ದೆಹಲಿ ಮಾದರಿಯಲ್ಲಿ ಬೆಂಗಳೂರನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರಿಯಿರಿ: ಕರ್ನಾಟಕದ ರೈತರಿಗೆ ಟಿಕಾಯತ್‌ ಕರೆ

ಶಿವಮೊಗ್ಗ: ನರೇಂದ್ರ ಮೋದಿಯವರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವಂತೆ ಅಗ್ರಹಿಸಿ ನಡೆಯುತ್ತಿರುವ ದೇಶವ್ಯಾಪಿ ರೈತ ಹೋರಾಟದ ಭಾಗವಾಗಿ ಶನಿವಾರ ಹೋರಾಟದ ನೆಲ ಶಿವಮೊಗ್ಗದಲ್ಲಿ ಬೃಹತ್ ರೈತ ಮಹಾ ಪಂಚಾಯತ್ ನಡೆಯಿತು.
ದಕ್ಷಿಣ ಭಾರತದ ಮೊಟ್ಟ ಮೊದಲನೆ ಬಾರಿಗೆ ಶಿವಮೊಗ್ಗದಲ್ಲಿ ನಡೆದ ಈ ಮಹಾ ಪಂಚಾಯತ್ ನಲ್ಲಿ ರೈತ ಹೋರಾಟದ ನೇತಾರರಾದ ರಾಕೇಶ್ ಟಿಕಾಯತ್, ಯಧುವೀರ್ ಸಿಂಗ್, ಡಾ ದರ್ಶನ್ ಪಾಲ್, ರಾಜ್ಯ ರೈತ ಸಂಘಟನೆಗಳ ಪ್ರಮುಖರಾದ ಕೆ. ಟಿ. ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಎಚ್ ಆರ್ ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಶೋಭಾ ಸುಂದರೇಶ್, ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್, ಎಂ ಶ್ರೀಕಾಂತ್ ಮೊದಲಾದವರು ಪಾಲ್ಗೊಂಡಿದ್ದರು.
ಈ ಸಂರ್ಭದಲ್ಲಿ ರೈತ ಮಹಾಪಂಚಾಯತ್‌ ಉದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್‌ ಮೋರ್ಚಾದ ಮುಖ್ಯಸ್ಥ ರಾಕೇಶ ಟಿಕಾಯತ್‌, ಸರ್ಕಾರ ರೈತರ ಹಾಲು, ಬೀಜ, ವಿದ್ಯುತ್, ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ದೇಶದ ಬಡವರ ಹಸಿವಿನ ಮೇಲೆ ಸರ್ಕಾರ ವ್ಯಾಪಾರ ಮಾಡಲು ಹೊರಟಿದೆ. ದೊಡ್ಡ ಬಂಡವಾಳಶಾಹಿಗಳು ರೈತರ ರೊಟ್ಟಿ, ಅನ್ನವನ್ನು ತಮ್ಮ ತಿಜೋರಿಗಳಲ್ಲಿ ಬಂಧಿಸಿಡಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದಾದರೆ ರೈತ ಹೋರಾಟ ತೀವ್ರಗೊಳಿಸಬೇಕು ಎಂದು ಹೇಳಿದರು.
ಯುವಕರು ಮಣ್ಣನ್ನು ಮೈಗಂಟಿಸಿಕೊಳ್ಳಬೇಕು. ಅವರು ರೈತ ಹೋರಾಟಕ್ಕೆ ಬರಬೇಕು. ದೊಡ್ಡ ಕಂಪನಿಗಳು ಬಂದು ನಮ್ಮ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಸಾಲ ಕೊಡುತ್ತಾರೆ. ರೈತರ ಬೆಳೆಗೆ ಬೆಲೆ ಸಿಗದೆ ಸಾಲ ವಾಪಸ್ ಮಾಡದಿದ್ದರೆ ಅವರ ಭೂಮಿ ಕಿತ್ತುಕೊಳ್ಳುತ್ತಾರೆ. ರೈತ ತನ್ನದೇ ಜಮೀನಿನಲ್ಲಿ ಜೀತ ಮಾಡುವ ಕಾಲಬರಲಿದೆ. ಅದನ್ನು ತಡೆಯಲು ನಮ್ಮ ಹೋರಾಟ ನಡೆಯುತ್ತಿದೆ ರೈತರಿಗೆ ಹೇಳಿದರು.
ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ಎಲ್ಲ ಗಡಿಗಳಲ್ಲಿ ಹೋರಾಟ ನಡೆಯುತ್ತಿದೆ. ಇದು ದೀರ್ಘ ಹೋರಾಟವಾಗಿದೆ. ಇದು ಬೇಗ ಮುಗಿಯುವುದಿಲ್ಲ. ದೆಹಲಿ ಮಾದರಿಯಲ್ಲಿ ಬೆಂಗಳೂರನ್ನು ನಾಲ್ಕು ದಿಕ್ಕುಗಳಲ್ಲಿ ಸುತ್ತುವರಿಯಿರಿ. ಕರಾಳ ಕಾನೂನುಗಳನ್ನು ಸರ್ಕಾರ ವಾಪಸ್ ತೆಗೆದುಕೊಳ್ಳುವವರಿಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

10 ವರ್ಷದ ಹಿಂದಿನ ಟ್ರ್ಯಾಕ್ಟರ್ ಬಳಸಬಾರದು ಎಂದು ಸರ್ಕಾರ ಹೊಸ ಕಾನೂನು ತಂದಿದೆ. ದೆಹಲಿಯಲ್ಲಿ ಇಂದಿಗೂ 25-30 ಸಾವಿರ ಟ್ರ್ಯಾಕ್ಟರ್‌ಗಳು ಹೋರಾಟದಲ್ಲಿವೆ. ರೈತರು ಪದೇ ಪದೇ ಹೊಸ ವಾಹನ ಖರೀದಿಸಲು ಸಾಧ್ಯವೇ? ಅಲ್ಲದೆ ಸರ್ಕಾರ 26 ಸರ್ಕಾರಿ ಕಂಪನಿಗಳನ್ನು ಮಾರಲು ಸರ್ಕಾರ ಹೊರಟಿದೆ. ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳಬೇಕು ಎಂದರು.
ಯುವಕರು ರೊಚ್ಚಿಗೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬೇರೆ ಸರ್ಕಾರವಾಗಿದ್ದರೆ ಎಚ್ಚೆತ್ತುಕೊಳ್ಳುತ್ತಿತ್ತು. ಆದರೆ ಈ ಸರ್ಕಾರವನ್ನು ಕಾರ್ಪೊರೇಟ್ ಕುಳಗಳೇ ನಡೆಸುತ್ತಿದ್ದಾರೆ. ಹೀಗಾಗಿ ಅದನ್ನು ಕಿತ್ತೊಗೆಯುವ ಕೆಲಸ ನಮ್ಮದು ಎಂದರು.
ಶಿವಮೊಗ್ಗ ರೈತ ಮಹಾ ಪಂಚಾಯತ್, ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಲೇಬೇಕು ಎಂದು ಸೇರಿದಂತೆ ಹತ್ತು ನಿರ್ಣಯಗಳನ್ನು ಕೈಗೊಂಡಿದೆ.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯಿದೆಗಳನ್ನು ಬೇಷರತ್ತಾಗಿ ಕೂಡಲೆ ಹಿಂಪಡೆಯಬೇಕು. ರಾಜ್ಯ ಬಿ ಜೆ ಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ವಿದ್ಯುತ್ ಕಾಯಿದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯಿದೆಗಳಿಗೆ ತಂದ ತಿದ್ದುಪಡಿಗಳನ್ನು ಕೂಡಲೆ ರದ್ದುಪಡಿಸಬೇಕು. ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿ, ಈಗ ರೈತ ವಿರೋಧಿಯಾದ ಕಾಯಿದೆಗಳನ್ನು ಜಾರಿಗೆ ತರುತ್ತಿರುವ ಮತ್ತು ಕರ್ನಾಟಕದ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಕನಿಷ್ಠ ಸೌಜನ್ಯಕ್ಕೂ ರೈತ ಸಂಘಟನೆಗಳನ್ನು ಕರೆದು ಮಾತುಕತೆ ನಡೆಸದ ಮುಖ್ಯಮಂತ್ರಿಗಳ ವರ್ತನೆಗೆ ಖಂಡನೆ.
ಸ್ವಾಮಿನಾಥನ್ ಮತ್ತು ಪ್ರಕಾಶ್ ಕಮ್ಮರಡಿ ವರದಿ ಆಧರಿಸಿ, ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಅದರ ಅನುಷ್ಠಾನವನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಸರ್ಕಾರಗಳನ್ನು ಆಗ್ರಹಿಸುತ್ತದೆ ಎಂಬಿತ್ಯಾದಿ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement