ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಜನರು ತಕ್ಕ ಪಾಠ ಕಲಿಸ್ತಾರೆ:ಶ್ರೀನಿವಾಸ ಪ್ರಸಾದ ಎಚ್ಚರಿಕೆ

ಮೈಸೂರು: ಚುನಾವಣೆಗೆ ಇನ್ನೂ ಸಮಯವಿದೆ ಎಂದುಕೊಂಡು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಕಣ್ಮುಚ್ಚಿ ಕುಳಿತುಕೊಂಡರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ ಅವರು ಸಿಎಂ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸದೇ ಟೀಕೆ ಮಾಡಿದರು.
ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡರೆ ಜನರು ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ. ಪಕ್ಷಕ್ಕೆ ದುಡಿಯುವವರು ಕೆಲವರಾದರೆ, ಸ್ವಾರ್ಥಕ್ಕಾಗಿ ಮಾಡಿಕೊಳ್ಳುವವರು ಕೆಲವರು. ತಮ್ಮ ಮನೆ ಬೆಳೆಸಿಕೊಳ್ಳುವುದೇ ಆಯಿತು. ತಮ್ಮ ಅವಧಿ ಮುಗಿಯಿತೆಂದು ತಪ್ಪು ಮಾಡಬಾರದು ಎಂದರು.
ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದು ಸರಿಯಲ್ಲ. ನಮಗೆ ತೃಪ್ತಿ ಇದ್ದರೆ ಸಾಲದು, ಜನರಿಗೆ ನಮ್ಮ ಕೆಲಸದ ಬಗ್ಗೆ ತೃಪ್ತಿ ಇರಬೇಕು. ಜನರಲ್ಲಿ ಹತಾಶೆ, ನಿರಾಸೆ ಮೂಡಿದೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಇವೆಲ್ಲ ಸಂಗತಿಗಳು ಆಡಳಿತ ವಿರೋಧಿ ಅಲೆಗೆ ಕಾರಣವಾಗುತ್ತಿವೆ. ರಾಜ್ಯದ ಯಾವ ನಾಯಕರಿಗೂ ವಿವೇಚನೆಯೇ ಇಲ್ಲದಂತಾಗಿದೆ. ಪಕ್ಷಕ್ಕಿಂತ ಸ್ವಾರ್ಥವೇ ಮುಖ್ಯವೆನಿಸಿದೆ ಎಂದು ಅಭಿಪ್ರಾಯಪಟ್ಟರು.
ನಾನೊಬ್ಬ ಹಿರಿಯ ಬಿಜೆಪಿ ಸಕ್ರಿಯ ಕಾರ್ಯಕರ್ತ. ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಹುದ್ದೆ ಹೊರತುಪಡಿಸಿ ಎಲ್ಲ ಜವಾಬ್ದಾರಿ ನಿಭಾಯಿಸಿದ್ದೇನೆ. ಆದರೂ ಒಂದೇ ಒಂದು ರಾಜ್ಯ ಕಾರ್ಯಕಾರಿಣಿಗೆ ನನ್ನನ್ನು ಆಹ್ವಾನಿಸಿಲ್ಲ. ನನ್ನ ಸಲಹೆ ಪಡೆದಿಲ್ಲ ಎಂದು ಪಕ್ಷದ ಮುಖಂಡರ ಮೇಲೆ ಕ್ರೋಧ ವ್ಯಕ್ತಪಡಿಸಿದರು.
ಹಲವು ವಿಷಯಗಳಲ್ಲಿ ನನಗೆ ಬೇಸರವಾಗಿದೆ. ಆದರೆ ಏನನ್ನೂ ಹೇಳುವುದಿಲ್ಲ. ನನಗೆ ಇನ್ನು ವಿಶ್ರಾಂತಿಯ ಕಾಲ. ಗೌರವದಿಂದ ನಿವೃತ್ತನಾಗಲು ಬಯಸಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement