ಮೇ 4ರ ನಂತರ ವೇತನ ಪರಿಷ್ಕರಣೆ, ಮುಷ್ಕರ ಕೈಬಿಡಲು ಸವದಿ ಮನವಿ

ಬೆಂಗಳೂರು: ಈಗಾಗಲೇ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ 6ನೇ ವೇತನ ಆಯೋಗದಂತೆ ಸಂಬಳ ಹೆಚ್ಚಳ ಸಾಧ್ಯವಾಗಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಸಾರಿಗೆ ಸಂಸ್ಥೆಯ ಸ್ಥಿತಿಗತಿ ಗಮನದಲ್ಲಿಟ್ಟು ಏ. 7 ರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರ ಕೈಬಿಡಬೇಕು ಎಂದು ಮನವಿ ಮಾಡಿದರು.
ಚುನಾವಣಾ ಆಯೋಗಕ್ಕೆ ವೇತನ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಮನವಿ ಪತ್ರ ಬರೆದಿದ್ದೇವೆ. ನಾವು ಈಗಾಗಲೇ ವೇತನ ಹೆಚ್ಚಳದ ಬಗ್ಗೆ ಸಕಾರಾತ್ಮಕವಾಗಿ ಇದ್ದೇವೆ. ಪ್ರತಿವರ್ಷದಂತೆ ಶೇ.2 ರಷ್ಟು ಹೆಚ್ಚಳ ಮಾಡುತ್ತೇವೆ. ಚುನಾವಣೆ ಘೋಷಣೆಯಾಗಿರುವುದರಿದ ಇದಕ್ಕೆ ಈಗ ಚುನಾವಣಾ ಆಯೋಗ ಒಪ್ಪಬೇಕು. ಅವರು ಒಪ್ಪಿದರೆ ಮಾಡಲಾಗುತ್ತದೆ. ಆಯೋಗ ಒಪ್ಪಿಗೆ ನೀಡಿದರಷ್ಟೇ ಇದನ್ನು ನಾವು ಪ್ರಕಟ ಮಾಡಬಹುದು. ಮೇ 4 ರಂದು ಚುನಾವಣಾ ನೀತಿ ಸಂಹಿತೆ ಮುಗಿಯಲಿದ್ದು, ಆ ಬಳಿಕ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಾರಿಗೆ ನೌಕರರು ಆರನೇ ವೇತನ ಆಯೋಗದ ವರದಿ ಜಾರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಹೆಚ್ಚುವರಿ ಸವಲತ್ತು ಕೊಡುತ್ತಿದ್ದೇವೆ. ಓವರ್‌ ಟೈಂ ಜತೆಗೆ, ಕಂಡಕ್ಟರ್‌ಗಳಿಗೆ ಶೇ 2 ರಷ್ಟು ಪ್ರೋತ್ಸಾಹ ಧನ ನೀಡುತ್ತಿದ್ದೇವೆ. 6 ನೇ ವೇತನ ಆಯೋಗಕ್ಕೆ ಸಮಾನ ವೇತನ ನೀಡಿದರೆ, ಹೆಚ್ಚುವರಿ ಸವಲತ್ತುಗಳನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದ ಒಂದು ಕೈಯಿಂದ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಂಡಂತಾಗುತ್ತದೆ’ ಎಂದು ತಿಳಿಸಿದರು.
ಸಾಮಾನ್ಯವಾಗಿ ನೌಕರರಿಗೆ ತರಬೇತಿ ಅವಧಿ ಎರಡು ವರ್ಷ ಇರುತ್ತದೆ. ಈಗ ಅದನ್ನೂ ಒಂದು ವರ್ಷಕ್ಕೆ ಇಳಿಸಿದ್ದೇವೆ. ಕೊರೊನಾಗೂ ಮುಂಚೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರತಿನಿತ್ಯ ಒಂದು ಕೋಟಿ ಜನ ಪ್ರಯಾಣಿಸುತ್ತಿದ್ದರು. ಅದರೆ ಈಗ ಈಗ 65 ಲಕ್ಷ ಜನರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಹಾಗಾಗಿ ಆದಾಯದಲ್ಲಿ ಇಂಧನ, ವೇತನಕ್ಕೆ 1,962 ಕೋಟಿ ರೂಪಾಯಿ ಕೊರತೆ ಆಗಿತ್ತು. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅಷ್ಟೂ ಹಣವನ್ನ ಸರ್ಕಾರದ ಬೊಕ್ಕಸದಿಂದ ಕೊಟ್ಟಿದ್ದಾರೆ. ಇದುವರೆಗೂ ಯಾವುದೇ ನೌಕರರಿಗೆ ಸಂಬಳ ಕಡಿತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement