ನವ ದೆಹಲಿ: ಪ್ರಧಾನಿ ಮೋದಿ ಮುಖ್ಯಮಂತ್ರಿಗಳೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹತ್ತು ಹಲವು ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಕೊರೊನಾ ಎರಡನೇ ಅಲೆಗಳ ಬಗ್ಗೆ (ಕೋವಿಡ್-19 ರ) ಸೂಚನೆ ನೀಡಿದ್ದು, ಭಾರತದಲ್ಲಿ ಮಹಾರಾಷ್ಟ್ರ, ಪಂಜಾಬ್ ನಂತಹ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಕೋವಿಡ್ ಪಾಸಿಟಿವಿಟಿ ದರವೂ ಹೆಚ್ಚುತ್ತಿದೆ. ಭಾರತದ 70 ಜಿಲ್ಲೆಗಳಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೆ, ದೇಶವು ಎರಡನೇ ಅಲೆ (Covid-19) ನೋಡಬಹುದಾದ ಸನ್ನಿವೇಶ ನಿರ್ಮಾಣವಾಗಲಿದೆ, ಸೋಟಗೊಳ್ಳುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದು ಈ ಬಗ್ಗೆ ಪರಿಣಾಮಕಾರಿ ಕ್ರಮಗಳಿಗೆ ಸೂಚನೆ ನೀಡಿದ್ದಾರೆ.
ಕೊವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಹಲವು ಜಿಲ್ಲೆಗಳಲ್ಲಿ, ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಣೆ ಮಾಡದೇ ಇರುವುದು, ಮತ್ತು ಮುಖವಾಡಗಳನ್ನು ಹಾಕದೇ ಇರುವುದನ್ನು ಗಮನಿಸುತ್ತಿದ್ದೇವೆ, ಕೊರೊನಾ ಪರೀಕ್ಷೆ ಮತ್ತು ಲಸಿಕೆ ನೀಡುವುದು ಕೆಲವು ರಾಜ್ಯಗಳಲ್ಲಿ ಕಡಿಮೆ ಯಾಗಿದ್ದು, ಇದು ಕಳವಳಕಾರಿ ಸಂಗತಿ ಎಂದು ಅವರು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಆಡಳಿತಕ್ಕೆ ಅತಿಯಾದ ಆತ್ಮವಿಶ್ವಾಸವೂ ಬೇಡ ಹಾಗೂ ಅತಿಯಾದ ಆತಂಕವೂ ಬೇಡ ಎಂದು ಹೇಳಿದ ಅವರು, ಜನರು ಲಸಿಕೆ ತೆಗೆದುಕೊಳ್ಳಲು ಪರಿಸರ ನಿರ್ಮಾಣ ಮಾಡಲು ಮುನ್ನೆಚ್ಚರಿಕೆ ಅಗತ್ಯವಾಗಿದೆ.. ಕಳೆದ ಒಂದು ವರ್ಷದಿಂದ ನಮ್ಮ ಆರೋಗ್ಯ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಇದನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಕಟ್ಟುನಿಟ್ಟಿನ ನಿಯಂತ್ರಣ, ಕಣ್ಗಾವಲು, ಪರೀಕ್ಷೆ, ಪತ್ತೆ ಮತ್ತು ಜಾಗೃತಿ ಮಾಡುವುದು ಕೊರೊನಾ ನಿಯಂತ್ರಣಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ ಅವರು, ಲಸಿಕೆ ತೆಗೆದುಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ಒಂದು ದಿನದಲ್ಲಿ 30 ಲಕ್ಷ ಲಸಿಕೆ ನೀಡುವ ಗುರಿ ಮುಟ್ಟಿದ್ದೇವೆ. ಲಸಿಕೆಗಳ ಹಾಳಾಗುವುದರ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ತೆಲಂಗಾಣ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದ ಲಸಿಕೆ ನೀಡದೇ ಲೋಪವಾಗಿರುವ ಬಗ್ಗೆ ವರದಿ ಬರುತ್ತಿದೆ. ಲಸಿಕೆ ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಕೆಲವು ಲಸಿಕೆ ಕೇಂದ್ರಗಳು ಇನ್ನೂ ಸಕ್ರಿಯವಾಗಿಲ್ಲ. ಲಸಿಕೆ ಅವಧಿ ಮುಗಿಯುವ ದಿನಾಂಕಗಳ ಮೇಲೂ ನಿಗಾ ಇಡಬೇಕಿದೆ. ಹೀಗಾಗಿ, ಈ ಬಗ್ಗೆ ಗಮನ ಇಟ್ಟು ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಫ್ರಂಟ್ ಲೈನ್ ಕಾರ್ಯಕರ್ತರು ಗಮನಿಸಬೇಕಾಗಿದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ