ಗ್ರಾಮ ಪಂಚಾಯತಿ ಅಸ್ತಿತ್ವದ ಹಿನ್ನೆಲೆ:  ಸಾಕಾರದ ವಾರೆನೋಟ

posted in: ಅಂಕಣಗಳು | 0

 

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥ ಪಾಲಕರು

ವಿಶ್ವದಲ್ಲಿರುವ ರಾಷ್ಟ್ರಗಳು ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ  ಸಹಾಯಕಾರಿ ತಂತ್ರಗಳೆಂದು ಪರಿಗಣಸಿವೆ. ಪ್ರಾಚೀನ ಕಾಲದಲ್ಲಿ ಇಡೀ ವಿಶ್ವದಾದ್ಯಂತ ನಗರಗಳು ಬೆರಳೆಣಿಕೆಯಷ್ಟಿದ್ದವು.  ಸುಮಾರು ಕ್ರಿ.ಶ. ೧೮೦೦ ರಿಂದ ವಿಶ್ವದಾದ್ಯಂತ ನಗರಗಳು ಬೆಳೆಯುತ್ತಿವೆ ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ.  ಆದರೂ ಕೂಡ ಇಂದಿಗೂ ಕೂಡ ಒಟ್ಟು ಜನಸಂಖ್ಯೆಯ ಬಹುಭಾಗ ಗ್ರಾಮೀಣ ಕ್ಷೇತ್ರದಲ್ಲಿಯೇ ಬದುಕುತ್ತಿದೆ.  ಆದ್ದರಿಂದ ಗ್ರಾಮಾಭಿವೃದ್ಧಿಯಿಂದ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದಾಗಿದೆ.

ಸಂಕಷ್ಟಗಳಿಂದ ಜನತೆಯನ್ನು ಸಬಲರನ್ನಾಗಿಸಲು ಗ್ರಾಮೋದ್ದಾರ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿ ರಾಷ್ಟ್ರವನ್ನು ಮುನ್ನಡೆಸಬಹುದು ಎಂಬ ಉದ್ದೇಶ ಮತ್ತು ಗುರಿಯನ್ನಿಟ್ಟುಕೊಂಡು ಆಧುನಿಕ ಸ್ವತಂತ್ರ ಭಾರತದ ಏಳ್ಗೆಗಾಗಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಚಿಂತಕರು ಮತ್ತು ನಾಯಕರು ಶ್ರೀಕಾರ ಹಾಕಿದರು.

ಗ್ರಾಮೀಣ ಅಭಿವೃದ್ಧಿಯ ಮಹತ್ವ :

ಭಾರತವು ಹಳ್ಳಿ ಪ್ರಧಾನ ದೇಶ. ದೇಶವು ೬,೪೦,೮೬೭ಕ್ಕೂ ಹೆಚ್ಚಿನ ಗ್ರಾಮಗಳನ್ನು  ಹೊಂದಿದ್ದು, ದೇಶದ ಜನ ಸಂಖ್ಯೆಯ ಪ್ರತಿಶತ ೬೨ ರಷ್ಟು ಜನರು ಗ್ರಾಮೀಣ ಕ್ಷೇತ್ರದಲ್ಲಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದು, ನಗರೀಕರಣ ಔದ್ಯೋಗೀಕರಣ ಕ್ಷೇತ್ರಕ್ಕೆ ಕಚ್ಚಾ ವಸ್ತುಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್‍ಯಗಳನ್ನು ಕಲ್ಪಿಸಿಕೊಡಲು ಗ್ರಾಮಪಂಚಾಯತಿಗಳನ್ನು ರಚಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಇದೀಗ ಚುನಾವಣಾ ಭಾಗ್ಯ.  ಕರ್ನಾಟಕದ ೫೭೨೮ ಗ್ರ್ರಾಮ ಪಂಚಾಯತಿಗಳಿಗೆ ಈಗಾಗಲೇ ಎರಡು ಹಂತದ ಚುನಾವಣೆಗಳು ನಡೆದು ಫಲಿತಾಂಶವು ಹೊರಬಂದಿವೆ.  ಈ ಗ್ರಾಮ ಪಂಚಾಯತಿಗಳ ಬೆಳವಣಿಗೆ, ಹಿನ್ನೆಲೆ, ಗ್ರಾಮ ಪಂಚಾಯತಿಗಳ ಉದ್ದೇಶ ಈಡೇರುವಿಕೆ, ಹಾಗೂ ಪ್ರಚಲಿತ ಸಮಸ್ಯೆಗಳ ಕುರಿತು ಅರಿಯುವುದು ಆಗಿದ್ದು ೮೨,೬೧೬ ಸದಸ್ಯರು ಕಾರ್ಯ ನಿರ್ವಹಿಸಲು ಸನ್ನದ್ಧರಾಗುತ್ತಿದ್ದಾರೆ.

ಭಾರತ ಪ್ರಾಚೀನ ಕಾಲದಿಂದಲೂ ಸ್ಥಳೀಯ ಸರಕಾರಗಳಿಗೆ ಆದ್ಯತೆ ನೀಡಿತ್ತು ಎಂಬುದು ರಾಮಾಯಣ, ಮಹಾಭಾರತ ಮತ್ತು ವೇದಗಳ ಕಾಲದಲ್ಲಿ ಉಲ್ಲೇಖಿತಗೊಂಡಿವೆ. ಸ್ಥಳೀಯ ಸರಕಾರಗಳಿಗೆ ಅಂದಿನ ರಾಜಮಹಾರಾಜರುಗಳು ಪ್ರಾಮುಖ್ಯತೆಯನ್ನು, ನೀಡಿದ್ದರು.  ಆದರೇ ಮಧ್ಯಯುಗೀನ  ಭಾರತದ ಇತಿಹಾಸದಲ್ಲಿ ಅಂದರೆ ಮೋಘಲರ ಕಾಲದ ಆಡಳಿತದಲ್ಲಿ ಈ ಸ್ಥಳಿಯ ಸಂಸ್ಥೆಗಳನ್ನು ಕಡೆಗಣಿಸಲಾಯಿತು.

ಬ್ರಿಟೀಷರ ಕಾಲದಲ್ಲಿಯೂ ಮುಂದುವರೆಯಿತಾದರೂ ಬ್ರೀಟಿಷ ಅಧಿಕಾರಿ ಲಾರ್ಡ್ ರಿಪ್ಟನ್ ಸ್ಥಳೀಯ ಸಂಸ್ಥೆಗಳ ಮಹತ್ವ ಅರಿತು ಇವುಗಳ ಬಲವರ್ಧನೆ ಹಾಗೂ ಸಬಲೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. ಅದಕ್ಕಾಗಿಯೇ ಲಾರ್ಡ್ ರಿಪ್ಟನ್ ಅವರನ್ನು ಭಾರತದ ಸ್ಥಳೀಯ ಸಂಸ್ಥೆಗಳ ಆಡಳಿತದ ಪಿತಾಮಹ ಎಂದು ಕರೆಯಲಾಗುತ್ತದೆ.  ಸ್ವತಂತ್ರ್ಯ ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಇವುಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಸಂವಿಧಾನ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ನಡುವೆ  ಚರ್ಚೆ ನಡೆದು ಅಂತಿಮವಾಗಿ ಜವಾಹರಲಾಲ್ ನೆಹರೂ ಅವರು ಸೂಚಿಸಿದ ಮಾರ್ಗದಂತೆ ರಾಜ್ಯ ನೀತಿ ನಿರ್ದೇಶಕರ ತತ್ವಗಳಲ್ಲಿ ಉಲ್ಲೇಖ ಮಾಡಲಾಯಿತು.

೧೯೫೦ರ ದಶಕದಲ್ಲಿ ಕೇಂದ್ರ ಸರಕಾರದ ಪಂಚ ವಾರ್ಷಿಕ ಯೋಜನೆಗಳ ಅನುಷ್ಠಾನದಲ್ಲಿ ಈ ಸ್ಥಳೀಯ ಸಂಸ್ಥೆಗಳ ಅಗತ್ಯವನ್ನು ಮನಗಂಡು ೧೯೫೬ರಲ್ಲಿ ಆಗಿನ ನೆಹರು ಸರಕಾರ ಬಲವಂತರಾಯ ಮೆಹತಾ ನೇತೃತ್ವದ ಸಮಿತಿ ರಚಿಸಿ, ವರದಿ ಸಲ್ಲಿಸಲು ಸೂಚಿಸಿತು. ಬಲವಂತರಾಯ ಮೆಹತಾ ಸಮಿತಿಯು ಕೂಲಕಂಶವಾಗಿ ಅಧ್ಯಯನ ಗೈದು ಮೂರು ಹಂತಗಳ ಆಡಳಿತ (೩ ಟೈರ್) ಅಂದರೇ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ರಚನೆಗೆ ಒತ್ತು ನೀಡಿ, ಇವುಗಳಿಗೆ ಸಂವಿಧಾನಿಕ ಸ್ಥಾನಮಾನ ನೀಡಬೇಕೆಂದು ಶಿಫಾರಸ್ಸು ಮಾಡಿದರು. ಇದರ ಫಲವಾಗಿ ೧೯೫೯ ರಲ್ಲಿ ರಾಜಸ್ಥಾನದಲ್ಲಿ ಮೊಟ್ಟ ಮೊದಲಬಾರಿಗೆ ಈ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ನಂತರ ೧೯೭೭ರ ಅವಧಿಯಲ್ಲಿ ಕೇಂದ್ರದಲ್ಲಿದ ಜನತಾ ಪಕ್ಷದ ಸರಕಾರವು ಸ್ಥಳೀಯ ಸಂಸ್ಥೆಗಳ ಕುರಿತಾಗಿ ಅಧ್ಯಯನ ಮಾಡಲು ಅಶೋಕ ಮೆಹತಾ ಸಮಿತಿಯನ್ನು ರಚಿಸಿತು.

ಸಮಿತಿಯು ಎರಡು ಹಂತದ (೨ ಟೈರ್) ಅಂದರೆ  ಗ್ರಾಮ ಮತ್ತು ಜಿಲ್ಲಾ ಪಂಚಾಯತಿ, ಗ್ರಾಮೀಣ ಸ್ಥಳೀಯ  ಸಂಸ್ಥೆಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಲು ವರದಿ ನೀಡಿತು. ೧೯೮೪ರಲ್ಲಿ ಸಿಂಗ್ ಮತ್ತು ರಾವ್ ಸಮಿತಿ ಕೂಡ ಈ ನಿಲುವನ್ನೇ ಸ್ಪಷ್ಟ ಪಡಿಸಿತು.  ಮುಂದೆ ೧೯೮೯ರಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಈ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ್ದಂತೆ ಸಂವಿಧಾನದಲ್ಲಿ ತಿದ್ದು ಪಡಿ ತರಲು ಸಂಸತ್ತಿನಲ್ಲಿ ಮಸೂದೆ ಮಂಡಿಸಿದರು. ಆದರೆ ರಾಜ್ಯ ಸಭೆಯಲ್ಲಿ ಕಾಂಗ್ರೆಸ್ಸಿಗೆ  ಬಹುಮತ ಇಲ್ಲದ ಕಾರಣದಿಂದ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವಾಗದೇ ಹೋಯಿತು.  ಅಂತಿಮವಾಗಿ ೧೯೯೨ ರಲ್ಲಿ ಪ್ರಧಾನಿಗಳಾಗಿದ್ದ ಪಿ.ವ್ಹಿ. ನರಸಿಂಹರಾವ್ ಸರಕಾರ ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಿ, ಲೋಕ ಹಾಗೂ ರಾಜ್ಯ ಸಭೆ ಸದನಗಳ ಒಪ್ಪಿಗೆ ಪಡೆದ ಪರಿಣಾಮ ೧೯೯೩ ರಲ್ಲಿ ಸಂವಿಧಾನದ ೭೩ನೇ ತಿದ್ದುಪಡಿ ಮಾಡುವ ಮೂಲಕ ಸಂಪೂರ್ಣ ದೇಶದಲ್ಲೆಡೆ ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣೀಭೂತರಾದರು. ಜೊತೆಗೆ ಈ ಸಂಸ್ಥೆಗಳಿಗೆ ಸಂವಿಧಾನದ ಮಾನ್ಯತೆ ದೊರಕಿತು.

ಕರ್ನಾಟಕ ರಾಜ್ಯದಲ್ಲಿ ೧೯೮೩ ರ ಅವಧಿಯಲ್ಲಿ ಮುಖ್ಯ ಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ಸಚಿವರಾಗಿ ನೀರ ಸಾಬ್ ಎಂದೇ ಪರಿಚಿತರಾಗಿದ್ದ ಅಬ್ದುಲ್ ನಜೀರ್‌ಸಾಬ್ ಅವರ ಪ್ರಾಮಾಣಿಕ ಪ್ರಯತ್ನದ ಫಲದಿಂದ ದೇಶದಲ್ಲಿರುವ ಸುವ್ಯಸ್ಥಿತವಾಗಿ ಪಂಚಾಯತ್ ರಾಜ್ ಸಂಸ್ಥೆಗಳ ರಚನೆಗೆ ಕಾರಣವಾಯಿತು.

ಸದ್ಯ ಸಂವಿಧಾನದ ೭೩ನೇ ತಿದ್ದುಪಡಿಗೆ ಅನುಗುಣವಾಗಿ ಗ್ರಾಮೀಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.  ಗ್ರಾಮ ಪಂಚಾಯತಿಗಳ ಸ್ಥಾಪನೆಯ ಮೂಲ ಉದ್ದೇಶವೆಂದರೆ, ಅಧಿಕಾರದ ವಿಕೇಂದ್ರೀಕರಣ ಮಾಡಿ, ಜನರ ಕೈಯಲ್ಲಿ ಅಧಿಕಾರ ಕೊಡಬೇಕು ಮತ್ತು ಸಮಾಜದ ಎಲ್ಲ ವರ್ಗದ ಜನರು ಸ್ಥಳೀಯ ಆಡಳಿತ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಬೇಕು.  ತಮ್ಮ ಗ್ರಾಮದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು.  ಹಾಗೂ ಗಾಂಧೀಜಿ  ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಗೊಳ್ಳಬೇಕು.

ಇಂದು ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ೫೦% ಸ್ಥಾನಗಳ ಮೀಸಲಾತಿ ನೀಡಲಾಗಿದೆ.  ಮೀಸಲಿಡುವ ಮೂಲಕ ಎಲ್ಲರಿಗೂ ಅಧಿಕಾರ ಸಿಗಲಿ ತನ್ಮೂಲಕ ಪ್ರತಿಯೊಬ್ಬರು ಆಡಳಿತ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಮುಂದಿನ ಪೀಳಿಗೆಯ ನಾಯಕರನ್ನು ತಯಾರಿಸುವ ಘಟಕಗಳಾಗಿವೆ. ಗ್ರಾಮ ಪಂಚಾಯತಿಗಳು ಪ್ರಜಾಪ್ರಭುತ್ವದ ನೈಜ ಅನುಷ್ಠಾನ ಈ ಸಂಸ್ಥೆಗಳ ಮೂಲಕವಾಗಲಿ ಎಂಬ ಗುರಿ ಹಾಗೂ ಆಶಯ ಈ ಸಂಸ್ಥೆಗಳದ್ದು.

ಮೇಲ್ಮೋಟಕ್ಕೆ ಈ ಎಲ್ಲ ಗುರಿ, ಆಶಯ ಹಾಗೂ ದ್ಯೇಯೋದ್ದೇಶಗಳ ಈಡೇರಿದೆ ಎಂದು ಕಂಡು ಬಂದರೂ ಕೂಡ ವಾಸ್ತವಿಕ ನಿಟ್ಟಿನಲ್ಲಿ ಇಂದಿಗೂ ಈ ಸಂಸ್ಥೆಗಳಲ್ಲಿ ಹಲವು ಲೋಪ ದೋಷಗಳು ಇವೆ.

ಇಂದು ಗ್ರಾಮ ಪಂಚಾಯಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುದಾನವನ್ನು ನೀಡಿದರೂ ಕೂಡ ಅದರ ದುರುಪಯೋಗವಾಗಿ ಭ್ರ್ರಷ್ಟಾಚಾರ ವ್ಯಾಪಕವಾಗಿ ಹಬ್ಬುತ್ತಿವೆ.  ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಗ್ರಾಮ ಪಂಚಾಯತ ಮೂಲಕವೇ ತಳ ಮಟ್ಟದಿಂದ ಅನುಷ್ಠಾನ ಗೊಳ್ಳುತ್ತಿದ್ದರೂ ಕೂಡ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾದದಿಂದ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ.  ಉದಾಹರಣೆಗೆ ಉದ್ಯೋಗ ಖಾತ್ರಿ ಯೋಜನೆ, ರಸ್ತೆ ನಿರ್ಮಾಣ, ಆಶ್ರಯ ಯೋಜನೆಗಳ ನಿರ್ಮಾಣ ಚರಂಡಿ ನಿರ್ಮಾಣ, ಶುದ್ಧ ನೀರು ಪೂರೈಕೆ ಯೋಜನೆ, ಆರ್ಥಿಕ ಸಹಾಯ ಯೋಜನೆಗಳಲ್ಲಿ ಅಧಿಕ ಪ್ರಮಾಣದ ಭ್ರಷ್ಟಾಚಾರ ನಡೆದು ನೈಜ ಫಲಾನುಭವಗಳಿಗೆ ತಲುಪದೆ, ಕೇವಲ ಉಳ್ಳವರ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗುತ್ತಿವೆ.

ಪತ್ನಿ ಸದಸ್ಯಳಾಗಿದ್ದರೆ, ಆಕೆಯ ಹೆಸರಲ್ಲಿ ಪತಿ ಅಥವಾ ಪ್ರಭಾವಿ ವ್ಯಕ್ತಿಗಳ ಹಿಂಬಾಗಿಲಿನಿಂದ ಅಧಿಕಾರ ಚಲಾಯಿಸುತ್ತಿದ್ದಾರೆ.  ಹಣದಾಸೆಗೆ ಮಾರು ಹೋಗಿ ಕೇವಲ ಒಂದು ಗ್ರಾಮ ಪಂಚಾಯತ ಸದಸ್ಯನಾಗಲು ಚುನಾವಣೆಗಳಲ್ಲಿ ಲಕ್ಷಾಂತರ ರೂಪಾಯಿಗಳು ಖರ್ಚುಮಾಡಿ ಆಯ್ಕೆಯಾಗುತ್ತಿದ್ದು, ಇವರಿಂದ ನಿರೀಕ್ಷಿಸುವುದಾದರೂ ಏನು ? ಇತ್ತೀಚಿಗಂತೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸದಸ್ಯ ಸ್ಥಾನಗಳು ಜಾಹೀರ್ ಲೀಲಾವು ಆಗುತ್ತಿದ್ದು, ಇದು ಅಕ್ಷಮ್ಯ ಅಪರಾಧವಾದರೂ ಕೂಡ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು ಎಂಬ ಪರಿಸ್ಥಿತಿ ಬಡ ಮತದಾರನದ್ದಾಗಿದೆ.  ಎಲ್ಲ ಸಮಸ್ಯೆಗಳನ್ನು ಸಾರಾ ಸಗಟು ಕಿತ್ತು ಹಾಕಿ ಸ್ವಾರ್ಥವನ್ನು ಮೆಟ್ಟಿನಿಂತು ನಿಸ್ವಾರ್ಥದಿಂದ ಕೆಲಸ ಮಾಡಿದಾಗ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಆದ್ದರಿಂದ ಜನತೆಯು ಕೂಡ ಜಾಗೃತವಾಗಿ ಪ್ರಬುದ್ಧತೆಯಿಂದ ವರ್ತಿಸುತ್ತಾ ವೋಟಿಗಾಗಿ ನೋಟು ಪಡೆಯದೇ ಅಕ್ಷರ ಜ್ಞಾನವುಳ್ಳ ಪ್ರಾಮಾಣಿಕ ಅಭ್ಯರ್ಥಿಗಳನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲು ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕು.

ಗ್ರಾಮ ಪಂಚಾಯತಿಗಳಿಗೆ ರಸ್ತೆ ನಿರ್ಮಾಣ, ಮನೆಗಳನ್ನು ಕಟ್ಟಲು, ಚರಂಡಿ, ಕೆರೆಗಳ ಅಭಿವೃದ್ಧಿ, ಕುಡಿಯುವ ನೀರು, ಗ್ರಾಮಗಳ ಸ್ವಚ್ಛತೆ, ಬೀದಿ ದೀಪಗಳು, ಕೌಶಲ್ಯ ಅಭಿವೃದ್ಧಿ, ಕೊಟ್ಟಿಗೆಗಳ ನಿರ್ಮಾಣ, ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯಗಳು, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್ಸ್, ಗ್ರಂಥಾಲಯ, ಶೌಚಾಲಯ, ನಾಗರಿಕ ಮತ್ತು ಆರೋಗ್ಯ ಕೇಂದ್ರ, ಸಮುದಾಯ ಭವನ, ಇಂಟರ್‌ನೇಟ್, ಧಾನ್ಯಗಳ ಶೇಖರಣಾ, ಶೀತಲೀಕರಣ, ಮಿನಿ ಮಾರುಕಟ್ಟೆ, ಸ್ಮಶಾನಗಳ ಅಭಿವೃದ್ಧಿ ಮುಂತಾದ ಸೌಲಭ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋಟಿಗಟ್ಟಲೇ ಅನುದಾನಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗಕ್ಕೆ ನೂತನ ಸದಸ್ಯರುಗಳು ಸ್ಪಂದಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಕೈ ಜೋಡಿಸಬೇಕು.

 

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3.7 / 5. ಒಟ್ಟು ವೋಟುಗಳು 3

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement