ಶ್ರೀ ಸಿದ್ಧಾರೂಢಮಠ ಒಂದು ಅವಲೋಕನ

posted in: ರಾಜ್ಯ | 2

(ಶಿವರಾತ್ರಿ ನಿಮಿತ್ತ ಲೇಖನ)

ದೇಶದಲ್ಲಿರುವ ಅನೇಕ ಮಹಾತ್ಮರು, ಸಂತರು, ದಾರ್ಶನಿಕರು, ಚಿಂತಕರು ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಪೂಜ್ಯ ಶ್ರೀ ಸಿದ್ಧಾರೂಢರು ಪ್ರಮುಖರು,ಪೂಜ್ಯರು ಅದ್ವೈತ ಸಾಮ್ರಾಟ, ವೇದಾಂತ ಸಾರ್ವಭೌಮರಾಗಿ, ಎಲ್ಲರ ಅಜ್ಜನಾಗಿ ದಾರಿ ತೋರಿಸುತ್ತಿದ್ದಾರೆ.
ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿಯನ್ನು ಪುಣ್ಯಭೂಮಿಯನ್ನಾಗಿ ಪರಿವರ್ತಿಸಿದರು, ಜಾತಿ, ಮತ, ಪಂಥವೆನ್ನದೇ ಎಲ್ಲರ ಕಾಮಧೇನು, ಕಲ್ಪವೃಕ್ಷದಂತಿರುವ ಸಿದ್ಧಾರೂಢ ಮಠ ಜಾತ್ಯತೀತ ಮಠವೆಂದು ದೇಶದಲ್ಲಿ ಹೆಸರುವಾಸಿಯಾಗಿದೆ. ನಂಬಿದ ಭಕ್ತರನ್ನು ಕೈಹಿಡಿದು, ಅವರ ಸಂದೇಹ, ಮನದ ದುಗುಡಗಳನ್ನು ಸಂವಾದ, ಭಜನೆ, ಭಕ್ತಿ ಮತ್ತು ಸೇವಾ ಕಾರ್‍ಯಗಳಿಂದ ಪರಿಹರಿಸುತ್ತಿದ್ದಾರೆ. ಮೋಕ್ಷ ಮಂತ್ರದಾರ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರವನ್ನು ಎಲ್ಲರಿಗೂ ಬಹಿರಂಗವಾಗಿ ಬೋಧಿಸಿದ ಪುಣ್ಯ ಪುರುಷರಾಗಿದ್ದಾರೆ.
೯೪ ವರ್ಷ ಸಾಮಾನ್ಯರಂತೆ ಬದುಕಿದ (ಜನನ ೨೬.೦೩.೧೮೩೬; ಶಿವಸಾಯುಜ್ಯ ೨೧.೦೮.೧೯೨೯) ಪೂಜ್ಯ ಸಿದ್ಧಾರೂಢರು, ಹರನ ಸ್ವರೂಪದ ಮೂಲಕ ಎಲ್ಲರಿಗೂ ಅಭಯ ಆಶೀರ್ವಾದ ಮಾಡುತ್ತಿದ್ದಾರೆ. ಬೀದರ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದ ಶರಣ ದಂಪತಿ ಗುರುಶಾಂತಪ್ಪ ಮತ್ತು ದೇವಮಲ್ಲಮ್ಮ ಅವರ ೩ನೇ ಸುಪುತ್ರರಾದ ‘ಸಿದ್ಧರು’ ಚಿಕ್ಕವಯಸ್ಸಿನಲ್ಲಿಯೇ ಗುರು ಶೋಧನೆ ಮಾಡುತ್ತಾ, ಸುರಪುರ ಅಮರಕೊಂಡ ಮಲ್ಲಿಕಾರ್ಜುನ ಸ್ಥಟಕ ದೇವಾಲಯದ ಕಲ್ಪಮಠದ ಪೂಜ್ಯರಾದ ಗಜದಂಡ ಸ್ವಾಮಿಗಳ ಶಿಷ್ಯರಾಗಿ ಜ್ಞಾನ ಸಂಪಾದಿಸಿಕೊಂಡರು.
ಗಜದಂಡ ಸ್ವಾಮಿಗಳು ಸಿದ್ಧರ ಪ್ರತಿಭೆ, ಜ್ಞಾನ ಮತ್ತು ಪರಿಶ್ರಮ ಗೌರವಿಸಿ, ಸಿದ್ಧಾರೂಢ ಭಾರತಿ ಎಂದು ಪುನರ್ನಾಮಕರಣ ಮಾಡಿದರು. ದೇಶದ ಹಲವಾರು ಪುಣ್ಯಕ್ಷೇತ್ರಗಳ ದರ್ಶನ, ಜ್ಞಾನಗಳೊಡನೆ ವಿಚಾರ ವಿನಿಮಯ, ಮಾಡುತ್ತಾ, ೧೮೭೭ ರಲ್ಲಿ ತಮ್ಮ ೪೧ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದರು. ಸತತ ಧ್ಯಾನ ಮಾಡುತ್ತಾ, ಹುಬ್ಬಳ್ಳಿಯ ಜನತೆಗೆ ಪ್ರವಚನಗಳನ್ನು ನಿಜಗುಣ ಸಾಹಿತ್ಯವನ್ನು ತಿಳಿಸುತ್ತಾ ಬಂದರು. ಕೃಷ್ಣೇಂದ್ರ ಸ್ವಾಮಿಗಳು ತಿಳಿಸಿದ ಹುಬ್ಬಳ್ಳಿಯ ಪುಣ್ಯಾತ್ಮ ಇವರೇ ಎಂದು ತಿಳಿದು, ಹಳೇ ಹುಬ್ಬಳ್ಳಿಯ ಹನ್ನೆರಡು ಮಠದ ಸ್ವಾಮಿಗಳು ಸಿದ್ಧಾರೂಢರಿಗೆ ಆದರಾತಿಥ್ಯ ಮಾಡಿದ್ದಾರೆ.
ಈಗಿನ ಪ್ರಶಾಂತವಾದ, ವಿಶಾಲವಾದ, ೧೦ ಎಕರೆ ಮಠದಲ್ಲಿ ಹಿಂದೆಯೇ ಸಿದ್ಧಾಶ್ರಮವನ್ನು ಭಕ್ತರು ನಿರ್ಮಿಸಿದ್ದರು. ಸಿದ್ಧಾರೂಢರಿಂದ ಶಾಸ್ತ್ರ ಪ್ರವಚನಗಳನ್ನು ನಿತ್ಯವೂ ಕೇಳುತ್ತಿದ್ದರು. ಹಲವಾರು ಪವಾಡಗಳನ್ನು ಮಾಡಿದ ಪೂಜ್ಯರು, ಆ ದಿನಮಾನಗಳಲ್ಲಿಯೇ ಭಕ್ತರಿಗೆ ಅನ್ನದಾಸೋಹವನವನ್ನು ಆರಂಭಿಸಿದರು. ತೊಂದರೆ ಕೊಟ್ಟವರಿಗೆ, ಒಳಿತು ಮಾಡಿ ಆಶೀರ್ವಾದ ಮಾಡುತ್ತಿದ್ದರು.
ಗರಗದ ಮಾಡಿವಾಳಪ್ಪನವರು, ನವಲಗುಂದ ನಾಗಲಿಂಗ ಸ್ವಾಮಿಗಳು, ಉಣಕಲ್ಲ ಸಿದ್ದಪ್ಪಜ್ಜ, ಶಿಶುನಾಳ ಶರೀಫರು, ಮಹಾತ್ಮಾ ಗಾಂಧೀಜಿ, ಲೋಕಮಾನ್ಯ ಟಿಳಕ ಮುಂತಾದವರು ಮಠಕ್ಕೆ ಭೆಟ್ಟಿ ನೀಡಿ, ಪೂಜ್ಯರಾದ ಸಿದ್ಧಾರೂಢ ಸ್ವಾಮಿಗಳೊಂದಿಗೆ ವಿಚಾರ ವಿನಿಮಯ ಮಾಡಿದ್ದಾರೆ.
ಉಜ್ಜಣ್ಣವರ ಶ್ರೀ ಸಿದ್ಧಪ್ಪ ಹಾಗೂ ಪಾರ್ವತಮ್ಮ ದಂಪತಿ ಪುತ್ರರಾದ ಶ್ರೀ ಗುರುನಾಥರೂಢ ಸ್ವಾಮಿಗಳು (ಜನನ : ೦೯-೦೬-೧೯೦೯ ; ಶಿವಸಾಯುಜ್ಯ ೧೩-೦೫-೧೯೬೨) ಸಿದ್ಧಾರೂಢ ಮಠದ ಉತ್ತರಾಧಿಕಾರಿಯಾಗಿ ಮೌನದಿಂದಲೇ ಭಕ್ತರಿಗೆ ವರದಾನ ನೀಡುತ್ತಿದ್ದಾರೆ. ಪೂಜ್ಯರು ಇಂದಿಗೂ ತಮ್ಮ ದಿವ್ಯದೃಷ್ಟಿಯಿಂದ ಭಕ್ತರನ್ನು ಉದ್ಧರಿಸುತ್ತಿದ್ದಾರೆ. ಕರ್ತೃ ಗದ್ದುಗೆಯನ್ನು (ಸಮಾಧಿಗಳು) ಮುಟ್ಟಿ, ದರ್ಶನ ಪಡೆಯುತ್ತಿರುವ ಭಕ್ತರ ಸಂಖ್ಯೆ ಬೆಳೆಯುತ್ತಲೇ ಇದೆ. ಶಿವರಾತ್ರಿ, ಅಮಾವಾಸ್ಯೆ, ಯುಗಾದಿ ಮುಂತಾದ ದಿನಗಳಲ್ಲಿ ದೂರದ ಊರುಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಮಠಕ್ಕೆ ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ.
ಭಕ್ತರ ಕಲ್ಯಾಣವನ್ನೆ ಬಯಸಿದ ಸಿದ್ಧಾರೂಢಮಠದಲ್ಲಿ ತ್ರಿಕಾಲ ಅನ್ನದಾನ, ಜ್ಞಾನ ದಾನ, ಆರೋಗ್ಯ ದಾನ ನಿರಂತರವಾಗಿ ನಡೆಯುತ್ತಿವೆ. ದಿನದ ೨೪ ಗಂಟೆಯಲ್ಲಿ ಓಂ ನಮಃ ಶಿವಾಯ ಮಂತ್ರದ ಪಠಣ ತಂಬೂರಿಯೊಂದಿಗೆ ಮಠದಲ್ಲಿ ೨೩.೦೮.೧೯೨೯ ರಿಂದ ನಿರಂತರವಾಗಿ ನಡೆಯುತ್ತಿದೆ. ಇದನ್ನು ಆರಂಭಿಸಿದವರು ಸಿದ್ಧಾರೂಢ ಸ್ವಾಮಿಗಳ ಶಿಷ್ಯರಾದ ಗೋವಿಂದ ಸ್ವಾಮಿಗಳು. ಮಠದಲ್ಲಿ ಇರುವ ಆರೂಢ-ಜ್ಯೋತಿ ನಂದಾದೀಪ ಭಕ್ತರಿಗೆ ನಿರಂತರವಾದ ಬೆಳಕನ್ನು ನೀಡುತ್ತದೆ.
೧೯೫೦ ರಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮೀಟಿಯ ಧಾರವಾಡದ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಟ್ರಸ್ಟ್‌ ವತಿಯಿಂದ ಜಾತ್ರಾ ಮಹೋತ್ಸವ, ತೆಪ್ಪದ ತೇರು, ಶ್ರೀಮನ್ನ ನಿರಂಜನ ಶಿವಯೋಗಿಗಳ ಜಯಂತಿ, ಶಿವರಾತ್ರಿ ಆಚರಣೆ, ಯೋಗ ಮತ್ತು ಆಧ್ಯಾತ್ಮಿಕ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ.
ಶ್ರೀ ಸಿದ್ಧಾರೂಢ ಕಥಾಮೃತ, ಶ್ರೀ ಮನ್ನಿಜಗುಣ ಶಿವಯೋಗಿ ವಿರಚಿತ ಕೈವಲ್ಲ ಪದ್ಧತಿಯ ಜ್ಞಾನ ಪ್ರತಿಪಾದನ ಸ್ಥಲ, ಸಿದ್ಧಲಕ್ಷಣ ಸಂಗ್ರಹ, ಸಿದ್ಧಾರೂಢ ಭಾರತಿ, ಶ್ರೀ ಸಿದ್ಧಾರೂಢ ಚರಿತಾಮೃತ, ಕೈವಲ್ಯ ಕಲ್ಪವಲ್ಲರಿ, ಸರ್ವಾತ್ಮ ಸದ್ಗುರು ಶ್ರೀ ಸಿದ್ಧಾರೂಢ ಭಾರತಿ, ಶ್ರೀ ಸಿದ್ಧಾರೂಢರ ಜೀವನ ಚರಿತ್ರೆ ಮುಂತಾದ ಗ್ರಂಥಗಳು ಟ್ರಸ್ಟ್‌ ವತಿಯಿಂದ ಪ್ರಕಟವಾಗಿವೆ. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಯಲ್ಲಿನ ಈ ಗ್ರಂಥಗಳು, ಮಠದ ಬಗೆಗೆ ಭಕ್ತರಲ್ಲಿ ಸ್ಪೂರ್ತಿಯನ್ನೂ ತುಂಬುತ್ತಿವೆ. ‘ಸಿದ್ಧರೂಢ ತತ್ತ್ವಾಮೃತ’ ಮಾಸ ಪತ್ರಿಕೆ ಕಳೆದ ಐದು ವರ್ಷಗಳಿಂದ ಪ್ರತಿ ತಿಂಗಳು ಪ್ರಕಟವಾಗುತ್ತಿದೆ. ಡಾ. ಮಲ್ಲಿಕಾರ್ಜುನ ಸಿಂದಗಿ ಮುಂತಾದ ಲೇಖಕರು ಮಠದ ಕುರಿತು ಗ್ರಂಥಗಳನ್ನು, ನಾಮಾವಳಿಗಳನ್ನು, ಮಂಗಳಾರತಿ ಪದ್ಯಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.
ಕುಟುಂಬ ಸಹಿತ ಮತ್ತು ಸ್ನೇಹಿತರೊಂದಿಗೆ ಮಠಕ್ಕೆ ಬರುವ ಭಕ್ತರು ಉಭಯ ಪೂಜ್ಯರ ಗದ್ದುಗೆ, ಕೈಲಾಸ ಮಂಟಪ, ಶಯನ ಮಂದಿರ, ಪ್ರಸಾದ ಮಂದಿರದಲ್ಲಿರುವ ಪೂಜ್ಯ ಸಿದ್ಧಾರೂಡರು ಕುಳಿತು ಆಶೀರ್ವಾದ ಮಾಡುತ್ತಿದ್ದ ಖುರ್ಚಿ ದರ್ಶನ ಪಡೆದು ಧನ್ಯತಾಭಾವ ಪಡೆಯುತ್ತಿದ್ದಾರೆ. ಮಠದಲ್ಲಿ ಮುಂಜಾನೆ ೬.೦೦ ಗಂಟೆಗೆ ಮತ್ತು ಸಾಯಂಕಾಲ ೬.೦೦ ಗಂಟೆಗೆ ಮಹಾಮಂಗಳಾರತಿ ನಡೆಯುತ್ತದೆಯಲ್ಲದೆ, ಸಮಯವನ್ನು ಎಲ್ಲರಿಗೂ ಗಂಟೆ ಹೊಡೆಯುವ ಮೂಲಕ ತಿಳಿಸಲಾಗುತ್ತಿದೆ. ಮುತ್ತೈದೆಯರು ಪ್ರತಿದಿನ ಆರತಿಗಳೊಂದಿಗೆ ಉಭಯ ಗದ್ದುಗೆಗಳ ದರ್ಶನ ಪಡೆಯುತ್ತಿದ್ದಾರೆ. ಸ್ವಯಂ ಸೇವಕರು ಮಠದ ಆವರಣವನ್ನು ಸ್ವಚ್ಛವಾಗಿರಿಸುವುದರೊಂದಿಗೆ ಪ್ರಸಾದವನ್ನು ಭಕ್ತರಿಗೆ ನೀಡಲು ಸಹಕರಿಸುತ್ತಿದ್ದಾರೆ.
ಸಿದ್ಧಾರೂಢರ ಆಶೀರ್ವಾದ ಪಡೆದ ಲಕ್ಷಾಂತರ ಭಕ್ತರು ಬಾಳಿನಲ್ಲಿ ಬೆಳಕನ್ನು ಕಂಡಿದ್ದಾರೆ. ಭಕ್ತರ ಯಾವುದೇ ಸಮಸ್ಯೆಗೆ ಸಿದ್ಧಾರೂಢರಿಂದ ಅರೆನಿಮಿಷದಲ್ಲಿ ತಟ್ಟನೇ ಉತ್ತರ ಸಿಗುತ್ತಿತ್ತು. ಅಸದೃಶ ಶಿವಶಕ್ತಿಗಳ ಸಂಗಮವೆನಿಸಿದ ಸದ್ಗುರು ಶ್ರೀ ಸಿದ್ಧಾರೂಢರು ಮಾತನಾಡುವ ದೇವರು ಎನಿಸಿದರು.
ಶ್ರೀ ಸಿದ್ಧಾರೂಢರು ಮಾತನಾಡುವ ದೇವರೆನಿಸಿದರೆ, ಅವರ ಆತ್ಮಾನಂದದ ಸ್ವರ್ಣ ಸಿಂಹಾಸನಕ್ಕೆ ನಂತರ ಅಧಿಕೃತ ಉತ್ತರಾಧಿಕಾರಿಗಳಾದ ಶ್ರೀ ಗುರುನಾಥಾರೂಢರು ಮೌನ ಬ್ರಹ್ಮರೆನಿಸಿದರು. ಈ ಇಬ್ಬರೂ ಸ್ವಾಮಿಗಳು ಆತ್ಮಜ್ಞಾನದ ಎರಡು ಮುಖಗಳು.
ಭಕ್ತರಿಗಾಗಿ ಇನ್ನೂ ಹೆಚ್ಚಿನ ಭಕ್ತ ನಿಲಯಗಳನ್ನು, ಸ್ನಾನ ಗೃಹ ಮತ್ತು ಶೌಚಾಲಯಗಳನ್ನು ಕಟ್ಟಿಸುವ ಕಮಿಟಿ ಅದ್ವೈತ ವೇದಾಂತ ಮಂಟಪವನ್ನು, ದಾಸೋಹ ನಿಲಯಕ್ಕೆ ಸೋಲಾರ್‌ ಪ್ಲಾಂಟ್‌ಗಳನ್ನು, ಸಾಧು ಭವನವನ್ನು, ವೇದಾಂತ ಮತ್ತು ಯುವಸಮೂಹಕ್ಕಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸೌಲಭ್ಯವನ್ನು ಕಲ್ಪಿಸಲು ಯೋಜನೆಗಳನ್ನು ಸಿದ್ಧಪಡಿಸಿದೆ.
ಭಕ್ತರ ಅನುಕೂಲತೆಗಾಗಿ ಖೋಡೆ ಚೌಟ್ರಿ, ದಾಸಪ್ಪ ಚೌಟ್ರಿ, ಭಕ್ತ ನಿಲಯ, ಯಾತ್ರಿ ನಿವಾಸ, ನಿರಂಜನ ಹಾಲ್‌ನಲ್ಲಿ ೧೦೦ ರೂಮುಗಳು ಇದ್ದು, ಸದ್ಯದಲ್ಲಿಯೇ ಇನ್ನು ೨೦ ರೂಮುಗಳು ಸೇವೆಗೆ ಲಭ್ಯವಾಗಲಿವೆ. . ಆರೂಢ ಶ್ರಾವಣ, ಭಗವಂತ ಚಿಂತನ ಸಾಧನಾ ಶಿಬಿರಗಳೊಂದಿಗೆ ಕಳೆದ ೫ ವರ್ಷಗಳಿಂದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ೨೨೦ ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿ ದಾಖಲೆ ನಿರ್ಮಿಸಿವೆ.
೮೧೯೬ ಕ್ಕೂ ಹೆಚ್ಚಿನ ಪೋಷಕರು, ಆಶ್ರಯದಾತರು, ಆಜೀವ ಸದಸ್ಯರು, ಮಠದ ಕಾರ್‍ಯಗಳನ್ನು ಸಕ್ರಿಯವಾಗಿ ಭಾಗವಹಿಸುವ ಮೂಲಕ ಆಧ್ಯಾತ್ಮಿಕ, ಸಾಂಸ್ಕೃತಿಕ ಕಂಪನ್ನು ಮಠದ ಆವರಣದಲ್ಲಿ ಪಸರಿಸುತ್ತಿದ್ದಾರೆ. ದಾಸೋಹಕ್ಕೆ ಭಕ್ತರು ನಿರಂತರವಾಗಿ ಹಣವನ್ನು, ದವಸ, ಧಾನ್ಯ ಮತ್ತು ಕಾಯಿಪಲ್ಲೆಗಳನ್ನು ಸಲ್ಲಿಸುತ್ತಿದ್ದಾರೆ.
ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅವರ ಮಾರ್ಗದರ್ಶನದಲ್ಲಿ ಟ್ರಸ್ಟ್‌ ಕಮಿಟಿಯ ಚೇರಮನ್ನರಾದ ನಿವೃತ್ತ ಪೋಲಿಸ್‌ ಅಧಿಕಾರಿ ಡಿ.ಡಿ. ಮಾಳಗಿ, ಗೌರವ ಕಾರ್ಯದರ್ಶಿಗಳು, ನಿವೃತ್ತ ಸಂಸ್ಕೃತ ಶಿಕ್ಷಕರರಾದ ಎಸ್. ಆಯ್. ಕೋಳಕೂರ, ಧರ್ಮದರ್ಶಿಗಳು ಮಠದಲ್ಲಿ ಅನೇಕ ಅಭಿವೃದ್ಧಿ ಪರ ಕಾರ್‍ಯಗಳನ್ನು ಮಾಡುತ್ತಿದ್ದು, ಅವರಿಗೆ ಸಿಬ್ಬಂದಿ ಸಹಕರಿಸುತ್ತಿದ್ದಾರೆ.
– ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.1 / 5. ಒಟ್ಟು ವೋಟುಗಳು 9

2 Responses

  1. Deepa

    ನಮ್ಮ ಹುಬ್ಬಳ್ಳಿಯ ಪ್ರತಿಷ್ಠಿತ “ಸಿದ್ಧರೊಡ ಅಜ್ಜಾರ -ಸಿದ್ಧರೊಡ ಮಠ “ದ ಬಗ್ಗೆ ಇತಿಹಾಸ ದಿಂದ ಪ್ರಚಲಿತ ದಿನಗಳ ಸೇವಾ ಕಾರ್ಯಕ್ರಮ, ಸೇವೆ (ಅನ್ನ -ವಸತಿ ) ಇನ್ನೂ ಮುಂತಾದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದಿರಿ ಹಾಗೂ ಗೌರವಯುತ ಲೇಖನವಾಗಿದೆ. ಎಂದು ಹೇಳಬಹುದು.

  2. Kedari badiger

    ಅದ್ಭುತ ಆರೂಢ ಸಿದ್ಧಾರೂಢ ನಮೋ ನಮಃ

ನಿಮ್ಮ ಕಾಮೆಂಟ್ ಬರೆಯಿರಿ