ಶಾಸಕಿಯರಿಂದ ತಾವು ಕುಳಿತಿದ್ದ ಟ್ರ್ಯಾಕ್ಟರ್ ಎಳೆಸಿದ ಕಾಂಗ್ರೆಸ್‌ ನಾಯಕ ಹೂಡಾ…!

ಕಾಂಗ್ರೆಸ್ ನಾಯಕರೊಬ್ಬರ ಅತರೇಕದ ವರ್ತನೆ ಈಗ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ತಮ್ಮ ಅನುಚಿತ ವರ್ತನೆ ಮೂಲಕ ಸುದ್ದಿಯಲ್ಲಿದ್ದಾರೆ. ಭೂಪಿಂದರ್ ಸಿಂಗ್ ಹೂಡಾ ಅವರು ತಾವು ಕುಳಿತಿದ್ದ ಟ್ರ್ಯಾಕ್ಟರ್ ಎಳೆಯಲು ಮಹಿಳಾ ಶಾಸಕಿಯರನ್ನು ಬಳಸಿಕೊಂಡಿದ್ದಾರೆ ಎನ್ನುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರವ್ಯಾಪಿ ಚರ್ಚೆಗೂ ಕಾರಣವಾಗಿದೆ.
ಈ ವಿದ್ಯಮಾನವನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಪ್ರತಿಭಟನೆಯ ವೇಳೆ ಶಾಸಕಿಯರನ್ನು ಟ್ರ್ಯಾಕ್ಟರ್ ಹಗ್ಗ ಎಳೆಯಲು ಬಳಸಿಕೊಂಡು “ಜೀತ ಪದ್ಧತಿ”ಯನ್ನು ಕಾಂಗ್ರೆಸ್ ನಾಯಕರು ನೆನಪು ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಈ ರೀತಿಯ ವರ್ತನೆ ತೋರಿದ ಹೂಡಾ ಅವರು, ಕಾಂಗ್ರೆಸ್ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ ಎಂದು ಗೀತಾ ವಿವೇಕಾನಂದ ಅವರು ಟೀಕಿಸಿದ್ದಾರೆ.
ಗೌರವಯುತ ಪ್ರತಿಭಟನೆ ಮಾಡುವುದೇ ಅವರ ಉದ್ದೇಶವಾಗಿದ್ದರೆ ಭೂಪಿಂದರ್ ಸಿಂಗ್ ಹೂಡಾ ಮತ್ತು ಇತರ ನಾಯಕರು ಶಾಸಕಿಯರನ್ನು ಟ್ರ್ಯಾಕ್ಟರಿನಲ್ಲಿ ಕುಳ್ಳಿರಿಸಿ ತಾವು ಹಗ್ಗದಿಂದ ವಾಹನ ಎಳೆಯಬೇಕಿತ್ತು. ಆದರೆ, ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರುಷ ಮತ್ತು ಮಹಿಳೆಯರ ನಡುವಿನ ಜನಸಂಖ್ಯೆ ಅನುಪಾತವನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ “ಬೇಟಿ ಬಚಾವೊ, ಬೇಟಿ ಪಡಾವೊ” ಕಾರ್ಯಕ್ರಮಕ್ಕೆ ಹರಿಯಾಣ ರಾಜ್ಯದಿಂದ ಚಾಲನೆ ನೀಡಿದ್ದರು. ಅದೇ ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಕೆಟ್ಟ ಸಂಸ್ಕೃತಿಯನ್ನು ಅನಾವರಣಗೊಳಿಸಿರವುದು ಖಂಡನೀಯ ಎಂದು ಗೀತಾ ವಿವೇಕಾನಂದ ಅವರು ತಿಳಿಸಿದ್ದಾರೆ. ಕೇಂದ್ರ ಸಚಿವೆ ಸಮೃತಿ ಇರಾನಿ ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೌನವನ್ನು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆ ಬಗ್ಗೆ ಹೂಡಾ ಅವರನ್ನು ಕಟು ಶಬ್ದಗಳಿಂದ ಖಂಡಿಸಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

3.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement