ಜಿಎಸ್‍ಟಿ ನಷ್ಟ ಪರಿಹಾರದ ಕಾಯ್ದೆ ಮತ್ತೆ 5 ವರ್ಷ ಮುಂದುವರಿಸಿ

ಬೆಂಗಳೂರು: ಜಿಎಸ್‍ಟಿ ನಷ್ಟ ಪರಿಹಾರದ ಕಾಯ್ದೆಯನ್ನು ಮತ್ತೆ 5 ವರ್ಷಗಳ ಕಾಲ ಮುಂದುವರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಜೆಡಿಎಸ್‍ನ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ವಿಧಾನಪರಿಷತ್‍ನ ಪ್ರಶ್ನೋತ್ತರ ಅವಯಲ್ಲಿ ಪ್ರಶ್ನೆ ಕೇಳಿದ ಅವರು, ಜಿಎಸ್‍ಟಿ ಜಾರಿಗೆ ಬರುವ ಮೊದಲು ಕರ್ನಾಟಕದಲ್ಲಿ 36 ಸಾವಿರ ಕೋಟಿರೂ.ಗಳ ತೆರಿಗೆ ಸಂಗ್ರಹವಾಗುತ್ತಿತ್ತು. ಜಿಎಸ್‍ಟಿಯಿಂದ ಪ್ರತಿ ವರ್ಷ ಶೇ.14ರಷ್ಟು ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಲಿದೆ ಎಂಬ ಅಂದಾಜು ಮಾಡಲಾಗಿತ್ತು. ಒಂದು ವೇಳೆ ಏರಿಕೆಯಾಗದೇ ಇದ್ದರೆ ಅದರಿಂದ ಆಗುವ ನಷ್ಟದ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸಲು ಕಾನೂನು ರೂಪಿಸಲಾಗಿದೆ.
ಕಾನೂನಿನ ಅವಧಿ 2022ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಅದನ್ನು ಮತ್ತೆ 5 ವರ್ಷಗಳ ಕಾಲ ಮುಂದುವರೆಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದೇ ಹೋದರೆ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಉತ್ತರ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ, 2017-18ರಲ್ಲಿ 9251.62 ಕೋಟಿ , 2018-19ರಲ್ಲಿ 18,340.47 ಕೋಟಿ, 2019-20ರಲ್ಲಿ 20,105.89 ಕೋಟಿ ನಷ್ಟದ ಅಂದಾಜು ಮಾಡಲಾಗಿದ್ದು, ಅಷ್ಟೂ ಮೊತ್ತವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ. 2020-21ನೇ ಸಾಲಿನಲ್ಲಿ 27,292.38 ಕೋಟಿ ರೂ. ನಷ್ಟದ ಅಂದಾಜಿದೆ. ಕೋವಿಡ್ ಕಾರಣದಿಂದಾಗಿ ಪೂರ್ತಿ ಹಣ ಬಿಡುಗಡೆಯಾಗಿಲ್ಲ. ಜನವರಿ ಅಂತ್ಯಕ್ಕೆ 15,936.43 ಕೋಟಿ ರೂ. ಬಿಡುಗಡೆಯಾಗಿದೆ. 11,355.95 ಕೋಟಿ ರೂ. ಬಾಕಿ ಇದೆ. ಬಾಕಿ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಕೇಂದ್ರ ಸರ್ಕಾರ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರ ಅದನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement