ತುಮಕೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸಹಜ ಬೇಸಾಯ ಆಶ್ರಮ

ಸಹಜ ಕೃಷಿಗಾಗಿ ತುಮಕೂರಿನಲ್ಲಿ ‘ಗಾಂಧಿ ಸಹಜ ಬೇಸಾಯ ಆಶ್ರಮ’ ಎಂಬ ಹೆಸರಲ್ಲಿ ರೈತ ಆಶ್ರಮ ನಿರ್ಮಾಣವಾಗುತ್ತಿದ್ದು, ರೈತರಿಗಾಗಿಯೇ ತೆರೆದಿರುವ ದೇಶದ ಮೊದಲ ಆಶ್ರಮವೆಂಬ ಹೆಗ್ಗಳಿಕೆ ಇದಕ್ಕೆ ಸಿಗಲಿದೆ.
ಮಹಾತ್ಮ ಗಾಂಧೀಜಿ ತತ್ವಗಳು, ಕಲ್ಪನೆಗಳಡಿ ತುಮಕೂರಿನ ಹೊನ್ನುಡಿಕೆ ಚೆಕ್‌ ಪೋಸ್ಟ್‌ ಬಳಿ ಈ ಕುಟೀರ ತಲೆ ಎತ್ತುತ್ತಿದೆ. ಈಗಾಗಲೇ ಸಹಜ ಬೇಸಾಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿತೊಡಗಿಸಿಕೊಂಡಿರುವ ಕೃಷಿ ವಿಜ್ಞಾನಿ ಡಾ. ಮಂಜುನಾಥ್‌ ಮತ್ತು ತಂಡ ಆಶ್ರಮ ನಿರ್ಮಿಸಲು ಮುಂದಾಗಿದ್ದಾರೆ. ಎಪ್ರಿಲ್‌ ೧೧ರಂದು ಆಶ್ರಮದ ಉದ್ಘಾಟನೆ ನಡೆಯಲಿದ್ದು, ರಂಗಕರ್ಮಿ ಪ್ರಸನ್ನ, ಪಿ.ವಿ. ರಾಜಗೋಪಾಲ್‌, ಮಹೇಶ್‌ ಶರ್ಮಾ, ಮಹಿಮಾ ಪಟೇಲ್‌, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಯಾಂತ್ರೀಕೃತ ಆಧುನಿಕ ಕೃಷಿಗೆ ಬದಲಾಗಿ ಸಹಜ ಕೃಷಿಗೆ ಉತ್ತೇಜನ ನೀಡುವುದು ಸಹಜ ಬೇಸಾಯ ಶಾಲೆಯ ಮುಖ್ಯ ಉದ್ದೇಶ. ಪ್ರಕೃತಿಯೊಂದಿಗಿನ ಜೀವನ ಶೈಲಿಯನ್ನು ನಿರ್ಲಕ್ಷಿಸಿ ಆಧುನಿಕತೆಗೆ ಒತ್ತು ಕೊಡುತ್ತಿದ್ದಂತೆ ಪರಿಸರ, ಭೂಮಿಗೆ ಸಾಕಷ್ಟು ಹಾನಿಯುಂಟಾಗುತ್ತಿದೆ. ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ಚಟುವಟಿಕೆಗಳು ವೇಗ ಪಡೆದಿವೆ. ಆದರೆ ಅದು ಜೀವವೈವಿಧ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪ್ರಕೃತಿಯ ಸಮತೋಲನ ತಪ್ಪುತ್ತಿದೆ. ಹೀಗಾಗಿ ಸಹಜ ಬೇಸಾಯಕ್ಕೆ ಒತ್ತು ಕೊಡಬೇಕಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ.
ಹೊನ್ನುಡಿಕೆಯಲ್ಲಿಈಗಾಗಲೇ 6 ಎಕರೆ ಜಾಗದಲ್ಲಿ ಸಹಜ ಕೃಷಿ ನಡೆಸಲಾಗುತ್ತಿದೆ. ಅದೇ ಜಾಗದಲ್ಲಿ ಪುಟ್ಟದೊಂದು ಕುಟೀರ ನಿರ್ಮಿಸಲಾಗಿದೆ. ಅಲ್ಲಿರೈತರಿಗೆ ಸಹಜ ಕೃಷಿಯ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ರೈತರಿಗೆ ಸಂಪೂರ್ಣ ಉಚಿತ. ಈಗ ಕೃಷಿಯತ್ತ ಮುಖಮಾಡುತ್ತಿರುವ ನಗರವಾಸಿಗಳಿಗೆ ಮಾತ್ರ ನಿರ್ವಹಣೆಯ ಉದ್ದೇಶದಿಂದ ನಿರ್ದಿಷ್ಟ ಶುಲ್ಕ ವಿಧಿಸಲಾಗುತ್ತದೆ.
ಅಂಹಿಸಾತ್ಮಕ ಕೃಷಿ, ಸುಸ್ಥಿರ ಕೃಷಿ, ಮಳೆಯಾಶ್ರಿತ ಬೇಸಾಯ, ವಿಕೇಂದ್ರೀಕೃತ ಆರ್ಥಿಕತೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮೊದಲಾದ ಗುರಿಯೊಂದಿಗೆ ಸಹಜ ಬೇಸಾಯ ಶಾಲೆ ತೆರೆಯುತ್ತಿದೆ. ರಾಸಾಯನಿಕ ಕೃಷಿ , ಸಾವಯವ ಕೃಷಿ, ನೈಸರ್ಗಿಕ ಕೃಷಿ ನಡುವಿನ ವ್ಯತ್ಯಾಸ, ಪಾರಂಪರಿಕ ಕೃಷಿ ಮೊದಲಾದವುಗಳ ಬಗ್ಗೆ ಕಾರ್ಯಾಗಾರ, ತರಬೇತಿ ಇಲ್ಲಿ ಲಭ್ಯವಾಗಲಿದೆ.
ಯಾಂತ್ರಿಕೃತ ಬೇಸಾಯದಿಂದ ಪರಿಸರ ಹಾಳಾಗುತ್ತಿದೆ. ಜೀವವೈವಿಧ್ಯಗಳ ಮೇಲೆ ನಮ್ಮ ಬೇಸಾಯ ಪದ್ಧತಿ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಸಹಜ ಬೇಸಾಯದತ್ತ ಚಿತ್ತಹರಿಸಬೇಕು. ಈಗಾಗಲೇ ನಾವು ನಾನಾ ಕಡೆಗಳಲ್ಲಿತರಬೇತಿ, ಕಾರ್ಯಾಗಾರ ನಡೆಸುತ್ತಿದ್ದೇವೆ. ಆದರೆ, ಕುಟೀರ ಕಲ್ಪನೆ ಹೊಸದು. ಗಾಂಧಿ ಸಹಜ ಬೇಸಾಯ ಆಶ್ರಮ ರೈತರಿಗಾಗಿ ತೆರೆಯುತ್ತಿರುವ ಮೊದಲ ಆಶ್ರಮವಾಗಿದೆ ಎಂದು ಡಾ. ಮಂಜುನಾಥ ಹೇಳುತ್ತಾರೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement