ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯು ನೆರೆಯ ದೇಶದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಸರ್ಕಾರದ ಸಮಿತಿಯ ನಿರ್ಧಾರ ತಿರಸ್ಕರಿಸಿದ್ದು, ಪಾಕಿಸ್ತಾನ ಗುರುವಾರ ಭಾರತದೊಂದಿಗೆ ವ್ಯಾಪಾರ ಪುನರಾರಂಭಿಸುವ ನಿಟ್ಟಿನಲ್ಲಿ ಬುಧವಾರದ ನಿರ್ಧಾರಕ್ಕೆ ಯು-ಟರ್ನ್ ಹೊಡೆದಿದೆ.ಪಾಕಿಸ್ತಾನ ಸರ್ಕಾರವು ಅಲ್ಲಿನ ಕಟ್ಟರ್ ಪಂಥೀಯರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎರಡು ಸರಕುಗಳ ಆಮದಿಗೆ ಬೆಲೆಗಳನ್ನು ನಿಯಂತ್ರಿಸಲು ಮತ್ತು ಕೊರತೆ ನೀಗಿಸಲು ಕ್ಯಾಬಿನೆಟ್‌ನ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಬುಧವಾರ ತೆಗೆದುಕೊಂಡ ನಿರ್ಧಾರವನ್ನುಗುರುವಾರದ ಕ್ಯಾಬಿನೆಟ್ ಸಭೆ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ಮೂಲಗಳ ಉಲ್ಲೇಖಿಸಿ ವರದಿಯಾಗಿದೆ.
ಇಸಿಸಿಯ ನಿರ್ಧಾರವು ಜಾರಿಗೆ ಬಂದರೆ, ಸುಮಾರು ಎರಡು ವರ್ಷಗಳ ನಂತರ ಉಭಯ ದೇಶಗಳ ನಡುವಿನ ವ್ಯಾಪಾರ ಪುನರಾರಂಭಿಸಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ನವದೆಹಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಪಾಕಿಸ್ತಾನವು 2019 ರ ಆಗಸ್ಟ್‌ನಲ್ಲಿ ಭಾರತದೊಂದಿಗೆ ವ್ಯಾಪಾರವನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸಿತ್ತು.
ಭಾರತ ವಿರೋಧಿ ನಿಲುವಿಗೆ ಹೆಸರುವಾಸಿಯಾದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ, ಇಸಿಸಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಕ್ಯಾಬಿನೆಟ್ ಅನುಮೋದಿಸಬೇಕಾಗಿದೆ ಎಂದು ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ ಪಾಕಿಸ್ತಾನದ ಫ್ಲಿಪ್-ಫ್ಲಾಪ್ ಸುದ್ದಿ ಬಂದಿದೆ.
ಬುಧವಾರ, ಪಾಕಿಸ್ತಾನದ ಹೊಸ ಹಣಕಾಸು ಸಚಿವ ಹಮ್ಮದ್ ಅಜರ್ ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸಿದ್ದರು ಮತ್ತು ಮಾಧ್ಯಮಗಳ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಸಮರ್ಥಿಸಿಕೊಂಡಿದ್ದರು.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಉಭಯ ಕಡೆಯ ಸೈನ್ಯಗಳು ತಮ್ಮನ್ನು ಕದನ ವಿರಾಮಕ್ಕೆ ಒಡ್ಡಿಕೊಂಡ ನಂತರ ನವ ದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಆಮದುಗಳಿಗೆ ಹಸಿರು ನಿಶಾನೆ ದೊರಕಿತ್ತು.
ಖಾಸಗಿ ವಲಯವು 500,000 ಟನ್ ಗಳಷ್ಟು ಸಕ್ಕರೆ ಆಮದು ಮಾಡಿಕೊಳ್ಳಲು ಇಸಿಸಿ ಅನುಮೋದನೆ ನೀಡಿತ್ತು. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಗತ್ಯತೆ ಪೂರೈಸಲು ಜೂನ್ ಅಂತ್ಯದವರೆಗೆ ಹತ್ತಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿತ್ತು.
ಕಾಶ್ಮೀರ ಸಮಸ್ಯೆ ಬಗೆಹರಿಸದೆ ಭಾರತದೊಂದಿಗಿನ ವ್ಯಾಪಾರ ಸಂಬಂಧ ಪುನರಾರಂಭಿಸುವ ಕುರಿತು ವರದಿಗಾರರ ಪ್ರಶ್ನೆಯೊಂದನ್ನು ಅಜರ್ ಕಡೆಗಣಿಸಿದ್ದರು: “ಕೆಲವು ದೇಶಗಳೊಂದಿಗೆ ವ್ಯಾಪಾರ ಮಾಡುವ ಮೂಲಕ ಸಾಮಾನ್ಯ ಮನುಷ್ಯನ ಮೇಲೆ ಹೊರೆ ಕಡಿಮೆಯಾದರೆ, ಅದರಲ್ಲಿ ಯಾವುದೇ ನಷ್ಟವಿಲ್ಲ” ಎಂದು ಹೇಳಿದರು.
ಫೆಬ್ರವರಿ 25 ರಿಂದ ಭಾರತೀಯ ಮತ್ತು ಪಾಕಿಸ್ತಾನದ ಸೇನೆಗಳು ಎಲ್‌ಒಸಿಯಲ್ಲಿ ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕ್ರಮವು ಎರಡೂ ಕಡೆಯ ನಡುವಿನ ತೆರೆಮರೆಯ ಸಂಪರ್ಕಗಳ ಫಲಿತಾಂಶವಾಗಿದೆ ಮತ್ತು ಇದು ಸಂಬಂಧಗಳಲ್ಲಿ ಸುಧಾರಣೆಗೆ ಕಾರಣವಾಯಿತು.
ಇತ್ತೀಚಿನ ವಾರಗಳಲ್ಲಿ, ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಬಜ್ವಾ “ಭೂತಕಾಲವನ್ನು ಹೂತು ಮುಂದೆ ಸಾಗುವ” ಅಗತ್ಯದ ಬಗ್ಗೆ ಮಾತನಾಡಿದ್ದರು, ಆದರೆ ಪ್ರಧಾನಿ ಖಾನ್ ಕಾಶ್ಮೀರವನ್ನು ಪರಿಹರಿಸುವ ಮೂಲಕ ಸಂಬಂಧಗಳನ್ನು ಸುಧಾರಿಸಲು ಮೊದಲ ಹೆಜ್ಜೆ ಇಡಬೇಕಾಗಿದೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ