಕಾರ ಬೇಷರತ್ತಾಗಿ ಹಿಂತೆಗೆದುಕೊಂಡಿದೆ. ಅದೇರೀತಿ ಶಬರಿಮಲೆ ಪ್ರಕರಣದಲ್ಲೂ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆದಿದ್ದರು. ಶೀಘ್ರವೇ ಕೇರಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಹಾಗೂ ಕಾಂಗ್ರೆಸ್‌ ಮತ್ತು ಬಿಜೆಪಿಗಳ ಈಗಾಗಲೇ ಇದನ್ನು ಮುಂದಿನ ಚುನಾವಣೆಯಲ್ಲಿ ಪ್ರಧಾನ ವಿಷಯ ಮಾಡುವ ಸೂಚನೆ ನೀಡಿದ ಬೆನ್ನಲ್ಲೇ ಕೇರಳದ ಆಡಳಿತಾರೂಢ ಎಡರಂಗದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್‌ನಿಂದ 3 ಭಾರತೀಯ ಅಥ್ಲೀಟ್‌ಗಳಿಗೆ ಚೀನಾ ನಿಷೇಧದ ನಂತರ ಕ್ರೀಡಾ ಸಚಿವರ ಪ್ರವಾಸ ರದ್ದು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.3 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement