ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು: ಮಾಹಿತಿ ಸಂಗ್ರಹಿಸಲು ಮುಂದಾದ ಕೇಂದ್ರ

ನವ ದೆಹಲಿ:ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದೆ.‌ ಈಗ ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕಂಡು ಬರಲು ಆರಂಭಿಸಿವೆ. ಲಸಿಕೆ ಪಡೆದವರಲ್ಲಿಯೂ ಕೂಡ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವು ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕುದೃಢಪಟ್ವರೆಷ್ಟು ಎಂದು ಮಾಹಿತಿ ಕಲೆಹಾಕಲು ಮುಂದಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯು ಈ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದು, ಅದಕ್ಕಾಗಿ ಹೊಸ ಅರ್ಜಿ ನಮೂನೆ ಬಿಡುಗಡೆ ಮಾಡಲು ನಿಶ್ಚಯಿಸಿದೆ.‌ ಸದ್ಯ ಕೊರೊನಾ ಟೆಸ್ಟ್ ಮಾಡುವ ವೇಳೆ ಮಾಹಿತಿ ಸಂಗ್ರಹಿಸುವ ಅರ್ಜಿ ನಮೂನೆಯಲ್ಲಿ ಇನ್ನು ಮುಂದೆ ಹೊಸ ಹೊಸ ಕಾಲಂಗಳನ್ನು ಅಳವಡಿಸಲು ನಿರ್ಧರಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ಕೊರೋನಾ ಟೆಸ್ಟ್ ಮಾಡುವ ವೇಳೆ ಈಗಾಗಲೇ ಲಸಿಕೆ ಪಡೆದಿದ್ದೀರಾ? ಲಸಿಕೆ ಪಡೆದ ಮೇಲೆ ಕೊರೊನಾ ಪಾಸಿಟಿವ್ ಬಂದಿದೆಯೇ ? ಯಾವ ಕೊರೋನ ಲಸಿಕೆ ಪಡೆದಿದ್ದೀರಿ? (ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್) ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಲಾಗುತ್ತದೆ.
ಮಂಗಳವಾರ 1,15,736 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 59,856 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,28,01,785ಕ್ಕೆ ಏರಿಕೆ ಆಗಿದೆ.‌ ಮಂಗಳವಾರ ಒಂದೇ ದಿನ ಕೊರೋನಾಗೆ 630 ಜನರು ಮೃತಪಟ್ಟಿದ್ದಾರೆ. ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,66,177ಕ್ಕೆ ಏರಿಕೆ ಆಗಿದೆ.
ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇಕಡಾ 90ರಷ್ಟು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್‌ಗಡ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡು ಬರುತ್ತಿವೆ. ಈ‌ ಹಿನ್ನೆಲೆಯಲ್ಲಿ ಈ 11 ರಾಜ್ಯಗಳ ಆರೋಗ್ಯ ಸಚಿವ ಜೊತೆ ಮಂಗಳವಾರ (ಏಪ್ರಿಲ್ 6) ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಭೆ ನಡೆಸಿದ್ದಾರೆ.‌ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಹಾಕುವ ಕೆಲಸವನ್ನು ಕೂಡ ತೀವ್ರಗೊಳಿಸಲಾಗುತ್ತದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ