ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬೆಂಗಳೂರು: ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಅಪಾರ ಅಭಿಮಾನಿಗಳನ್ನು ಹೊಂದಿರುವ ಸುಬ್ರಹ್ಮಣ್ಯ ಧಾರೇಶ್ವರ 67ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಗುರುವಾರ (ಏ.25) ಬೆಳಗ್ಗೆ ನಿಧನರಾಗಿದ್ದಾರೆ.
ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಳಗ್ಗೆ 4:30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ ಕುಟುಂಬದ ಸಮೀಪವರ್ತಿ ಮೂಲಗಳು ತಿಳಿಸಿವೆ.
46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ ಅವರು 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

ಸುಬ್ರಹ್ಮಣ್ಯ ಧಾರೇಶ್ವರ 1957ರಂದು ಗೋಕರ್ಣದಲ್ಲಿ ಜನಿಸಿದ್ದರು. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಕೋಟ ‘ಅಮೃತೇಶ್ವರಿ ಮೇಳ’ ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿದ್ದರು. ಸುಮಾರು 400ಕ್ಕಿಂತಲೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್ ಗಳಲ್ಲಿ ಧಾರೇಶ್ವರರ ಭಾಗವತಿಕೆಯ ಧ್ವನಿ ಇದೆ.
ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಸಂಗೀತಾಭ್ಯಾಸವನ್ನೂ ಮಾಡಿದ್ದರು. ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಪದ್ಯದಿಂದ ಸ್ತ್ರೀವೇಷದ ವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಧಾರೇಶ್ವರರ ಕಂಠದಲ್ಲಿ ಯಕ್ಷಗಾನದ ಹಾಡುಗಳಾಗಿ ಮೂಡಿಬಂದಿವೆ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.
ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಸಹಿತ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಧಾರೇಶ್ವರ ಅವರು ಖ್ಯಾತ ಯಕ್ಷಗಾನ ಭಾಗವತರಾದ ನಾರಾಯಣಪ್ಪ ಉಪ್ಪೂರ ಅವರ ಶಿಷ್ಯರಾಗಿದ್ದರು. ಅವರನ್ನು ಸದಾ ಸ್ಮರಿಸುತ್ತಿದ್ದ ಅವರು, ಸಾಧನೆಯ ಮೂಲಕ ಎತ್ತರಕ್ಕೇರಿದವರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ತನ್ನ ಇಂಪಾದ ಕಂಠದಿಂದ ಯಕ್ಷಗಾನ ರಂಗದಲ್ಲಿ ಜನಪ್ರಿಯರಾದವರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement