ನಾಳೆಯಿಂದ ಸಾರಿಗೆ ನೌಕರರ ಮುಷ್ಕರ; ಬಸ್‌ ಬಂದಾದರೆ ಸರ್ಕಾರ ಹೇಗೆ ನಿಭಾಯಿಸುತ್ತದೆ..?

posted in: ರಾಜ್ಯ | 0

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ನೌಕರರು ಏ.7ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ಮುಂದಾಗಿದ್ದು, ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಸ್‌ಗಳು ರಾಜ್ಯಾದ್ಯಂತ ಸ್ಥಗಿತಗೊಂಡರೆ ಸರ್ಕಾರ ಇದನ್ನು ಹೇಗೆ ನಿಭಾಯಿಸಲಿದೆ ಎಂಬುದು ಸಹ ಮುಖ್ಯವಾಗುತ್ತದೆ. ಸರ್ಕಾರ ಖಾಸಗಿ ಬಸ್‌ ಆಪರೇಟರಿಗಳಿಗೆ ಮನವಿ ಮಾಡಿದೆ. ಇದೇವೇಳೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟದ ಪ್ರಮುಖರು ಸಹ ಅವರಿಗೆ ಬಸ್‌ ಓಡಿಸದಂತೆ ಮನವಿ ಮಾಡಿದ್ದಾರೆ.
ಈ ಮುಷ್ಕರ ನಡೆದು ಬಸ್‌ ಸಂಚಾರ ಸ್ಥಗಿತಗೊಂಡರೆ ರಾಜ್ಯಾದ್ಯಂತ ಸುಮಾರು ಒಂದು ಕೋಟಿ ಜನರಿಗೆ ತೊಂದರೆಯಾಗಲಿದೆ. ಸಾರಿಗೆ ನೌಕರರು ಮುಂದಿಟ್ಟಿದ್ದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಇದುವರೆಗೂ ಭರವಸೆಯನ್ನು ಈಡೇರಿಸದ ಕಾರಣ ಸಾರಿಗೆ ನೌಕರರು ಮತ್ತೆ ರಸ್ತೆಗಿಳಿಯಲಿದ್ದಾರೆ. ಸರ್ಕಾರ 6ನೇ ವೇತನ ಆಯೋಗ ಜಾರಿ ಮಾಡಲೇಬೇಕು. ಇಲ್ಲವಾದರೆ ಬುಧವಾರದಿಂದ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ, ಎಲ್ಲಾ ನೌಕರರು ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಮುಷ್ಕರ ನಡೆಸುತ್ತೇವೆ. ಮುಷ್ಕರದಿಂದಾಗುವ ಯಾವುದೇ ಪರಿಣಾಮಕ್ಕೆ ಸರ್ಕಾರವೇ ಹೊಣೆ ಎಂದು ಒಕ್ಕೂಟಗಳ ಮುಖಂಡರು ಹೇಳಿದ್ದಾರೆ.
ಈ ಮಧ್ಯೆ ಸಾರಿಗೆ ನೌಕರರಿಗೂ ಸರ್ಕಾರ ಎಚ್ಚರಿಕೆ ನೀಡಿದೆ. ಈ ಸಂರ್ಭದಲ್ಲಿ ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ವೇತನ ಕಡಿತದ ಎಚ್ಚರಿಕೆ ನೀಡಿದೆ.
ಕಳೆದ ಡಿಸೆಂಬರ್‌ ನಲ್ಲಿ 4 ದಿನಗಳ ಕಾಲ ಸಾರಿಗೆ ಮುಷ್ಕರ ನಡೆಸಲಾಗಿತ್ತು. ಈ ವೇಳೆ ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ಒಕ್ಕೂಟದೊಂದಿಗೆ ನಡೆದ ಸಂಧಾನ ಸಭೆಯಲ್ಲಿ ರಾಜ್ಯ ಸರ್ಕಾರ 10 ಬೇಡಿಕೆಗಳ ಪೈಕಿ ಒಂಬತ್ತು ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡಿತ್ತು. ಮತ್ತು ಇದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇದರಲ್ಲಿ 8 ಬೇಡಿಕೆ ಈಡೇರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸಾರಿಗೆ ನೌಕರರ ಒಕ್ಕೂಟವು, ಇದರಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದರಿಂದ ಸಾರಿಗೆ ನೌಕರರಿಗೆ ಅನನುಕೂಲವೇ ಹೆಚ್ಚಾಗಿದೆ ಎಂದು ದೂರಿದೆ.
ಒಕ್ಕೂಟದ ಪ್ರಕಾರ ಸರ್ಕಾರಕ್ಕೆ ನೀಡಿದ್ದ ಗಡುವು ಮಾ.15ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಕಾರ್ಮಿಕ ಕಾಯ್ದೆಯ ಅನ್ವಯ ಸಾರಿಗೆ ನೌಕರರ ಒಕ್ಕೂಟವು ಮಾ.16 ರಂದು ಮುಷ್ಕರ ನೋಟಿಸ್ ನೀಡಿತ್ತು. ಈ ನೋಟಿಸ್ ಅನ್ವಯ 22 ದಿನಗಳ ವರೆಗೆ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಕಾಲಾವಕಾಶ ಇರುತ್ತದೆ. ಈ ಕಾಲಾವಕಾಶ ಮಂಗಳವಾರ ಮುಗಿದಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಬೇಡಿಕೆ ಈಡೇರಿಸುವಂತೆ ನಾವು ಸರ್ಕಾರಕ್ಕೆ 3 ತಿಂಗಳ ಗಡುವು ನೀಡಿದ್ದೆವು. ಸರ್ಕಾರ ಡಿ.14ರಂದು ಲಿಖಿತ ರೂಪದಲ್ಲಿ ಭರವಸೆ ನೀಡಿತ್ತು. ಆದರೆ ಅದು ಹುಸಿಯಾಗಿದೆ. ಹೀಗಾಘಗಿ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಈ ನಡುವೆ ಕಾರ್ಮಿಕ ಇಲಾಖೆ ಆಯುಕ್ತರು ಏ.9ರ ವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ. ಆದರೂ ಸಾರಿಗೆ ನೌಕರರ ಒಕ್ಕೂಟವು ಏ.7ರಿಂದ ಮುಷ್ಕರ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಮುಷ್ಕರದಿಂದ ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ಸುಮಾರು ಆರು ಸಾವಿರ ಬಸ್ಸುಗಳ ಸಂಚಾರ ಸ್ಥಗಿತಗೊಳ್ಳಲಿದೆ. ಇದರಿಂದ ಕನಿಷ್ಠ 25 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ತೊಂದರೆಗೀಡಾಗಲಿದ್ದಾರೆ. ರಾಜ್ಯಾದ್ಯಂತ ಸುಮಾರು ಒಂದು ಕೋಟಿ ಜನರಿಗೆ ಸಂಚಾರದ ತೊಂದರೆಯಾಗಲಿದೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ