ತಿರುಪತಿ ದೇವಸ್ಥಾನದ ಉಚಿತ ದರ್ಶನ ಟಿಕೆಟ್‌ ಈ ದಿನದಿಂದ ಬಂದ್‌..

ಆಂಧ್ರಪ್ರದೇಶದಲ್ಲಿ ಕೊವಿಡ್‌-19 ಪ್ರಕರಣಗಳ ಉಲ್ಬಣದಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಏಪ್ರಿಲ್ 12 ರಿಂದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಉಚಿತ ಸರ್ವ ದರ್ಶನ ಟಿಕೆಟ್ಟುಗಳನ್ನು ಅಮಾನತುಗೊಳಿಸುವುದಾಗಿ (ಸಸ್ಪೆಂಡ್‌) ಪ್ರಕಟಿಸಿದೆ.
ಮುಂದಿನ ಆದೇಶ ಮಾಡುವ ವರೆಗೆ ಏಪ್ರಿಲ್ 11 ರ ಸಂಜೆ ವರೆಗೆ ಮಾತ್ರ ಟೋಕನ್ ನೀಡಲಾಗುವುದು ಎಂದು ತಿಳಿಸಿದೆ.
ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಸಮಯ ಸ್ಲಾಟ್ ಟೋಕನ್ನುಗಳಿಗಾಗಿ ಸಾವಿರಾರು ಭಕ್ತರು ಭೂದೇವಿ ಕಾಂಪ್ಲೆಕ್ಸ್ ಮತ್ತು ವಿಷ್ಣು ನಿವಾಸಂನಲ್ಲಿ ಕಾಯಬೇಕಾಗಿರುವುದರಿಂದ, ಕೊವಿಡ್‌ -19 ಪ್ರಕರಣಗಳು ಹರಡುವ ಸಾಧ್ಯತೆಯಿದೆ” ಎಂದು ಟಿಟಿಡಿ ತಿಳಿಸಿದೆ.
ತಿರುಪತಿ ನಗರವು ಇತ್ತೀಚೆಗೆ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಂಡಿದೆ ಎಂದು ಟಿಟಿಡಿ ತಿಳಿಸಿದೆ. ಬುಧವಾರ, ಆಂಧ್ರ ಚಿತ್ತೂರು ಜಿಲ್ಲೆಯಲ್ಲಿ 296 ಕೊವಿಡ್‌ -19 ಪ್ರಕರಣಗಳು ಜಿಲ್ಲೆಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 2227ಕ್ಕೆ ಏರಿಕೆ ಮಾಡಿದೆ. ಆಂಧ್ರಪ್ರದೇಶದಲ್ಲಿ ಬುಧವಾರ 2331 ಪ್ರಕರಣಗಳು ಮತ್ತು 11 ಸಾವುಗಳು ದಾಖಲಾಗಿವೆ.
. ದೇವಾಲಯದ ಒಳಗೆ ಪೂಜಾ ಸಮಾರಂಭಗಳು ಎಂದಿನಂತೆ ನಡೆಯಲಿದ್ದು, ಭಕ್ತರಿಗೆ ವಸತಿ ಮತ್ತು ಊಟದ ಹಾಲ್ ಮುಚ್ಚಲಾಗುವುದು ಎಂದು ವರದಿಗಳು ತಿಳಿಸಿವೆ.
ತಿರುಪತಿಯಲ್ಲಿ ದರ್ಶನ ಟಿಕೆಟ್ ಹೊಂದಿರುವ ಭಕ್ತರಿಗೆ ದರ್ಶನಕ್ಕೆ ಹಿಂದಿನ ದಿನ ಮಧ್ಯಾಹ್ನ 1 ಗಂಟೆಯ ನಂತರ ಮಾತ್ರ ಅಲಿಪಿರಿ ಮೂಲಕ ರಸ್ತೆ ಮೂಲಕ ತಿರುಮಲಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಮಾರ್ಚ್‌ನಲ್ಲಿ ಟಿಟಿಡಿ ಪ್ರಕಟಿಸಿತ್ತು.
ಟಿಟಿಡಿಯಿಂದ ನಡೆಸುವ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನವು ವಿಶ್ವದ ಅತ್ಯಂತ ಜನಪ್ರಿಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಕೊವಿಡ್‌-19 ಕಾರಣದಿಂದಾಗಿ ಕಳೆದ ಮಾರ್ಚ್‌ನಿಂದಸುಮಾರು ಎರಡೂವರೆ ತಿಂಗಳುಗಳ ಕಾಲ ಇದನ್ನು ಭಕ್ತರಿಗೆ ಮುಚ್ಚಲಾಗಿತ್ತು, ಜೂನ್ 11 ರಂದು ಮತ್ತೆ ಭಕ್ತರಿಗೆ ತೆರೆಯಿತು.
ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಆರಂಭದಲ್ಲಿ 6,000 ಎಂದು ನಿಗದಿ ಮಾಡಲಾಯಿತು, ಮತ್ತು ನಂತರ ಗರಿಷ್ಠ 12,000ಕ್ಕೆ ಏರಿಸಲಾಯಿತು. ನಿರ್ಬಂಧಗಳನ್ನು ಅಂತಿಮವಾಗಿ ಸಡಿಲಗೊಳಿಸುವುದರೊಂದಿಗೆ, ತಿರುಮಲದಲ್ಲಿ ಈಗ ಪ್ರತಿದಿನ ಸುಮಾರು 50,000 ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕೊವಿಡ್‌ ಕಾರಣದಿಂದ ಆರಂಭದಲ್ಲಿ, ಟಿಟಿಡಿಯು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ, 10 ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪ್ರವೇಶ ನಿರ್ಬಂಧಿಸಿತ್ತು. ಎಂಟು ತಿಂಗಳ ಅಂತರದ ನಂತರ ಡಿಸೆಂಬರ್‌ನಲ್ಲಿ ಈ ನಿಯಮಗಳನ್ನು ಸಡಿಲಿಸಲಾಗಿತ್ತು.
ಮಹಾರಾಷ್ಟ್ರದಲ್ಲಿಯೂ ಕೊವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಶಿರಡಿ ದೇವಾಲಯವನ್ನು ಸೋಮವಾರದಿಂದ ಭಕ್ತರಿಗೆ ಮುಚ್ಚಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ