ತಮಿಳುನಾಡು: ಶಶಿಕಲಾ ದಿಢೀರ್‌ ರಾಜಕೀಯ ನಿವೃತ್ತಿ ಘೋಷಣೆ ಹಿಂದಿನ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಹುಡುಕುತ್ತಾ

ತಮಿಳುನಾಡು ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವೆ ಎಂದು ಜೈಲಿನಿಂದ ಹೊರಬಿದ್ದ ತಕ್ಷಣವೇ ಘೋಷಣೆ ಮಾಡಿದ್ದ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಎಲ್ಲರ ನಿರೀಕ್ಷೆಯ ಗುಳ್ಳೆಗಳನ್ನು ಒಡೆದು ಬುಧವಾರ ದಿಢೀರ್‌ ರಾಜಕೀಯ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರ ಹಿಂದಿನ ಮರ್ಮದ ಬಗ್ಗೆ ಈಗ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಎಐಎಡಿಎಂಕೆ ಪಕ್ಷದಲ್ಲಿ ಹಿಡಿತ ಸಾಧಿಸಲು ನಿರ್ಧರಿಸಿ ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಿದ್ದ ಅವರು ಇದ್ದಕ್ಕಿದ್ದಂತೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪ್ರಕಟಿಸಿದ್ದೇಕೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಆ ಪ್ರಶೆಯ ಆಚೆಗೆ ಹೋದರೆ ಮಾತ್ರ ಸದ್ಯಕ್ಕೆ ಉತ್ತರ ಸಿಗಬಹುದು.
ಅಕ್ರಮ ಆಸ್ತಿ ಪ್ರಕಣದಲ್ಲಿ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಫೆ.೯ರಂದು ಬಿಡುಗಡೆಯಾದ ನಂತರದಲ್ಲಿ ತಮಿಳುನಾಡು ಪ್ರವೇಶಿಸುವ ಮುನ್ನ ಅದನ್ನೊಂದು ಅದ್ದೂರಿ ಇವೆಂಟ್‌ ಮಾಡಲು ಶಶಿಕಲಾ ಸಾಕಷ್ಟು ಪ್ರಯತ್ನ ಮಾಡಿದ್ದರು. ಂತ್ತು ಸ್ವಲ್ಪಟ್ಟಿಗೆ ಯಶಸ್ವಿಯೂ ಆಗಿದ್ದರು. ಇದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಅದರಲ್ಲಿಯೂ ವಿಶೇಷವಾಗಿ ಎಐಎಡಿಎಂಕೆ ಪಕ್ಷಕ್ಕೆ ತಲೆನೋವಿಗೂ ಕಾರಣವಾಗಿತ್ತು. ಎಐಎಡಿಎಂಕೆ ನಾಯಕರ ಸ್ಥಿತಿ ತೊಡಲಾರೆ, ತೊಡದೆಯೂ ಇರಲಾರೆ ಎಂಬಲ್ಲಿಗೆ ಬಂದು ನಿಂತಿತ್ತು.
ಈ ಮಧ್ಯೆ ತಮಿಳುನಾಡಿನಲ್ಲಿ ಚುನಾವಣೆಯೂ ಘೋಷಣೆಯಾಯಿತು. ಇನ್ನೇನು ಶಶಿಕಲಾ ಯೋಚಿಸಿದಂತೆ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾರೆ ಎಂದು ಭಾವಿಸಿದ್ದವರಿಗೆ ಬುಧವಾರದ ಅವರ ನಿರ್ಧಾರ ಅಚ್ಚರಿಗೆ ಕಾರಣವಾಯಿತು. ಫೆಬ್ರವರಿ 9 ರಂದು, ಅಂದರೆ ಸುಮಾರು ಒಂದು ತಿಂಗಳ ಹಿಂದೆ ಶಶಿಕಲಾ ಬೆಂಗಳೂರಿನಿಂದ ಚೆನ್ನೈಗೆ ಮರಳಿದರು, ಅಲ್ಲಿ ಅವರು ನಾಲ್ಕು ವರ್ಷಗಳ ಜೈಲಿನಲ್ಲಿದ್ದರು, 23 ಗಂಟೆಗಳ ಬೃಹತ್ ರೋಡ್ ಶೋನಲ್ಲಿ ಎಐಡಿಎಂಕೆ ನಾಯಕರ ವಿರೋಧದ ಮಧ್ಯೆಯೂ ಎಐಎಡಿಎಂಕೆ ಧ್ವಜ ಹಾಕಿದ್ದ ಕಾರಿನಲ್ಲಿ ಪ್ರಯಾಣಿಸುವ ಮೂಲಕ ತನ್ನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ ಪಕ್ಷಕ್ಕೆ ಸೆಡ್ಡು ಹೊಡೆದರು. ಅಲ್ಲಿಂದಲೇ ಶುರುವಾಯಿತು, ಅವರು ಹಾಗೂ ಎಐಎಡಿಎಂಕೆ ನಾಯಕರ ಮಧ್ಯೆ ರಾಜಕೀಯ ತಿಕ್ಕಾಟ.
ಇನೇನು ಇದಕ್ಕೊಂದು ಲಾಜಿಕ್‌ ಪಾಯಿಂಟ್‌ ಸಿಗುತ್ತದೆ ಎಂದು ಎಲ್ಲರೂ ಅಂದುಕೊಂಡಾಗ ಈ ಒಂದು ತಿಂಗಳಲ್ಲಿ ಶಶಿಕಲಾ ಹೇಗೆ ಬದಲಾದರು ಹಾಗೂ ಯಾಕೆ ಬದಲಾದರೆ ಎಂದು ನೋಡಿದರೆ ಸ್ವಲ್ಪಮಟ್ಟಿಗೆ ಇದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬಹುದು.
ಅವರ ಸೋದರಳಿಯ ಮತ್ತು ಎಎಂಎಂಕೆ ಪಕ್ಷದ ಮುಖ್ಯಸ್ಥ ಟಿಟಿವಿ ದಿನಕರನ್ ಅವರ ಪ್ರಕಾರ, ಎಐಎಡಿಎಂಕೆ ಪಕ್ಷದ ಮುಖಂಡರ ಮನೋಭಾವದಿಂದ ಶಶಿಕಲಾ ನಿರಾಸೆಗೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ. ಎಐಎಡಿಎಂಕೆ ನಾಯಕರ ಹೇಳಿಕೆಗಳಿಂದ ಅವರಿಗೆ ಅಸಮಾಧಾನವಾಗಿತ್ತು. ಜೈಲಿನಲ್ಲಿದ್ದಾಗ ಅವರು ಶಶಿಕಲಾ ಅವರನ್ನು ಎಐಎಡಿಕೆಯಿಂದ ವಜಾಗೊಳಿಸಿದ್ದು ಒಂದು ಕಾರಣವಾದರೆ ಜೈಲಿಂದ ಹೊರಬಂದ ನಂತರವೂ ಒಪ್ಪಿಕೊಳ್ಳಲು ಎಐಎಡಿಎಂಕೆ ನಾಯಕರು ಸಿದ್ಧಾವಗದೇ ಇರುವುದು ಅವರಿಗೆ ತೀವ್ರ ನಿರಾಸೆ ಉಂಟುಮಾಡಿತು. ಎಐಎಡಿಎಂಕೆ ನಾಯಕರು ಶಶಿಕಲಾ ಅವರಿಗೆ ದ್ರೋಹ ಬಗೆದರು ಎಂದು ಕೆಲ ಮಾಧ್ಯಮಗಳಿಗೆ ಟಿಟಿಡಿ ದಿನಕರನ್‌ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಶಶಿಕಲಾ ಪಕ್ಷಕ್ಕೆ ಮರಳಲು ತೀವ್ರವಾಗಿ ವಿರೋಧಿಸಿದ್ದರು. ಹೀಗಾಗಿ ಎರಡ್ಮೂರು ದಿನಗಳಿಂದ ಶಶಿಕಲಾ ಇಂತಹ ಘೋಷಣೆ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ನಾನು ಬುಧವಾರ ರಾತ್ರಿ ಅವರನ್ನು ಭೇಟಿಯಾದೆ ಮತ್ತು ತಡೆಯಲು ಪ್ರಯತ್ನಿಸಿದೆ, ಆದರೆ ಅಷ್ಟರಲ್ಲಿಯೇ ಅವರು ನಿರ್ಧಾರ ಮಾಡಿಬಿಟ್ಟಿದ್ದರು ಎಂದು ಅವರು ಕೆಲ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಇದರಲ್ಲಿ ಕೆಲವು ಅಂಶಗಳನ್ನು ಹುಡುಕುಬಹುದು. ಮೊದಲನೆಯದಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ಎಐಎಡಿಎಂಕೆ ಪರವಾಗಿಲ್ಲ. ಇಂಥ ಸಂದರ್ಭದಲ್ಲಿ ತಾನು ಚುನಾವಣಾ ಅಖಾಡಕ್ಕೆ ಧುಮುಕಿ ಮತಗಳು ವಿಭಜನೆಯಾದರೆ ನಾಳೆ ಎಐಎಡಿಎಂಕೆ ಈ ನಷ್ಟಕ್ಕೆ ನನ್ನನ್ನು ದೂಷಿಸಬಾರದು ಎಂಬುದು ಸಹ ಈ ನಿರ್ಧಾರದ ಹಿಂದಿನ ಕಾರಣವಿರಬಹುದು, ಯಾಕೆಂದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಶಶಿಕಲಾ ಅವರು ರಾಜಕೀಯವಾಗಿ ಶಕ್ತಿಯುತವಾಗಲು ಎಐಎಡಿಎಂಕೆಗೆ ಮುಖ್ಯ ತಡೆ ಎಂದು ಪಕ್ಷ ಹೇಳಿತ್ತು. ಹೀಗಾಗಿ ಆಗ ತಾನು ರಾಜಕೀಯದಿಂದ ದೂರವಿರಲು ನಿರ್ಧರಿಸಿದರೆ ಟಿಟಿಡಿ ದಿನಕರನ್‌ ಎಎಂಎಂಕೆ ಹಾಗೂ ಎಐಎಡಿಎಂಕೆ ಮೈತ್ರಿಗೆ ದಾರಿ ಮಾಡಿಕೊಡುತ್ತದೆ ಎಂಬ ಆಲೋಚನೆ ಈ ನಿರ್ಧಾರಕ್ಕೆ ಕಾರನವಿರಬಹುದು ಎಂಬುದು ಹಲವರ ಅಭಿಪ್ರಾಯ. ಹೀಗಾಗಿ ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ದೂರವಿದ್ದು ಮುಂದೆ ನೋಡೋಣ ಎಂದು ಈ ನಿರ್ಧಾರಕ್ಕೆ ಬಂದಿರಬಹುದು ಎನ್ನುತ್ತಾರೆ ಕೆಲ ರಾಜಕೀಯ ವಿಶ್ಲೇಷಕರು. ಆದರೆ, ಟಿಟಿವಿ ದಿನಕರನ್ ಇದನ್ನು ಒಪ್ಪುವುದಿಲ್ಲ. “ಅವರು ಎಎಂಎಂಕೆ ವಿಷಯದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದ್ದಾರೆ.
ಆದರೆ ಮತ್ತೆ ಕೆಲವು ರಾಜಕೀಯ ವಿಶ್ಲೇಷಕರು ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಶಿಕಲಾ ಈಗ ಸದ್ಯಕ್ಕೆ ರಾಜಕೀಯದಿಂದ ದೂರ ಸರಿದಿರಬಹುದು. ಆದರೆ ಒಮ್ಮೆ ಎಐಎಡಿಎಂಕೆ ಅಧಿಕಾರ ಕಳೆದುಕೊಂಡರೆ ಆಗ ಅವರು ಪಕ್ಷಕ್ಕೆ ಅನಿವಾರ್ಯವಾಗುವ ಸಾಧ್ಯತೆ ಹೆಚ್ಚು. ಆಗ ಎಐಎಡಿಎಂಕೆ ನಾಯಕರು ಹಾಗೂ ಕಾರ್ಯಕರ್ತರಿಂದಲೇ ಪಕ್ಷಕ್ಕೆ ಬರುವಂತೆ ಒತ್ತಡ ಬರುತ್ತದೆ. ಆಗ ಪಕ್ಷದ ಮೇಲೆ ಹಿಡಿತ ಸಾಧಿಸಬಹುದು ಎಂಬ ಲೆಕ್ಕಾಚಾರವೂ ಇರಬಹುದು. ತಾನು ರಾಜಕೀಯದಲ್ಲಿ ಸಕ್ರಿಯವಾಗಿ ಎಐಎಡಿಎಂಕೆ ಸೋತರೆ ಅದನ್ನು ತನ್ನ ತಲೆಗೆ ಕಟ್ಟುವ ಸಾಧ್ಯತೆ ಜಾಸ್ತಿ, ದೂರ ಉಳಿದು ಆಗ ಎಐಎಡಿಎಂಕೆ ಅಧಿಕಾರ ಕಳೆದುಕೊಂಡರೆ ತನ್ನ ಅನಿವಾರ್ಯತೆ ಜಾಸ್ತಿ. ಆಗ ನಿಧಾನವಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ದೂರದ ಉದ್ದೇಶವೂ ಇರಬಹುದು ಎಂದು ಅನೇಕರು ಈ ದಿಢೀರ್‌ ರಾಜೀನಾಮೆಗೆ ವಿಶ್ಲೇಷಣೆ ನೀಡುತ್ತಾರೆ. ಒಂದು ಕಾಲದಲ್ಲಿ ಎಐಎಡಿಎಂಕೆಯಲ್ಲಿ ಜಯಲಲಿತಾ ನಂತರ ಹೆಚ್ಚು ಹಿಡಿತ ಹೊಂದಿದ್ದ ಶಶಿಕಲಾ ದಿಢೀರ್‌ ರಾಜೀನಾಮೆ ಹಿಂದೆ ಮರ್ಮವಂತೂ ಇದ್ದೇ ಇದೆ ಎನ್ನುತ್ತಾರೆ, ಇದೇ ಇರಬಹುದಾ ಅವರ ದಿಢೀರ್‌ ರಾಜಕೀಯ ನಿವೃತ್ತಿ ಘೋಷಣೆಯ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ..? ಕಾಲವೇ ಉತ್ತರಿಸಬೇಕು.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement