ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ಬಾಲಕನಿಗೆ ಕಚ್ಚಿದ ಹಾವು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಧಾರವಾಡ ಮೂಲದ ಬಾಲಕನಿಗೆ ಗೋಕರ್ಣದ ಮುಖ್ಯ ಕಡಲತೀರದ ಸಮೀಪ ನಾಗರಹಾವು ಕಡಿದ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಜೀವ ರಕ್ಷಕ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಬಾಲಕನನ್ನು ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದು,ಹೆಚ್ಚಿನ ಚಿಕಿತ್ಸೆಗೆ ಅಂಕೋಲಾ ಆಸ್ಪತ್ರೆಗೆ ಒಯ್ದಿದ್ದಾರೆ ಎಂದು ಹೇಳಲಾಗಿದೆ.
ಧಾರವಾಡ ಮೂಲದ ಬಾಲಕ ಕುಟುಂಬದ ಜೊತೆ ಗೋಕರ್ಣಕ್ಕೆ ಪ್ರವಾಸ ಬಂದಿದ್ದಾಗ ಕಡಲತೀರದ ಸಮೀಪ ತಿರುಗಾಡುತ್ತಿದ್ದ ವೇಳೆ ನಾಗರಹಾವು ಕಡಿದಿದೆ. ಕೂಡಲೇ ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರು ಬಾಲಕನನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಅಂಕೋಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಘಟನೆ ಬಳಿಕ ಉರಗ ತಜ್ಞ ಬಾಬಣ್ಣ ಅವರು ನಾಗರಹಾವನ್ನು ಸೆರೆಹಿಡಿದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement