ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಸಿಡಿ ಪ್ರಕರಣದ ಯುವತಿಗೆ ಕೋರ್ಟ್‌ ಅನುಮತಿ, ಯಾವಾಗ ಹಾಜರಾಗ್ತಾಳೆ..?

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿಡಿಯಲ್ಲಿನ ಯುವತಿ ಕೋರ್ಟ್ ಮುಂದೆ ಹಾಜರಾಗಿ, ನ್ಯಾಯಾಧೀಶರ ಎದುರು ತನ್ನ ಹೇಳಿಕೆ ದಾಖಲಿಸಲು ಸೋಮವಾರ ಕೋರ್ಟ್ ಅನುಮತಿ ನೀಡಿದೆ.
ಇದರಿಂದಾಗಿ ಸಿಡಿ ಪ್ರಕರಣಕ್ಕೆ ಈಗ ಬಹುದೊಡ್ಡ ತಿರುವು ಸಿಕ್ಕಂತಾಗಿದೆ. ಸೋಮವಾರ ಸಿಡಿ ಸಂತ್ರಸ್ತ ಯುವತಿ ವಕೀಲ ಜಗದೀಶ್ ಅವರು ಕೋರ್ಟ್‌ ಮುಂದೆ ಸಂತ್ರಸ್ತ ಯುವತಿ ಹಾಜರಾಗಿ ಹೇಳಿಕೆ ನೀಡಲು ಮನವಿ ಮಾಡಿ, ನಗರದ ಎಸಿಎಂಎಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನಡೆಸಿದಂ ಕೋರ್ಟ್, ಸಿಡಿಯಲ್ಲಿನ ಸಂತ್ರಸ್ತ ಯುವತಿ ಹಾಜರಾಗಿ ಹೇಳಿಕೆ ನೀಡಲು ಅನುಮತಿಸಿ ನೀಡಿ ಆದೇಶಿಸಿದೆ.
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದಂ ಸಂತ್ರಸ್ತ ಯುವತಿ ವಕೀಲ ಜಗದೀಶ್, ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಲು ಕೋರ್ಟ್ ಆದೇಶಿಸಿದೆ ಎಂದು ತಿಳಿಸಿದರು.
ಯುವತಿ ವಿಚಾರಣೆಗೆ ಹಾಜರಾಗಲು ಭದ್ರತೆಯ ಕುರಿತು ಅಪಸ್ವರವೆತ್ತಿದ್ದ ಕಾರಣ ಆಕೆಯ ಭದ್ರತೆಗೆ ಎಸ್‌ಐಟಿಯಿಂದ ಓರ್ವ ಮಹಿಳಾ ಸಬ್‌ಇನ್​ಸ್ಪೆಕ್ಟರ್ ಸೇರಿದಂತೆ 8 ಜನರ ತಂಡ ರಚಿಸಲಾಗಿದೆ. ಯುವತಿ ಹೇಳಿದಲ್ಲಿ ತೆರಳಿ ಭದ್ರತೆ ನೀಡಲು, ಆಕೆಯ ಹೇಳಿಕೆ ದಾಖಲಿಸಲು ವಿಶೇಷ ತಂಡ ಸಿದ್ಧವಾಗಿದೆ. ಒಂದು ವೇಳೆ ಆಕೆಯೇ ನೇರವಾಗಿ ಹಾಜರಾದರೂ ಈ ತಂಡ ಭದ್ರತೆ ನೀಡಲಿದೆ.
ಈ ಮಧ್ಯೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿದ್ದರಿಂದ ವಕೀಲರ ಜೊತೆ ರಮೇಶ್ ಜಾರಕಿಹೊಳಿ ಅಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ಎದುರಿಸಿದರು.
ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ರಮೇಶ್ ಜಾರಕಿಹೊಳಿಯನ್ನು ಸುಮಾರು ನಾಲ್ಕೂವರೆ ತಾಸು ವಿಚಾರಣೆ ನಡೆಸಿದರು. ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ವಕೀಲರ ಜೊತೆ ಚರ್ಚಿಸುತ್ತೇನೆ. 4 ದಿನದ ಕಾಲಾವಕಾಶ ನೀಡಿ ಎಂದು ಪೊಲೀಸರಿಗೆ ಮನವಿ ಮಾಡಿದರು. ಏಪ್ರಿಲ್ 2ರಂದು ಮತ್ತೆ ವಿಚಾರಣೆಗೆ ಬರಲು ಪೊಲೀಸರು ಸೂಚನೆ ನೀಡಿದ್ದಾರೆ.
ಸಿಡಿ ಪ್ರಕರಣದ ಯುವತಿ ವಕೀಲ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. . ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ.ದೂರು ದಾಖಲಾದ ಬಳಿಕ ಸೋಮವಾರ ಮೊದಲ ಬಾರಿಗೆ ವಿಚಾರಣೆಯನ್ನು ಪೊಲೀಸರು ನಡೆಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement