ತನ್ನ ಬಳಿಯಿದ್ದ 6 ಕೋಟಿ ರೂ.ಬಹುಮಾನ ಗೆದ್ದ ಲಾಟರಿ ಟಿಕೆಟ್‌ ಫಲಾನುಭವಿಗೆ ಹಸ್ತಾಂತರಿಸಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ

ತನ್ನ ಬಳಿ ಇದ್ದ ೬ ಕೋಟಿ ರೂಪಾಯಿ ಗೆದ್ದ ಲಾಟರಿ ಟಿಕೆಟ್‌ ಅನ್ನು ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಮಿಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ ಟಿಕೆಟ್​ ಅನ್ನು ಚಂದ್ರನ್​ ಎಂಬವರಿಗೆ ಮಾರಾಟ ಮಾಡಿದ್ದರು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸ್ಮಿಜಾ ಕೊವಿಡ್‌ ಆರ್ಥಿಕ ಸಂಕಷ್ಟದಲ್ಲಿಯೂ ತಮ್ಮ ಬಳಿ ಇದ್ದ ಚಂದ್ರನ್​ ಎಂಬವರು ಖರೀದಿಸಿದ್ದ ಆರು ಕೋಟಿ ರೂ. ಗೆದ್ದ ಲಾಟರಿ ಟಿಕೆಟ್‌ ಅನ್ನು ಅವರಿಗೆ ಹಸ್ತಾಂತರಿಸಿದ್ದು, ಅವರ ಪ್ರಾಮಾಣಿಕತೆ ಈಗ ನೆಟ್ಟಿಗರ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
37 ವರ್ಷದ ಸ್ಮಿಜಾ ಬಳಿ ಮಾರಾಟವಾಗದ ೧೨ ಟಿಕೆಟ್​ಗಳಿದ್ದವು. ಹೀಗಾಗಿ ಸ್ಮಿಜಾ ಈ ಟಿಕೆಟ್​ಗಳನ್ನ ವಾಟ್ಸಾಪ್​ ಗ್ರೂಪ್​ನಲ್ಲಿ ಶೇರ್​ ಮಾಡಿದ್ದರು. ಆದರೆ ಯಾರೂ ಕೂಡ ಟಿಕೆಟ್​ ಕೊಳ್ಳಲು ತಯಾರಿರಲಿಲ್ಲ.
ಆಗ ಸ್ಮಿಜಾ, ಚಂದ್ರನ್​ ಎಂಬವರನ್ನು ಸಂಪರ್ಕಿಸಿ ತಮ್ಮ ಲಾಟರಿ ಟಿಕೆಟ್‌ ಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಅವರು ಟಿಕೆಟ್​​ನ ಫೋಟೋಗಳನ್ನು ವಾಟ್ಸಾಪ್‌ ಮಾಡುವಂತೆ ಹೇಳಿದ್ದು, ಅದೇ ಪ್ರಕಾರ ಇವರು ತಮ್ಮ ಬಳಿ ಇದ್ದ ೧೨ ಟಿಕೆಟ್‌ಗಳನ್ನು ವಾಟ್ಸಾಪ್‌ ಮಾಡಿದ್ದಾರೆ. ನಂತರ ಚಂದ್ರನ್‌ ಇದರಲ್ಲಿ ತಮ್ಮ ಆಯ್ಕೆ ಸಂಖ್ಯೆಯ ಲಾಟರಿ ಟಿಕೆಟ್‌ ಯಾವುದು ಎಂದು ತಿಳಿಸಿದ್ದಾರೆ.
ಫಲಿತಾಂಶ ಘೋಷಣೆಯಾಗಿದ್ದು, ಚಂದ್ರನ್‌ ಆಯ್ಕೆ ಮಾಡಿದ ಲಾಟರಿ ಟಿಕೆಟ್‌ ನಂಬರಿಗೆ ೬ ಕೋಟಿ ರೂ.ಸಿಕ್ಕಿದೆ. ಸ್ಮಿಜಾ ಆ ಟಿಕೆಟ್​ನ್ನು ಚಂದ್ರನ್​ಗೆ ಪ್ರಾಮಾಣಿಕವಾಗಿ ಹಸ್ತಾಂತರಿಸಿದ್ದಾರೆ.
ನಾನು ಚಂದ್ರನ್​ ಅವರಿಗೆ ಟಿಕೆಟ್​ ಹಸ್ತಾಂತರ ಮಾಡಿದ ಬಳಿಕ ಸಾಕಷ್ಟು ಮಂದಿ ನನ್ನ ಪ್ರಾಮಾಣಿಕತೆಯನ್ನ ಹಾಡಿ ಹೊಗಳಿದ್ದಾರೆ. ಉದ್ಯಮದಲ್ಲಿ ಇವೆಲ್ಲ ಸಹಜ. ಗ್ರಾಹಕರು ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಟಿಕೆಟ್​ ಖರೀದಿ ಮಾಡುತ್ತಾರೆ. ಅಂದಮೇಲೆ ಅವರ ಜೊತೆ ಪ್ರಾಮಾಣಿಕವಾಗಿ ವರ್ತಿಸುವುದು ನಮ್ಮ ಕರ್ತವ್ಯ ಎಂದು ಸ್ಮಿಜಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement