ಮುಂದುವರಿದ ಸಾರಿಗೆ ಮುಷ್ಕರ-ನಿಲ್ಲದ ಹಗ್ಗ ಜಗ್ಗಾಟ

posted in: ರಾಜ್ಯ | 0

ಬೆಂಗಳೂರು: ಒಂದೆಡೆ ರಾಜ್ಯ ಸರ್ಕಾರ ಮುಷ್ಕರ ನಿಷೇಧಿಸಿ ಆದೇಶಿಸಿ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಆರನೇ ವೇತನ ಜಾರಿ ಆಗುವವರೆಗೂ ಮುಷ್ಕರ ಮುಂದುವರಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಆರನೇ ವೇತನ ಜಾರಿ ಅಸಾಧ್ಯ ,ಕೆಲಸಕ್ಕೆ ಹಾಜರಾಗಿ ಎಂದು ಸರ್ಕಾರ ಹೇಳಿದೆ. ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಬೇಡಿಕೆ ಈಡೇರಿಕೆ ಆಗುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಮುಷ್ಕರದ ನಾಲ್ಕನೇ ದಿನವಾಗಿದ್ದು, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಸಾವಿರಾರು ಬಸ್ಸುಗಳ ಪೈಕಿ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿವೆ. ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಬಸ್ಸು, ಆಟೋಗಳು ರಸ್ತೆಗೆ ಇಳಿದಿದ್ದರೂ ಅದಕ್ಕೆ ತಕ್ಕಷ್ಟು ಪ್ರಯಾಣಿಕರು ಸಿಗುತ್ತಿಲ್ಲ.ರೈಲುಗಳು ಮತ್ತು ಬೇರೆ ಬೇರೆ ರಾಜ್ಯದ ಬಸ್ಸುಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರು ಬಿಟ್ಟರೆ ಸ್ಥಳೀಯವಾಗಿ ಬಸ್ಸುಗಳಲ್ಲಿ ಸಂಚರಿಸುವ ಜನರ ಸಂಖ್ಯೆ ಶನಿವಾರ ಬೆಳಿಗ್ಗೆ ವಿರಳವಾಗಿಯೇ ಇದೆ. ಮೆಟ್ರೋ ರೈಲುಗಳಲ್ಲಿ ಜನದಟ್ಟಣೆ ಜಾಸ್ತಿಯಿದೆ.
ಸಾರಿಗೆ ನಿಗಮ ಬಸ್ಸುಗಳು ರಸ್ತೆಗಿಳಿಯುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇವುಗಳ ಸಂಖ್ಯೆ ಸಾರಿಗೆ ಪರಿಸ್ಥಿತಿ ಸುಧಾರಿಸುವಷ್ಟರ ಮಟ್ಟಿಗೆ ಇಲ್ಲ. ಆದರೂ ಸರ್ಕಾರ ಒಂದೆಡರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಕೆಲಸಕ್ಕೆ ಹಾರಜರಾಗಬಹುದು ಎಂದು ನಿರೀಕ್ಷಿಸುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ