ಕೊವಿಡ್‌ ಕ್ರಮಕ್ಕೆ ಜನರು ಸಹಕರಿಸದಿದ್ದರೆ ಮತ್ತೆ ಬರಲಿದೆ ಕಠಿಣ ಪರಿಸ್ಥಿತಿ: ಬೊಮ್ಮಾಯಿ ಎಚ್ಚರಿಕೆ

ಹುಮ್ನಾಬಾದ್ : ಜನರ ಸಹಕಾರ ಇದ್ದರೆ ಮಾತ್ರ ಲಾಕ್ಡೌನ್ ಮತ್ತು ನಿರ್ಬಂಧ ಇಲ್ಲದೆ ಕೋವಿಡ್ ನಿಯಂತ್ರಣ ಸಾಧ್ಯ. ಇಲ್ಲದಿದ್ದರೆ ಎಲ್ಲರೂ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಶುಕ್ರವಾರ ಹುಮ್ನಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಕೇವಲ ಸರ್ಕಾರದ ಹೊಣೆಯಲ್ಲ. ಸಾರ್ವಜನಿಕರ ಜವಾಬ್ದಾರಿಯೂ ಹೌದು ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ರಾತ್ರಿ ಕರ್ಪ್ಯೂ ಜಾರಿಗೊಳಿಸಿದ್ದಾರೆ. ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ರಾತ್ರಿ ಕರ್ಫ್ಯೂ ಜಾರಿ ಅನಿವಾರ್ಯವಾಗಿದೆ. ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿರುವ ಜಿಲ್ಲೆಗಳಲ್ಲಿ ನಿಯಂತ್ರಣ ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಷ್ಠಾಕ್ಕೆ ತರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
ಜನರಿಗೆ ಈಗ ಕೋವಿಡ್ ಬಗ್ಗೆ ಹೆಚ್ಚಿಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣ ತಪ್ಪಿದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ನಾವು ಹೇಳುತ್ತೇವೆ. ಸದ್ಯಕ್ಕೆ ನಾವೇ ಪರಿಸ್ಥಿತಿ ನಿಭಾಯಿಸುವ ಸ್ಥಿತಿಯಲ್ಲಿದ್ದೇವೆ. ಆದರೆ ಇದಕ್ಕೆ ಜನರ ಸಹಕಾರ ಅತಿಮುಖ್ಯ. ಜನರ ಸಹಕಾರ ಸಿಕ್ಕಿದ್ದೇ ಆದರೆ ಇದನ್ನು ನಾವು ಯಾವುದೇ ಲಾಕ್ಡೌನ್ ಇಲ್ಲದೆ, ಆರ್ಥಿಕ ನಿರ್ಬಂಧ ಎದುರಿಸದೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಬೊಮ್ಮಾಯಿ ಹೇಳಿದರು.
ರಾತ್ರಿ ವೇಳೆ ಬಾರ್ ಮತ್ತು ಪಬ್ ಗಳನ್ನು ಬಂದ್ ಮಾಡಲಾಗುವುದು. ಆದರೆ ಬಸ್ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾರ್ಯಕ್ರಮಗಳ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬಸವರಾಜ ಎಚ್ಚರಿಕೆ ನೀಡಿದರು

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement