ಲಾಕ್‌ಡೌನ್‌ ಮಾಡುವುದು, ಬಿಡುವುದು ನಿಮ್ಮ ಕೈಯ್ಲಿದೆ; ಒಂದು ವಾರ ಕಾದು ನೋಡ್ತೇವೆ: ಸಿಎಂ

ಬೆಂಗಳೂರು: ರಾಜ್ಯವನ್ನು ಲಾಕ್‌ ಡೌನ್‌ ಮಾಡುವುದು, ಬಿಡುವುದು ನಿಮ್ಮ ಕೈಯಲ್ಲಿದೆ. ರಾಜ್ಯವನ್ನು ಮತ್ತೊಮ್ಮೆ ಲಾಕ್‌ ಡೌನ್‌ ಮಾಡಬಾರದು ಎಂಬ ಮನಸ್ಸು ನಿಮ್ಮಲ್ಲಿದ್ದರೆ, ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೊನಾ ಮಟ್ಟ ಹಾಕಲು ಇರುವುದು ಇದೊಂದೇ ಮಾರ್ಗ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ರೋಗದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನನಿತ್ಯ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಿರ್ಲಕ್ಯವಾಗಿದೆ. ಇನ್ನು ಪ್ರಕರಣಗಳ ಹೆಚ್ಚಳ ನೋಡಿದರೆ ಇದು ಎರಡನೇ ಅಲೆ ಸಾಧ್ಯತೆಯೂ ಇದೆ. ದೇವರ ದಯೆಯಿಂದ ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆಯಾಗಿಲ್ಲ. ಹೀಗಾಗಿ ರಾಜ್ಯದ ಜನತೆಗೆ ನಾನು ಹೇಳುವುದು ಒಂದೇ. ರಾಜ್ಯವನ್ನು ಲಾಕ್‌ ಡೌನ್‌ ಮಾಡುವುದು, ಬಿಡುವುದು ನಿಮ್ಮ ಕೈಯಲ್ಲಿದೆ.  ಮತ್ತೊಮ್ಮೆ ಲಾಕ್‌ ಡೌನ್‌ ಮಾಡಬಾರದು ಎಂದಾದರೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಹೇಳಿದರು.
ಜನರಿಗೆ ಒಂದು ವಾರಗಳ ಕಾಲ ಸಮಯಾವಕಾಶ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ದಯವಿಟ್ಟು ಸಹಕರಿಸಿ, ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸಿ. ಹಾಗೆ ಮಾಡಿದ್ದರೆ ಮತ್ತೆ ನಿಯಮ ಹೇರಬೇಕಾಗುತ್ತದೆ ಹಾಗೂ ದಂಡ ವಿಧಿಸಬೇಕಾಗುತ್ತದೆ. ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜನರಿಗೆ ಮನವಿ ಮಾಡಿದರು.
ಮದುವೆ ಸಮಾರಂಭಗಳಿಗೆ ಇನ್ನು 500 ಜನಕ್ಕಿಂತ ಹೆಚ್ಚು ಜನ ಸೇರಬಾರದು ಎಂದ ಅವರು, ಕೊರೊನಾ ಪರೀಕ್ಷೆಗಳನ್ನ ಹೆಚ್ಚಿಸಲಾಗುವುದು. ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗುವುದು ಎಂದು ಹೇಳಿದರು.
ಮಾರ್ಚ್​ 17ರಂದು ಪ್ರಧಾನಿ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಪ್ರಧಾನಿ ಮೋದಿಯವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಇರಬೇಕಾಗಿದೆ. ಒಂದು ವೇಳೆ ಮತ್ತೆ ಕಠಿಣ ನಿಯಮ ಜಾರಿಯಾದರೆ ಅವುಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದರು.
ಗ್ರಾಮಾಂತರ, ಕೊಳಗೇರಿ ಪ್ರದೇಶಗಳಲ್ಲಿ ಲಸಿಕೆ ನೀಡುವ ಪ್ರಮಾಣವನ್ನು ಇನ್ನೂ ಹೆಚ್ಚಿಸುತ್ತೇವೆ. ಇನ್ನೂ ಹೆಚ್ಚಿನ ಜನ ಮುಂದೆ ಬಂದು ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement