ಕರಾವಳಿ ಜಿಲ್ಲೆಗಳಿಗೆ ಲವಣಾಂಶ ರಹಿತ ಮರಳು ಪೂರೈಕೆ: ನಿರಾಣಿ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡುತ್ತಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಕಾಂಗ್ರೆಸ್‍ನ ಕೆ.ಪ್ರತಾಪ ಚಂದ್ರಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಉಪ್ಪಿನಂಶ ಇರುವ ಮರಳು ಬಳಕೆಯಿಂದ ಗುಣಮಟ್ಟ ಹಾಳಾಗುತ್ತದೆ ಎಂದು ಸಮಿತಿಯು ನೀಡಿದ ವರದಿ ಆಧಾರದ ಹಿನ್ನೆಲೆಯಲ್ಲಿ ನಾವು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಆಧರಿಸಿ ಲವಣ ಮಿಶ್ರಿತ ಮರಳು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದೇವೆ. ಎಲ್ಲಿಯಾದರೂ ಪೂರೈಕೆ ಮಾಡುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‍ಜಡ್ ಪ್ರದೇಶದಲ್ಲಿ 2018-19 ಹಾಗೂ 2019-20ರಲ್ಲಿ 22 ದಿಬ್ಬಗಳಿಂದ 11.53 ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆಗೆಯಲಾಗಿತ್ತು.
2020-21ರಲ್ಲಿ 13 ದಿಬ್ಬಗಳಿಂದ 10.58, 2018-19ರಲ್ಲಿ 5 ದಿಬ್ಬಗಳಿಂದ 0.17, ಉಡುಪಿ ಜಿಲ್ಲೆಯಲ್ಲಿ 2019-20ರಲ್ಲಿ 8 ದಿಬ್ಬಗಳಿಂದ 7.96, 2020-21ರಲ್ಲಿ 10 ದಿಬ್ಬಗಳಿಂದ 7.13 ಲಕ್ಷ ಮೆಟ್ರಿಕ್ ಟನ್ ಮರಳಿನ ದಿಬ್ಬಗಳಿವೆ ಎಂದು ಅಂಕಿ-ಸಂಖ್ಯೆಗಳ ವಿವರ ನೀಡಿದರು.
ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್ ಜಡ್ ) ಪ್ರದೇಶಗಳಲ್ಲಿ 2018 ರಿಂದ 2021ರ ವರೆಗೆ 49 ಬ್ಲಾಕ್‍ಗಳಲ್ಲಿ 12.71 ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್‍ಗಳನ್ನು ಗುರುತಿಸಿದ್ದೇವೆ. ಇದೇ ರೀತಿ ಉಡುಪಿ ಜಿಲ್ಲೆಯಲ್ಲಿ 2018 ರಿಂದ 2021ರ ವರೆಗೆ 28 ಬ್ಲಾಕ್‍ಗಳಲ್ಲಿ 3.47  ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ ಎಂದರು. ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನಿಯಮಿತವಾಗಿ ನಿಗದಿತ ದರದಲ್ಲಿ ಮರಳು ಪೂರೈಕೆ ಮಾಡುವ ಸಂಬಂಧ 5.5.2020ರಂದು ನೂತನ ಮರಳು ನೀತಿ ಜಾರಿ ಮಾಡಲಾಗಿದೆ.
1, 2 ಮತ್ತು 3ನೆ ಶ್ರೇಣಿಯ ಹಳ್ಳ, ತೊರೆ, ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಳೀಯ ಜನರು  ಸಾರ್ವಜನಿಕ ಮತ್ತು ಸರ್ಕಾರಿ ಕಟ್ಟಡಗಳಿಗೆ ಮರಳನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದೇವೆ.
ರಾಜ್ಯದಲ್ಲಿ 193 ಮರಳು ಪ್ರದೇಶಗಳನ್ನು ಗುರುತಿಸಿದ್ದು, ಈ ಪೈಕಿ 87 ಮರಳು ಬ್ಲಾಕ್‍ಗಳನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಪ್ರವಾಹದಿಂದ ಪಟ್ಟಾ ಜಮೀನಿನಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು 301 ಪಟ್ಟಾದಾರರಿಗೆ ಅನುಮತಿ ನೀಡಿ 84.796 ಮೆಟ್ರಿಕ್ ಟನ್ ಮರಳನ್ನು ವಿಲೇವಾರಿ ಮಾಡಿದ್ದೇವೆ ಎಂದು ಸಚಿವ ನಿರಾಣಿ ತಿಳಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement